90ನೇ ವಯಸ್ಸಿನಲ್ಲಿ ಸಂಗೀತ ಕ್ಷೇತ್ರದ ಸಾಧನೆಗಾಗಿ ಮೊದಲ ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾದ ದಲೈಲಾಮಾ | Dalai Lama

ಆದ್ಯಾತ್ಮಿಕ ಬೌದ್ಧಗುರು ದಲೈಲಾಮಾ
ಆದ್ಯಾತ್ಮಿಕ ಬೌದ್ಧಗುರು ದಲೈಲಾಮಾ
Published on
ಲಾಸ್​ ಏಂಜಲೀಸ್: ಅಮೆರಿಕಾದ ಲಾಸ್ ಏಂಜಲೀಸ್​ನಲ್ಲಿ ನಡೆದ 68ನೇ ಗ್ರ್ಯಾಮಿ ಪ್ರಶಸ್ತಿಗಳ  ಪ್ರಧಾನ ಸಮಾರಂಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ 90ನೇ ವಯಸ್ಸಿನಲ್ಲಿ ಇದೇ ಮೊದಲ ಬಾರಿಗೆ ಆದ್ಯಾತ್ಮಿಕ ಬೌದ್ಧಗುರು ದಲೈಲಾಮಾ ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 
ಅತ್ಯುತ್ತಮ ಆಡಿಯೋ ಪುಸ್ತಕ, ನಿರೂಪಣೆ ಹಾಗೂ ಕಥೆ ಹೇಳುವ ವಿಭಾಗದಲ್ಲಿ ದಲೈಲಾಮಾ ಅವರು ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆಧ್ಯಾತ್ಮಿಕ ಸಂದೇಶಗಳು, ಶಾಂತಿ ಹಾಗೂ ಮಾನವೀಯ ಮೌಲ್ಯಗಳ ಕುರಿತಾದ ಅವರ ಆಡಿಯೋ ಪುಸ್ತಕಕ್ಕಾಗಿ ಈ ಗೌರವ ನೀಡಲಾಗಿದೆ. ಇದೇ ಮೊದಲ ಬಾರಿಗೆ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶಸ್ತಿಗಳಲ್ಲಿ ಆದ್ಯಾತ್ಮಿಕ ಬುಕ್​ಗೆ ಸಂಗೀತ ಗ್ರ್ಯಾಮಿ ಪ್ರಶಸ್ತಿ ನೀಡಿರುವುದು ವಿಶೇಷ.  
ದಲೈ ಲಾಮಾ ಅವರ ಗ್ರ್ಯಾಮಿ ಪ್ರಶಸ್ತಿಯು ಅವರ ಮೆಡಿಟೇಷನ್ಸ್: ದಿ ರಿಫ್ಲೆಕ್ಷನ್ಸ್ ಆಫ್ ಹಿಸ್ ಹೋಲಿನೆಸ್ ದಿ ದಲೈ ಲಾಮಾ ಕೃತಿಗೆ ಸಂದಿದೆ. ಇದು ಸಂಗೀತ ಮತ್ತು ಅರ್ಥಪೂರ್ಣ ಸಂದೇಶಗಳೊಂದಿಗೆ ಧ್ಯಾನಸ್ಥ ಒಳನೋಟಗಳ ಸರಣಿಯನ್ನು ನೀಡುತ್ತದೆ. ಈ ರೆಕಾರ್ಡಿಂಗ್ ಯೂಟ್ಯೂಬ್, ಅಮೆಜಾನ್ ಮ್ಯೂಸಿಕ್​ ಹಾಗೂ ಸ್ಪೊಟಿಫೈ ಸೇರಿ ಆನ್​ಲೈನ್​ ವೇದಿಕೆಗಳಲ್ಲಿ ಲಭ್ಯವಿದೆ.
ಇನ್ನೂ ಈ ಕುರಿತು ಎಕ್ಸ್​ನಲ್ಲಿ ಪ್ರತಿಕ್ರಿಯಿಸಿರುವ ದಲೈಲಾಮಾ, ಈ ಮನ್ನಣೆಯನ್ನು ಕೃತಜ್ಞತೆ ಮತ್ತು ನಮ್ರತೆಯಿಂದ ಸ್ವೀಕರಿಸುತ್ತೇನೆ. ಇದು ವೈಯಕ್ತಿಕ ವಿಷಯವಲ್ಲ, ನಮ್ಮ ಸಾರ್ವಜನಿಕ ಹಂಚಿಕೆಯ ಸಾರ್ವಜನಿಕ ಜವಾಬ್ದಾರಿಯಾಗಿದೆ. ಎಂಟು ಶತಕೋಟಿ ಮಾನವರ ಸಾಮೂಹಿಕ ಯೋಗಕ್ಷೇಮಕ್ಕೆ ಶಾಂತಿ, ಸಹಾನುಭೂತಿ, ಪರಿಸರದ ಬಗ್ಗೆ ಕಾಳಜಿ ಹಾಗೂ ಮಾನವೀಯತೆಯ ಏಕತೆಯ ತಿಳುವಳಿಕೆ ಅತ್ಯಗತ್ಯ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ಈ ಗ್ರ್ಯಾಮಿ ಪ್ರಶಸ್ತಿಯ ಮನ್ನಣೆ, ಈ ಸಂದೇಶಗಳನ್ನು ಹೆಚ್ಚು ವ್ಯಾಪಕವಾಗಿ ಹರಡಲು ಸಹಾಯ ಮಾಡುತ್ತದೆ. ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net