ದಿವಾಳಿಯಂಚಿಗೆ ತಲುಪಿದ ಬ್ಯಾಂಕುಗಳು!

ಒಂದು ಕಾಲದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಬಡತನ ನಿಮೂಲನೆಯ ಯಶಸ್ವಿ ಮಾದರಿ ಎಂದು ಪರಿಗಣಿಸಲಾಗಿದ್ದ ಬಾಂಗ್ಲಾದೇಶವು ಈಗ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. 2024ರಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಶೇಖ್ ಹಸೀನಾ ಅವರ ಸರ್ಕಾರ ಪತನಗೊಂಡ ಬೆನ್ನಲ್ಲೇ, ವರ್ಷಗಳಿಂದ ನಡೆಯುತ್ತಿದ್ದ ಭ್ರಷ್ಟಾಚಾರ ಮತ್ತು ಹಣಕಾಸಿನ ಅಕ್ರಮಗಳ ಪರಿಣಾಮಗಳು ಈಗ ಹೊರಬರಲಾರಂಭಿಸಿವೆ.
ದಿವಾಳಿಯಂಚಿಗೆ ತಲುಪಿದ ಬ್ಯಾಂಕುಗಳು!
WEB
Published on: 

ಒಂದು ಕಾಲದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಬಡತನ ನಿಮೂಲನೆಯ ಯಶಸ್ವಿ ಮಾದರಿ ಎಂದು ಪರಿಗಣಿಸಲಾಗಿದ್ದ ಬಾಂಗ್ಲಾದೇಶವು ಈಗ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. 2024ರಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಶೇಖ್ ಹಸೀನಾ ಅವರ ಸರ್ಕಾರ ಪತನಗೊಂಡ ಬೆನ್ನಲ್ಲೇ, ವರ್ಷಗಳಿಂದ ನಡೆಯುತ್ತಿದ್ದ ಭ್ರಷ್ಟಾಚಾರ ಮತ್ತು ಹಣಕಾಸಿನ ಅಕ್ರಮಗಳ ಪರಿಣಾಮಗಳು ಈಗ ಹೊರಬರಲಾರಂಭಿಸಿವೆ. ಈ ಬೆಳವಣಿಗೆಗಳ ಕುರಿತಾದ ವಿವರ ಇಲ್ಲಿದೆ.

ಒಂದು ಕಾಲದಲ್ಲಿ ದಕ್ಷಿಣ ಏಷ್ಯಾದ ಆರ್ಥಿಕ ವಿಸ್ಮಯ, ಕ್ಷಿಪ್ರ ಕೈಗಾರಿಕಾ ಬೆಳವಣಿಗೆ ಮತ್ತು ಬಡತನ ನಿಮೂಲನೆಯ ಯಶಸ್ವಿ ಮಾದರಿ ಎಂದು ಜಾಗತಿಕ ಮಟ್ಟದಲ್ಲಿ ಶ್ಲಾಘಿಸಲ್ಪಟ್ಟಿದ್ದ ಬಾಂಗ್ಲಾದೇಶವು ಇಂದು ಅಭೂತಪೂರ್ವ ಆರ್ಥಿಕ ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿದೆ. 2024ರ ಆಗಸ್ಟ್​ನಲ್ಲಿ ನಡೆದ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯ ಪರಿಣಾಮವಾಗಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರ ಪತನಗೊಂಡ ನಂತರ, ಕಳೆದ ಒಂದೂವರೆ ದಶಕದಿಂದ ವ್ಯವಸ್ಥೆಯೊಳಗೆ ಮುಚ್ಚಿಡಲಾಗಿದ್ದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಹಣಕಾಸಿನ ಅಕ್ರಮಗಳ ಕರಾಳ ಮುಖ ಈಗ ಅನಾವರಣಗೊಳ್ಳುತ್ತಿದೆ. ಪ್ರಸ್ತುತ ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಬ್ಯಾಂಕಿಂಗ್ ಕ್ಷೇತ್ರವು ಸಂಪೂರ್ಣವಾಗಿ ಕುಸಿಯುವ ಮತ್ತು ದಿವಾಳಿಯಾಗುವ ಅಂಚಿಗೆ ಬಂದು ನಿಂತಿದೆ.

ಬಾಂಗ್ಲಾದೇಶದ ಬ್ಯಾಂಕಿಂಗ್ ವಲಯದ ದುಸ್ಥಿತಿಗೆ ಅಲ್ಲಿನ ವಸೂಲಾಗದ ಸಾಲಗಳ (Non-Performing Loans-NPA) ಪ್ರಮಾಣವೇ ಸಾಕ್ಷಿಯಾಗಿದೆ. ದೇಶದ ಬ್ಯಾಂಕ್​ಗಳು ನೀಡಿರುವ ಒಟ್ಟು ಸಾಲದಲ್ಲಿ ವಸೂಲಾಗದ ಸಾಲದ ಪಾಲು ಬರೋಬ್ಬರಿ ಶೇಕಡ 33ರ ಗಡಿಯನ್ನು ತಲುಪಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ. ಅಂದರೆ, ಬ್ಯಾಂಕ್​ಗಳು ವಿತರಿಸಿದ ಪ್ರತಿ ಮೂರು ಟಾಕಾ ಸಾಲದಲ್ಲಿ ಒಂದು ಟಾಕಾ ಮರಳಿ ಬಾರದ ಸ್ಥಿತಿಯಲ್ಲಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಆರ್ಥಿಕ ಅಂಕಿಅಂಶಗಳನ್ನು ತಿರುಚಿ, ‘ಬ್ಯಾಂಕಿಂಗ್ ವಲಯ ಸುಭದ್ರವಾಗಿದೆ’ ಎಂಬ ಕೃತಕ ಚಿತ್ರಣವನ್ನು ನೀಡಲಾಗಿತ್ತು. ಆದರೆ ಆಡಳಿತ ಬದಲಾವಣೆಯ ನಂತರ ಕೇಂದ್ರೀಯ ಬ್ಯಾಂಕ್ (ಬಾಂಗ್ಲಾದೇಶ ಬ್ಯಾಂಕ್) ನಡೆಸಿದ ವಾಸ್ತವಿಕ ಲೆಕ್ಕಪರಿಶೋಧನೆಯಲ್ಲಿ ಈ ಭಯಾನಕ ಸತ್ಯ ಹೊರಬಿದ್ದಿದೆ.

ದೇಶದ ದೊಡ್ಡ ಬ್ಯಾಂಕ್ ಆದ ಇಸ್ಲಾಮಿ ಬ್ಯಾಂಕ್ ಅನ್ನು ಎಸ್. ಆಲಂ ಗ್ರೂಪ್ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಈ ಸಮೂಹದ ಮಾಲೀಕ ಬ್ಯಾಂಕ್​ನ ಸುಮಾರು ಅರ್ಧದಷ್ಟು ಸಾಲವನ್ನು ತನ್ನದೇ ಕಂಪನಿಗಳಿಗೆ ನೀಡಿದ್ದನು. ಸರ್ಕಾರ ಪತನಗೊಂಡ ನಂತರ ಆತ ದೇಶ ಬಿಟ್ಟು ಪರಾರಿಯಾಗಿದ್ದಾನೆ. ಮತ್ತೊಂದೆಡೆ, ವಿದ್ಯುತ್ ಬಿಕ್ಕಟ್ಟು ಮತ್ತು ಗಾರ್ವೆಂಟ್ ಉದ್ಯಮದಲ್ಲಿನ ಮುಷ್ಕರಗಳಿಂದ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ದಿನಗೂಲಿಯನ್ನು ಹೆಚ್ಚಿಸಬೇಕೆಂದು ಗಾರ್ವೆಂಟ್ ನೌಕರರು ಮುಷ್ಕರ ನಡೆಸಿದ್ದಾರೆ. ವಿಶ್ವಬ್ಯಾಂಕ್ ಪ್ರಕಾರ, 2026ರಲ್ಲಿ ಬಾಂಗ್ಲಾದೇಶದಲ್ಲಿ ಸತತ ಮೂರನೇ ವರ್ಷವೂ ಬಡತನ ಹೆಚ್ಚಾಗುವ ಆತಂಕವಿದೆ. 2026ರ ಫೆಬ್ರವರಿ ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ಬಿಎನ್​ಪಿ ಸರ್ಕಾರದ ಮುಂದೆ ಈ ಸವಾಲುಗಳನ್ನು ಎದುರಿಸುವ ಒತ್ತಡವಿದೆ. ಬಿಎನ್​ಪಿ ಸರ್ಕಾರವು ಸಂಕಷ್ಟದಲ್ಲಿರುವ ಸಾಲಗಾರರಿಗೆ ಜೂನ್ ತಿಂಗಳಲ್ಲಿ ಬಡ್ಡಿ ಮರುಹೊಂದಾಣಿಕೆ ಸೌಲಭ್ಯವನ್ನು ಪರಿಚಯಿಸಿದೆ ಮತ್ತು ಸಾಲದ ಬಡ್ಡಿದರಗಳ ಮೇಲೆ ಮಿತಿಗಳನ್ನು ಹೇರಿದೆ; ಇದು ಬ್ಯಾಂಕ್​ಗಳಿಗೆ ಸಾಲದ ಅಪಾಯವನ್ನು ಸರಿಯಾಗಿ ಅಂದಾಜಿಸಿ ದರ ನಿಗದಿಪಡಿಸಲು ಅಡ್ಡಿಯಾಗಿದೆ. ಆದರೆ, ಕಠಿಣ ಸುಧಾರಣೆಗಳನ್ನು ಜಾರಿಗೊಳಿಸಲು ಸರ್ಕಾರ ವಿಳಂಬ ಮಾಡುತ್ತಿದೆ ಎಂಬ ಆರೋಪಗಳನ್ನು ಹಣಕಾಸು ಸಚಿವ ಅಮೀರ್ ಖಸ್ರು ಮಹಮೂದ್ ಚೌಧರಿ ಅಲ್ಲಗಳೆದಿದ್ದಾರೆ. ಕಾರ್ಯಸಾಧುವಾದ ಆಸ್ತಿಗಳಿಗೆ ಚೇತರಿಸಿಕೊಳ್ಳಲು ಅವಕಾಶ ನೀಡುತ್ತಲೇ ಬ್ಯಾಂಕ್​ಗಳ ಬ್ಯಾಲೆನ್ಸ್ ಶೀಟ್​ಗಳನ್ನು (ಆಸ್ತಿ-ಹೊಣೆಗಾರಿಕೆ ಪಟ್ಟಿ) ಸ್ವಚ್ಛಗೊಳಿಸುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ.

ಆದಾಗ್ಯೂ, ರಾಜಕೀಯ ಪ್ರಭಾವಗಳು ಇನ್ನೂ ಆಳವಾಗಿ ಬೇರೂರಿವೆ. ಕೇಂದ್ರೀಯ ಬ್ಯಾಂಕ್​ನ 6.2 ಬಿಲಿಯನ್ ಡಾಲರ್ ಪರಿಹಾರ ಪ್ಯಾಕೇಜ್ ಸಾಕಾಗುತ್ತಿಲ್ಲ. ಮೂಡೀಸ್ ಪ್ರಕಾರ, ಬ್ಯಾಂಕಿಂಗ್ ಕ್ಷೇತ್ರವನ್ನು ನಿಭಾಯಿಸಲು ಜಿಡಿಪಿಯ ಶೇಕಡ 10ರಷ್ಟು ಹೊಸ ಬಂಡವಾಳದ ಅಗತ್ಯವಿದೆ. ಆದರೆ ದೇಶದ ತೆರಿಗೆ ಆದಾಯ ಜಿಡಿಪಿಯ ಕೇವಲ 7%ರಷ್ಟಿದೆ. ಇದರಿಂದ ಸರ್ಕಾರಿ ವೆಚ್ಚಗಳನ್ನು ನಿಭಾಯಿಸಲು ಬ್ಯಾಂಕ್​ಗಳ ಮೇಲಿನ ಅವಲಂಬನೆ ಹೆಚ್ಚಾಗುತ್ತಿದೆ ಮತ್ತು ಹಣದುಬ್ಬರದ ಒತ್ತಡವೂ ಮುಂದುವರಿದಿದೆ. ದೇಶದಲ್ಲಿ ಆರ್ಥಿಕ ಹಿಂಜರಿತದ ಪ್ರಮಾಣವೂ ಗಂಭೀರವಾಗಿದ್ದು, ಬಡತನ ಹೆಚ್ಚುತ್ತಿದೆ. 2026ರಲ್ಲಿ ಜಿಡಿಪಿ ದರ 3.7% ಇರಲಿದೆ ಎಂದು ಅಂದಾಜಿಸಲಾಗಿದೆ. ಇದು ಹಸೀನಾ ಸರ್ಕಾರದ ಪತನಕ್ಕೂ ಮುನ್ನ ಇದ್ದ ಸಾಮಾನ್ಯ 6.5% ದರಕ್ಕಿಂತ ಬಹಳ ಕಡಿಮೆಯಾಗಿದೆ. ಆರ್ಥಿಕ ಶಿಸ್ತು ಮತ್ತು ಪಾರದರ್ಶಕತೆಯನ್ನು ಕಡೆಗಣಿಸಿ ಕೇವಲ ಮೇಲ್ನೋಟದ ಅಭಿವೃದ್ಧಿಯನ್ನು ತೋರಿಸಿದರೆ ಒಂದು ದೇಶದ ಆರ್ಥಿಕತೆ ಎಂತಹ ಪತನಕ್ಕೆ ಸಾಕ್ಷಿಯಾಗಬಹುದು ಎಂಬುದಕ್ಕೆ ಬಾಂಗ್ಲಾದೇಶದ ಪ್ರಸ್ತುತ ಸ್ಥಿತಿ ಜ್ವಲಂತ ಉದಾಹರಣೆಯಾಗಿದೆ. ಬ್ಯಾಂಕಿಂಗ್ ವಲಯದಲ್ಲಿ ಕಠಿಣ ಸುಧಾರಣೆಗಳನ್ನು ತಂದು, ಸುಸ್ತಿದಾರರಿಂದ ಹಣ ವಸೂಲಿ ಮಾಡುವುದು ಮತ್ತು ಜನಸಾಮಾನ್ಯರಲ್ಲಿ ಮತ್ತೆ ವಿಶ್ವಾಸ ಮೂಡಿಸುವುದು ಬಾಂಗ್ಲಾದೇಶದ ಪಾಲಿಗೆ ದೀರ್ಘಕಾಲದ ಮತ್ತು ಕಠಿಣ ಹಾದಿಯಾಗಿದೆ.

ಬಿಕ್ಕಟ್ಟಿಗೆ ಮೂಲ ಕಾರಣಗಳು

ರಾಜಕೀಯ ಪ್ರಭಾವ: ಹಿಂದಿನ ಆಡಳಿತಾರೂಢ ಪಕ್ಷಕ್ಕೆ ನಿಕಟವಾಗಿದ್ದ ಪ್ರಭಾವಿ ಉದ್ಯಮಿಗಳು ಮತ್ತು ಕೆಲವು ದೊಡ್ಡ ಕಾರ್ಪೆರೇಟ್ ಸಮೂಹಗಳು ಬ್ಯಾಂಕ್​ಗಳ ಮೇಲೆ ನಿಯಂತ್ರಣ ಸಾಧಿಸಿದ್ದವು. ಯಾವುದೇ ಸೂಕ್ತ ಭದ್ರತೆ ಅಥವಾ ವಹಿವಾಟಿನ ಅರ್ಹತೆ ಇಲ್ಲದಿದ್ದರೂ, ರಾಜಕೀಯ ಒತ್ತಡ ಹೇರಿ ಸಾವಿರಾರು ಕೋಟಿ ಟಾಕಾ ಸಾಲವನ್ನು ಪಡೆಯಲಾಗಿತ್ತು. ಸಾಲ ಮರುಪಾವತಿಸದಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬ್ಯಾಂಕ್ ಅಧಿಕಾರಿಗಳಿಗೆ ಸಾಧ್ಯವಾಗುತ್ತಿರಲಿಲ್ಲ. ಪರಿಣಾಮವಾಗಿ, ಉದ್ದೇಶಪೂರ್ವಕ ಸುಸ್ತಿದಾರರ (wilful defaulters) ಸಂಖ್ಯೆ ಮಿತಿಮೀರಿ ಬೆಳೆದಿದೆ.

ಬ್ಯಾಂಕ್​ಗಳ ಬಲವಂತದ ಸ್ವಾಧೀನ: ಕೆಲವು ಪ್ರಭಾವಿ ಉದ್ಯಮ ಸಮೂಹಗಳು ಗುಪ್ತಚರ ಸಂಸ್ಥೆಗಳು ಮತ್ತು ಸರ್ಕಾರಿ ಯಂತ್ರದ ನೆರವಿನೊಂದಿಗೆ ದೇಶದ ಪ್ರಮುಖ ಖಾಸಗಿ ಮತ್ತು ಇಸ್ಲಾಮಿಕ್ ಬ್ಯಾಂಕ್​ಗಳ ಆಡಳಿತ ಮಂಡಳಿಯನ್ನು ಬಲವಂತವಾಗಿ ವಶಪಡಿಸಿಕೊಂಡಿದ್ದವು. ಬ್ಯಾಂಕ್​ಗಳ ನಿಯಂತ್ರಣ ಸಿಕ್ಕ ತಕ್ಷಣ, ನಕಲಿ ಕಂಪನಿಗಳ ಹೆಸರಿನಲ್ಲಿ ಸಾಲ ಮಂಜೂರು ಮಾಡಿಕೊಂಡು ಆ ಹಣವನ್ನು ಅಕ್ರಮ ಮಾರ್ಗಗಳ ಮೂಲಕ ವಿದೇಶಗಳಿಗೆ ಸಾಗಿಸ ಲಾಯಿತು. ಇದರಿಂದಾಗಿ ಸಾಮಾನ್ಯ ಜನರು ಉಳಿತಾಯ ಮಾಡಿ ಇಟ್ಟಿದ್ದ ಠೇವಣಿ ಹಣವೂ ಕರಗಿಹೋಯಿತು.

ವಿದೇಶಿ ವಿನಿಮಯ ಕೊರತೆ: ಸಾಲದ ರೂಪದಲ್ಲಿ ಲೂಟಿ ಮಾಡಿದ ಹಣವನ್ನು ಸಿಂಗಾಪುರ, ದುಬೈ, ಲಂಡನ್ ಮತ್ತು ಉತ್ತರ ಅಮೆರಿಕದ ದೇಶಗಳಲ್ಲಿ ಆಸ್ತಿ ಖರೀದಿಸಲು ಬಳಸಲಾಗಿದೆ ಎಂಬ ಗಂಭೀರ ಆರೋಪಗಳಿವೆ. ದೇಶದಿಂದ ಹೊರಹೋದ ಬಂಡವಾಳ ಮರಳಿ ಬಾರದ ಕಾರಣ, ಬಾಂಗ್ಲಾದೇಶದ ವಿದೇಶಿ ವಿನಿಮಯ ಮೀಸಲು (Forex reserves) ತೀವ್ರವಾಗಿ ಕುಸಿದಿದೆ. ಆಮದು ವೆಚ್ಚಗಳನ್ನು ಭರಿಸಲು ಸಹ ಸರ್ಕಾರ ಪರದಾಡುವಂತಾಗಿದೆ.

ದುರ್ಬಲ ನಿಯಂತ್ರಣ ವ್ಯವಸ್ಥೆ: ಬಾಂಗ್ಲಾದೇಶ ಬ್ಯಾಂಕ್​ನ ಸ್ವಾಯತ್ತತೆಯನ್ನು ಕಸಿದುಕೊಳ್ಳಲಾಗಿತ್ತು. ಸುಸ್ತಿದಾರರಿಗೆ ಅನುಕೂಲವಾಗುವಂತೆ ಸಾಲ ಮರುಪಾವತಿ ನಿಯಮಗಳನ್ನು ಪದೇಪದೆ ಸಡಿಲಗೊಳಿಸಲಾಯಿತು. ಸಾಲ ಮರುಪಾವತಿಸದವರನ್ನು ‘ಸುಸ್ತಿದಾರರು’ ಎಂದು ಘೊಷಿಸದಂತೆ ನ್ಯಾಯಾಲಯದ ತಡೆಯಾಜ್ಞೆಗಳನ್ನು ತರುವ ಮೂಲಕ ಕಾನೂನಿನ ಲೋಪದೋಷಗಳನ್ನು ದುರ್ಬಳಕೆ ಮಾಡಿಕೊಳ್ಳಲಾಯಿತು.

ಸರ್ಕಾರ ಕೈಗೊಂಡ ಕ್ರಮಗಳು

  • ಭ್ರಷ್ಟ ಉದ್ಯಮಿಗಳ ಹಿಡಿತದಲ್ಲಿದ್ದ ಹನ್ನೊಂದು ಬ್ಯಾಂಕ್​ಗಳ ಆಡಳಿತ ಮಂಡಳಿಗಳನ್ನು ಬಾಂಗ್ಲಾದೇಶ ಬ್ಯಾಂಕ್ ವಿಸರ್ಜಿಸಿ, ಹೊಸದಾಗಿ ವೃತ್ತಿಪರರನ್ನು ನೇಮಿಸಿದೆ.

  • ಹಣದುಬ್ಬರವನ್ನು ನಿಯಂತ್ರಿಸಲು ಹೊಸ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಲಾಗಿದೆ.

  • ದೇಶದಿಂದ ಅಕ್ರಮವಾಗಿ ವಿದೇಶಕ್ಕೆ ಸಾಗಿಸಲಾದ ಹಣವನ್ನು ಮರಳಿ ತರಲು ಅಂತಾರಾಷ್ಟ್ರೀಯ ಸಂಸ್ಥೆಗಳ ನೆರವು ಪಡೆಯಲಾಗುತ್ತಿದೆ ಮತ್ತು ಸುಸ್ತಿದಾರರ ದೇಶೀಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ.

  • ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ವಿಶ್ವಬ್ಯಾಂಕ್ ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್​ಗಳಿಂದ (ಎಡಿಬಿ) ಹೆಚ್ಚುವರಿ ಆರ್ಥಿಕ ನೆರವು ಪಡೆಯಲು ಮಾತುಕತೆ ನಡೆಸಲಾಗುತ್ತಿದೆ.

ಆರ್ಥಿಕತೆ ಮೇಲಿನ ಪರಿಣಾಮಗಳು

ಬ್ಯಾಂಕಿಂಗ್ ವಲಯದ ಈ ಕುಸಿತವು ಇಡೀ ದೇಶದ ಆರ್ಥಿಕ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿದೆ.

  • ದೇಶದ ಹತ್ತಕ್ಕೂ ಹೆಚ್ಚು ಪ್ರಮುಖ ಬ್ಯಾಂಕ್​ಗಳು ತೀವ್ರ ನಗದು ಕೊರತೆಯನ್ನು (Liquidity crises) ಎದುರಿ ಸುತ್ತಿವೆ. ಗ್ರಾಹಕರು ತಮ್ಮದೇ ಖಾತೆಯಲ್ಲಿರುವ ಹಣವನ್ನು ಹಿಂಪಡೆಯಲು ಬ್ಯಾಂಕ್​ಗಳ ಮುಂದೆ ಸಾಲುಗಟ್ಟಿ ನಿಂತರೂ, ಕನಿಷ್ಠ ಮೊತ್ತವನ್ನೂ ನೀಡಲು ಬ್ಯಾಂಕ್​ಗಳು ಅಸಹಾಯಕವಾಗಿವೆ. ಇದು ಜನರಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನೇ ನಾಶಪಡಿಸಿದೆ.

  • ಬ್ಯಾಂಕ್​ಗಳನ್ನು ಉಳಿಸಲು ಹಿಂದಿನ ಸರ್ಕಾರವು ಯಾವುದೇ ಆಧಾರವಿಲ್ಲದೆ ಹೊಸ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ಬಿಟ್ಟಿತ್ತು. ಇದರಿಂದ ಮಾರುಕಟ್ಟೆಯಲ್ಲಿ ಹಣದ ಪೂರೈಕೆ ಹೆಚ್ಚಾಗಿ, ಆಹಾರ ಪದಾರ್ಥಗಳು ಮತ್ತು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಣದುಬ್ಬರವು ಶೇಕಡ 10ಕ್ಕಿಂತ ಹೆಚ್ಚಾಗಿದ್ದು, ಮಧ್ಯಮ ಮತ್ತು ಬಡವರ್ಗದ ಜನರ ಬದುಕನ್ನು ದುಸ್ತರವಾಗಿಸಿದೆ.

  • ಬಾಂಗ್ಲಾದೇಶದ ರಫ್ತು ಆದಾಯದ ಶೇಕಡ 80ಕ್ಕಿಂತ ಹೆಚ್ಚು ಪಾಲು ಹೊಂದಿರುವ ಸಿದ್ಧ ಉಡುಪು (Garment) ಕಾರ್ಖಾನೆಗಳು ತೀವ್ರ ಸಂಕಷ್ಟದಲ್ಲಿವೆ. ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಬ್ಯಾಂಕ್​ಗಳು ‘ಲೆಟರ್ ಆಫ್ ಕ್ರೆಡಿಟ್’ ನೀಡಲು ಸಾಧ್ಯವಾಗದ ಕಾರಣ, ಅನೇಕ ಕಾರ್ಖಾನೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಇದರಿಂದ ಲಕ್ಷಾಂತರ ಕಾರ್ವಿುಕರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

  • ಬ್ಯಾಂಕ್​ಗಳ ಬಳಿ ಹೊಸ ಸಾಲ ನೀಡಲು ಬಂಡವಾಳವಿಲ್ಲದ ಕಾರಣ ಮತ್ತು ಬಡ್ಡಿದರಗಳು ತೀವ್ರವಾಗಿ ಏರಿಕೆಯಾಗಿರುವುದರಿಂದ ದೇಶೀಯ ಹಾಗೂ ವಿದೇಶಿ ಹೂಡಿಕೆದಾರರು ಹಿಂದೇಟು ಹಾಕುತ್ತಿದ್ದಾರೆ.