ತೈಲ ಬೆಲೆ ಇಳಿಕೆ, ಮಾರುಕಟ್ಟೆ ಚೇತರಿಕೆ: 5 ದಿನಗಳ ಯುದ್ಧ ವಿರಾಮದ ಹಿಂದಿದೆ ಟ್ರಂಪ್​ TACO ಥಿಯರಿ! ಇದೇ ನೋಡಿ ಅಸಲಿ ಆಟ...Donald Trump

ತೈಲ ಬೆಲೆ ಇಳಿಕೆ, ಮಾರುಕಟ್ಟೆ ಚೇತರಿಕೆ: 5 ದಿನಗಳ ಯುದ್ಧ ವಿರಾಮದ ಹಿಂದಿದೆ ಟ್ರಂಪ್​ TACO ಥಿಯರಿ! ಇದೇ ನೋಡಿ ಅಸಲಿ ಆಟ...Donald Trump
ತೈಲ ಬೆಲೆ ಇಳಿಕೆ, ಮಾರುಕಟ್ಟೆ ಚೇತರಿಕೆ: 5 ದಿನಗಳ ಯುದ್ಧ ವಿರಾಮದ ಹಿಂದಿದೆ ಟ್ರಂಪ್​ TACO ಥಿಯರಿ! ಇದೇ ನೋಡಿ ಅಸಲಿ ಆಟ...Donald Trump
Published on

ಪ್ರಮುಖ ಮುಖ್ಯಾಂಶಗಳು

  • ಏನಿದು 'TACO'? ವಾಲ್ ಸ್ಟ್ರೀಟ್ ಹೂಡಿಕೆದಾರರು ಟ್ರಂಪ್ ನಡೆಯನ್ನು ಹೀಗೆ ಕರೆಯುತ್ತಿರುವುದೇಕೆ?
  • ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿದ್ದಾರೆ
  • ತಮ್ಮ ಘೋಷಣೆ ಅಪಾಯಕಾರಿ ಹಂತಕ್ಕೆ ತಲುಪುತ್ತಿದ್ದಂತೆ ಹೆದರಿ ತಕ್ಷಣವೇ ಹಿಂದೆ ಸರಿಯುವುದು ಟ್ರಂಪ್​ ಚಾಳಿ
Donald Trump : ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿದ್ದಾರೆ. ದಿಢೀರನೇ ಏನಾದರೊಂದು ಘೋಷಣೆ ಮಾಡುವುದು, ತಮ್ಮ ಘೋಷಣೆ ಅಪಾಯಕಾರಿ ಹಂತಕ್ಕೆ ತಲುಪುತ್ತಿದ್ದಂತೆ ಹೆದರಿ ತಕ್ಷಣವೇ ಹಿಂದೆ ಸರಿಯುವುದು. ಇದೀಗ ಇರಾನ್​ ವಿಚಾರದಲ್ಲೂ ಇದು ನಡೆದಿದೆ. ಏಕಾಏಕಿ ಇರಾನ್​ ಮೇಲೆ ಸಮರ ಸಾರಿದ ಟ್ರಂಪ್​ ಇದೀಗ ಐದು ದಿನಗಳ ಕಾಲ ಯುದ್ಧಕ್ಕೆ ವಿರಾಮ ಹೇಳಿದ್ದಾರೆ.
ಅಂದಹಾಗೆ, ಟ್ರಂಪ್​ ಅವರ ಈ ನಡೆಯನ್ನು ಅಮೆರಿಕದ ವಾಲ್​ ಸ್ಟ್ರೀಟ್​ ಮಾರುಕಟ್ಟೆಯ ವಿಶ್ಲೇಷಕರು TACO ಎಂದು ಕರೆಯುಯುತ್ತಾರೆ. ಟ್ರಂಪ್​ ಅವರ ಅನಿರೀಕ್ಷಿತ ನಿರ್ಧಾರಗಳನ್ನು ವಿವರಿಸುವ ಒಂದು ಕುತೂಹಲಕಾರಿ ಸಂಕ್ಷಿಪ್ತ ರೂಪವಾಗಿದೆ. "ಟ್ರಂಪ್ ಯಾವಾಗಲೂ ಕೊನೆಯ ಕ್ಷಣದಲ್ಲಿ ಹೆದರಿ ಹಿಂದೆ ಸರಿಯುತ್ತಾರೆ (Trump Always Chickens Out )" ಎಂಬುದು ಇದರ ಅರ್ಥವಾಗಿದೆ. ಈ TACO ಪದಕ್ಕೆ ಇನ್ನೂ ಒಂದು ಅರ್ಥವಿದೆ. ಅದೇನೆಂದರೆ, "ಟ್ರಂಪ್ ಘೋಷಿಸುತ್ತಾರೆ, ಪದೇ ಪದೇ ರದ್ದುಗೊಳಿಸುತ್ತಾರೆ" (Trump Announces, Cancels Often) ಎಂಬುದಾಗಿದೆ.
ಅಂದಹಾಗೆ, ಇರಾನ್ ಮೇಲಿನ ಮಿಲಿಟರಿ ದಾಳಿಯನ್ನು ಕೊನೆಯ ಕ್ಷಣದಲ್ಲಿ ಐದು ದಿನಗಳ ಕಾಲ ಮುಂದೂಡಿರುವ ಟ್ರಂಪ್ ಅವರ ನಡೆ, ಜಾಗತಿಕ ಹೂಡಿಕೆದಾರರಲ್ಲಿ ಭಾರಿ ಗೊಂದಲ ಮತ್ತು ನಿರಾಳತೆ ಎರಡನ್ನೂ ಏಕಕಾಲಕ್ಕೆ ತಂದಿದೆ. ಅಮೆರಿಕದ ವಿದೇಶಾಂಗ ನೀತಿಯು ಸ್ಥಿರವಾಗಿರದೆ, ದಿಢೀರ್ ಬದಲಾವಣೆಗಳಿಗೆ ಒಳಗಾಗುವುದರಿಂದ ಜಾಗತಿಕ ಮಾರುಕಟ್ಟೆಗಳು ಹೇಗೆ ಏರಿಳಿತ ಕಾಣುತ್ತಿವೆ ಎಂಬುದನ್ನು ಈ ಪದವು ವ್ಯಂಗ್ಯವಾಗಿ ಮತ್ತು ಮಾರ್ಮಿಕವಾಗಿ ಸೂಚಿಸುತ್ತದೆ.

ಮತ್ತೆ ಪುಟಿದೆದ್ದ ಮಾರುಕಟ್ಟೆ

ಇರಾನ್ ಜೊತೆಗಿನ ಮಾತುಕತೆ "ಫಲಪ್ರದವಾಗಿದೆ" ಎಂದು ಹೇಳುತ್ತಾ, ಐದು ದಿನಗಳ ಕಾಲ ಮಿಲಿಟರಿ ದಾಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್​ ಟ್ರಂಪ್​​ ಘೋಷಿಸಿದ್ದಾರೆ. ಈ ಒಂದು ನಿರ್ಧಾರ ಜಾಗತಿಕ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಯನ್ನೇ ತಂದಿದೆ. ಯುದ್ಧದ ಭೀತಿಯಿಂದ ಗಗನಕ್ಕೇರಿದ್ದ ಕಚ್ಚಾ ತೈಲದ ಬೆಲೆಗಳು ಟ್ರಂಪ್​ ಅವರ ಒಂದೇ ಒಂದು ಘೋಷಣೆಯಿಂದ ದಿಢೀರ್ ಕುಸಿತ ಕಂಡಿವೆ. ಇಷ್ಟು ದಿನ ಆತಂಕದಲ್ಲಿದ್ದ ಹೂಡಿಕೆದಾರರು ಇದೀಗ ನಿರಾಳರಾಗಿದ್ದಾರೆ. ಟ್ರಂಪ್​ ಅವರ ಘೋಷಣೆಯ ಪರಿಣಾಮವಾಗಿ ಜಾಗತಿಕ ಷೇರು ಮಾರುಕಟ್ಟೆಗಳು ಪುಟಿದೆದ್ದಿವೆ ಅಂದರೆ, ಬಹುತೇಕ ಕಂಪನಿಗಳ ಷೇರುಗಳ ಬೆಲೆ ಏರಿಕೆಯಾಗಿದ್ದು, ಮಾರುಕಟ್ಟೆ ಸಹಜ ಸ್ಥಿತಿಗೆ ಮರಳಿದೆ. ಇದು ಹೂಡಿಕೆದಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಯುದ್ಧದ ತೀವ್ರತೆ ಕಡಿಮೆಯಾಗುವ ಸೂಚನೆ ಸಿಗುತ್ತಿದ್ದಂತೆ ಹೂಡಿಕೆದಾರರು ಮತ್ತೆ ಧೈರ್ಯದಿಂದ ತಮ್ಮ ವ್ಯವಹಾರಗಳನ್ನು ನಡೆಸಲು ಮುಂದಾಗಿದ್ದಾರೆ. ಇದಕ್ಕೆಲ್ಲ ಕಾರಣ ಟ್ರಂಪ್​ ಅವರ ತಾತ್ಕಾಲಿಕ ವಿರಾಮ ಘೋಷಣೆಯೇ ಕಾರಣ.
ಟ್ರಂಪ್​ ಅವರ ಈ ಒಂದು ನಿರ್ಧಾರ ಅವರ ಹಳೆಯ ಚಾಳಿಯನ್ನು ನೆನಪಿಸುತ್ತದೆ. ಅದೇನೆಂದರೆ, ಮೊದಲು ಉದ್ವಿಗ್ನತೆಯನ್ನು ಹೆಚ್ಚಿಸಿ ನಂತರ ಹಠಾತ್ತಾಗಿ ಹಿಂದೆ ಸರಿಯುವುದೇ ಟ್ರಂಪ್​​ ಅವರು ಕೆಟ್ಟ ಅಭ್ಯಾಸವಾಗಿದೆ. ಈ ಹಳೆಯ ಚಾಳಿಯನ್ನು ಮಾರುಕಟ್ಟೆ ವಿಶ್ಲೇಷಕರು 'TACO' ಎಂದು ಕರೆಯುತ್ತಾರೆ.

ಏನಿದು TACO?

TACO ಪದದ ಪೂರ್ಣ ವಾಕ್ಯ Trump Always Chickens Out ಎಂದು. ಇದರ ಅರ್ಥ "ಟ್ರಂಪ್ ಯಾವಾಗಲೂ ಕೊನೆಯ ಕ್ಷಣದಲ್ಲಿ ಹೆದರಿ ಹಿಂದೆ ಸರಿಯುತ್ತಾರೆ" ಎನ್ನುವುದಾಗಿದೆ. ಟ್ರಂಪ್ ಅವರ ನಿರ್ಧಾರಗಳನ್ನು ಟೀಕಿಸುವ ಅಥವಾ ವ್ಯಂಗ್ಯ ಮಾಡುವ ಒಂದು ವಾಕ್ಯ ಇದಾಗಿದೆ. ಇಲ್ಲಿ "Chicken out" ಎನ್ನುವುದು ಒಂದು ಇಂಗ್ಲಿಷ್ ರೂಢಿಮಾತು. ಯಾವುದಾದರೂ ಒಂದು ಕಠಿಣ ನಿರ್ಧಾರ ಅಥವಾ ಕೆಲಸ ಮಾಡಲು ಹೋದಾಗ, ಕೊನೆಯ ಕ್ಷಣದಲ್ಲಿ ಭಯದಿಂದ ಅಥವಾ ಆತಂಕದಿಂದ ಆ ಕೆಲಸವನ್ನು ಮಾಡದೆ ಹಿಂದೆ ಸರಿಯುವುದನ್ನು ಹೀಗೆ ಕರೆಯುತ್ತಾರೆ.

ಈ ಪದವನ್ನು ಬಳಸಲು ಕಾರಣ ಏನು?

ಅಂದಹಾಗೆ, ವಾಲ್‌ ಸ್ಟ್ರೀಟ್ ವಿಶ್ಲೇಷಕರು ಈ ಪದವನ್ನು ಬಳಸಲು ಕಾರಣವೇನೆಂದರೆ, ಟ್ರಂಪ್ ಅವರು ಮೊದಲು ಯುದ್ಧ ಅಥವಾ ಕಠಿಣ ಆರ್ಥಿಕ ನಿರ್ಬಂಧಗಳಂತಹ ದೊಡ್ಡ ಘೋಷಣೆಗಳನ್ನು ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸುತ್ತಾರೆ ಆದರೆ, ಕಾರ್ಯರೂಪಕ್ಕೆ ತರುವ ಸಮಯ ಬಂದಾಗ ಹಠಾತ್ತಾಗಿ ಅದನ್ನು ರದ್ದುಗೊಳಿಸಿ ಸಂಧಾನಕ್ಕೆ ಮುಂದಾಗುತ್ತಾರೆ. ಈ "ಘೋಷಿಸಿ ಹಿಂದೆ ಸರಿಯುವ" ಗುಣವನ್ನು ಈ ವಾಕ್ಯವು ಮಾರ್ಮಿಕವಾಗಿ ತಿಳಿಸುತ್ತದೆ.
ಅಂದಹಾಗೆ ಈ TACO ಪದವು ಅಮೆರಿಕ ಅಧ್ಯಕ್ಷರ ವ್ಯಾಪಾರ ಸಮರಗಳ ಸಮಯದಲ್ಲಿ ಹುಟ್ಟಿಕೊಂಡಿತು. ಈ ಹಿಂದೆ ಟ್ರಂಪ್​ ಅವರು ವಿವಿಧ ದೇಶಗಳ ಮೇಲೆ ಭಾರಿ ತೆರಿಗೆ ವಿಧಿಸುವುದಾಗಿ ಘೋಷಿಸಿ ಹೆದರಿಸಿದ್ದನ್ನು ನಾವಿಲ್ಲಿ ನೆನೆಯಬಹುದು. ಟ್ರಂಪ್ ಅವರು ಮೊದಲು ಆಕ್ರಮಣಕಾರಿ ಎಚ್ಚರಿಕೆಗಳನ್ನು ನೀಡಿ ಮಾರುಕಟ್ಟೆಯಲ್ಲಿ ಆತಂಕ ಮೂಡಿಸುತ್ತಾರೆ. ಯಾವಾಗ ತಮ್ಮ ನಿರ್ಧಾರ ಜಾಗತಿಕವಾಗಿ ಅಸ್ಥಿರತೆ ಉಂಟು ಮಾಡುತ್ತಿದೆ ಅನ್ನೋದು ಗೊತ್ತಾದ ಕೂಡಲೇ ಹೆದರಿ, ಹಠಾತ್ತಾಗಿ ಆ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ. 

ಹೂಡಿಕೆದಾರರಿಗೆ TACO ಬಂಡವಾಳ

ಟ್ರಂಪ್​ ಅವರ ಈ ವಿಶಿಷ್ಟ ಚಾಳಿಯನ್ನೇ ಹೂಡಿಕೆದಾರರು ಒಂದು ವ್ಯಾಪಾರ ತಂತ್ರವಾಗಿ ಬಳಸಲಾರಂಭಿಸಿದ್ದಾರೆ. ಟ್ರಂಪ್ ಅವರ ಬೆದರಿಕೆಯಿಂದ ಮಾರುಕಟ್ಟೆ ಕುಸಿದಾಗ ಷೇರುಗಳನ್ನು ಖರೀದಿಸುವುದು ಮತ್ತು ಟ್ರಂಪ್​ ಅವರು ಮೃದು ಧೋರಣೆ ತಳೆದು ಮಾರುಕಟ್ಟೆ ಚೇತರಿಸಿಕೊಂಡಾಗ ಅದೇ ಷೇರುಗಳನ್ನು ಲಾಭಕ್ಕೆ ಮಾರಾಟ ಮಾಡುವುದು ರೂಢಿಯಾಗಿದೆ. 2026ರ ವೇಳೆಗೆ ಈ ಪದವು ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ, ಇರಾನ್ ಸಂಘರ್ಷದಂತಹ ವಿದೇಶಾಂಗ ನೀತಿಗಳಿಗೂ ಅನ್ವಯವಾಗುತ್ತಿರುವುದು ಗಮನಾರ್ಹ.

TACO ಈಗ ಏಕೆ ಪ್ರಸ್ತುತ?

ಪ್ರಸ್ತುತ ಮಧ್ಯಪ್ರಾಚ್ಯ ಬಿಕ್ಕಟ್ಟು TACO ಮಾದರಿಗೆ ಬಹುತೇಕ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಟ್ರಂಪ್, ಇಸ್ರೇಲ್ ಜೊತೆ ಸೇರಿ ಫೆ.28ರಂದು ಇರಾನ್ ಮೇಲೆ ಸಮರ ಸಾರಿದರು. ಇದರಿಂದ ಕೊಲ್ಲಿ ರಾಷ್ಟ್ರಗಳಲ್ಲಿ ಭೀಕರ ಯುದ್ಧ ಶುರುವಾಯಿತು. ಈ ಯುದ್ಧದ ಪರಿಣಾಮ ಇಂಧನ ಮೂಲಸೌಕರ್ಯಕ್ಕೆ ಬೆದರಿಕೆಗಳು ಉಂಟಾದವು. ಅಲ್ಲದೆ, ಅಮೆರಿಕ ದಾಳಿಗೆ ಪ್ರತೀಕಾರವಾಗಿ ಇರಾನ್​ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿತು. ಇದರಿಂದ ಇಂಧನ ಸಾಗಟಕ್ಕೆ ಬ್ರೇಕ್​ ಬಿದ್ದಿತ. ಈ ಎಲ್ಲ ಅಡೆತಡೆಗಳ ನಡುವೆ ಕಚ್ಛಾ ತೈಲವು ಬ್ಯಾರೆಲ್‌ಗೆ 100 ಡಾಲರ್​ ದಾಟಿತು. ಇದರಿಂದ ಜಾಗತಿಕ ಷೇರುಪೇಟೆ ಕುಸಿತ ಕಂಡಿದ್ದು, ತೈಲ ಬೆಲೆ ಏರಿಕೆ ಹಣದುಬ್ಬರದ ಭೀತಿಗೆ ಕಾರಣವಾಯಿತು. ಹಲವಾರು ದೇಶಗಳು ವಾರಕ್ಕೆ ಕೇವಲ ನಾಲ್ಕು ದಿನಗಳ ಕೆಲಸ ಮಾಡುವಂತಹ ತೀವ್ರ ಕ್ರಮಗಳನ್ನು ತೆಗೆದುಕೊಂಡವು. ಅಲ್ಲದೆ, ಜಾಗತಿಕವಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ಅಡಚಣೆ ಉಂಟಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಟ್ರಂಪ್ ಅವರು ದಿಢೀರನೇ ಐದು ದಿನಗಳ ಯುದ್ಧ ವಿರಾಮವನ್ನು ಘೋಷಿಸಿದರು. ಇರಾನ್​ ಮತ್ತು ಅಮೆರಿಕ ನಡುವೆ ಮಾತುಕತೆ ಆರಂಭವಾಗಿದೆ ಎಂಬ ಸೂಚನೆ ಸಿಕ್ಕಿತು. ಇದರಿಂದ ಮಾರುಕಟ್ಟೆಗಳು ತ್ವರಿತವಾಗಿ ಚೇತರಿಸಿಕೊಂಡವು ಮತ್ತು ಷೇರುಗಳು ಏರಿದವು. ಇದರಿಂದ ತೈಲ ಬೆಲೆಗಳು ಕುಸಿಯಿತು. 

ಮಾರುಕಟ್ಟೆ ಹೇಗೆ TACO ಅನ್ನು ಅರ್ಥೈಸುತ್ತದೆ?

ಅಂದಹಾಗೆ, ಹೂಡಿಕೆದಾರರಿಗೆ TACO ಎಂಬ ಪದ ಕೇವಲ ತಮಾಷೆಯಲ್ಲ, ಬದಲಾಗಿ ಒಂದು ಚೌಕಟ್ಟು. ಏಕೆಂದರೆ, ಟ್ರಂಪ್ ಅವರು ಆರ್ಥಿಕ ಒತ್ತಡಕ್ಕೆ ಯಾವಾಗಲೂ ಸೂಕ್ಷ್ಮವಾಗಿರುತ್ತಾರೆ. ಅಂದರೆ, ಅರ್ಥಿಕ ಸ್ಥಿತಿ ಹದಗೆಡುತ್ತಿದ್ದಂತೆ ತಮ್ಮ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ. ಇದರಿಂದ ಷೇರುಗಳಲ್ಲಿ ಏರಿಕೆಯಾಗುತ್ತದೆ ಮತ್ತು ಮಾರುಕಟ್ಟೆ ಸಹಜ ಸ್ಥಿತಿಗೆ ಬರುತ್ತದೆ. ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಇರಾನ್ ಮಾತುಕತೆಗಳನ್ನು ನಿರಾಕರಿಸಿದೆ. ಇದರಿಂದ ಯುದ್ಧದ ಅವ್ಯವಸ್ಥೆ ಇನ್ನಷ್ಟು ಹೆಚ್ಚಾಗುತ್ತದೆ. ಈಗಾಗಲೇ ಹಾರ್ಮುಜ್ ಜಲಸಂಧಿ ಅಸ್ಥಿರವಾಗಿದೆ ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ಹಾನಿಯು ಬೆಲೆಗಳನ್ನು ಇನ್ನಷ್ಟು ಹೆಚ್ಚಿಸಬಹುದು. ಹೀಗಾಗಿ, ಸುಂಕಗಳಿಗಿಂತ ಭಿನ್ನವಾಗಿ, ಯುದ್ಧವು ಯಾವಾಗಲೂ ಸುಲಭವಾದ ನಿರ್ಗಮನ ಹೊಂದಿರುವುದಿಲ್ಲ. ಅಂದರೆ, ಸುಂಕ ತಮ್ಮ ವೈಯಕ್ತಿಕ ನಿರ್ಧಾರವಾಗಿರುತ್ತದೆ. ಆದರೆ, ಯುದ್ಧ ಎರಡು ದೇಶಗಳ ನಡುವಿನ ನಿರ್ಧಾರ. ಹೀಗಾಗಿ ಯುದ್ಧದಿಂದ ಹೊರಬರುವುದು ಅಷ್ಟು ಸುಲಭವಲ್ಲ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ. ಸಂಘರ್ಷ ಹೀಗೆ ಮುಂದುವರಿದು ತೈಲ ಬೆಲೆಗಳು ಹೆಚ್ಚಾದರೆ ಮತ್ತು ಹಣದುಬ್ಬರ ಮುಂದುವರಿದರೆ TACO ವ್ಯಾಪಾರವು ಕೆಲಸ ಮಾಡದಿರಬಹುದು ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net