ಭೂಮಿಯನ್ನು ಹುಡುಕುತ್ತಿಲ್ಲವಂತೆ ಏಲಿಯನ್​ಗಳು: ಸಂಶೋಧಕರು ಮಂಡಿಸಿದ ಹೊಸ ಸಿದ್ಧಾಂತದಲ್ಲಿದೆ ಅಚ್ಚರಿ ಸಂಗತಿ! Aliens

ಭೂಮಿಯನ್ನು ಹುಡುಕುತ್ತಿಲ್ಲವಂತೆ ಏಲಿಯನ್​ಗಳು: ಸಂಶೋಧಕರು ಮಂಡಿಸಿದ ಹೊಸ ಸಿದ್ಧಾಂತದಲ್ಲಿದೆ ಅಚ್ಚರಿ ಸಂಗತಿ! Aliens
ಭೂಮಿಯನ್ನು ಹುಡುಕುತ್ತಿಲ್ಲವಂತೆ ಏಲಿಯನ್​ಗಳು: ಸಂಶೋಧಕರು ಮಂಡಿಸಿದ ಹೊಸ ಸಿದ್ಧಾಂತದಲ್ಲಿದೆ ಅಚ್ಚರಿ ಸಂಗತಿ! Aliens
Published on

ಪ್ರಮುಖ ಮುಖ್ಯಾಂಶಗಳು

  • ಏಲಿಯನ್​​ಗಳು ಇರುವಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ಸದಾ ನಡೆಯುತ್ತಲೇ ಇವೆ
  • ಆದರೆ, ಅವುಗಳ ಅಸ್ತಿತ್ವದ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟತೆ ಮಾತ್ರ ದೊರೆತಿಲ್ಲ
  • ಸಾಕಷ್ಟು ಸಂಶೋಧನೆಗಳು, ಸಿದ್ಧಾಂತಗಳು ಹೊರಬಂದರೂ ಏಲಿಯನ್​ಗಳ ಸಂಗತಿ​ ನಿಗೂಢವಾಗಿಯೇ ಇವೆ
  • ಇದೇ ಸಂದರ್ಭದಲ್ಲಿ ಏಲಿಯನ್ಸ್​ ಕುರಿತಾದ ಹೊಸ ಸಿದ್ಧಾಂತವೊಂದರ ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ
Aliens : ಏಲಿಯನ್​​ಗಳು ಇರುವಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ಸದಾ ನಡೆಯುತ್ತಲೇ ಇವೆ. ಆದರೆ, ಅವುಗಳ ಅಸ್ತಿತ್ವದ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟತೆ ಮಾತ್ರ ದೊರೆತಿಲ್ಲ. ಏಲಿಯನ್​ಗಳು ಕಾಣಿಸಿಕೊಳ್ಳುವ ಬಗ್ಗೆ ಆಗಾಗ ಸುದ್ದಿಯಾದರೂ ಕೂಡ ಜನರಲ್ಲಿ ಅವುಗಳ ಅಸ್ತಿತ್ವದ ಪ್ರಶ್ನೆ ಆಗೇ ಉಳಿದಿದೆ. ಸಾಕಷ್ಟು ಸಂಶೋಧನೆಗಳು, ಸಿದ್ಧಾಂತಗಳು ಹೊರಬಂದರೂ ಕೂಡ ಏಲಿಯನ್​ಗಳ ಸಂಗತಿ​ ನಿಗೂಢವಾಗಿಯೇ ನಮ್ಮ ನಡುವೆ ಉಳಿದಿದೆ.
ಅಂದಹಾಗೆ, ಏಲಿಯನ್‌ ಮತ್ತು ಹಾರುವ ತಟ್ಟೆಗಳನ್ನು ಕಂಡಿರುವುದಾಗಿ ಕೆಲವರು ವಾದಿಸುತ್ತಾರೆ. ಇನ್ನು ಕೆಲವರು ಏಲಿಯನ್​ಗಳ ಇರುವಿಕೆಯನ್ನೇ ಸುಳ್ಳು ಎನ್ನುತ್ತಾರೆ. ಆಗಾಗ ಭೂಮಿ ಹಾಗೂ ಆಕಾಶದ ಮೇಲೆ ಕೆಲವು ವಿಚಿತ್ರ ವಸ್ತುಗಳು ಕಾಣಿಸಿಕೊಂಡಿವೆ. ಇವುಗಳನ್ನು ಯುಎಫ್​ಒ (ಯೂನಿಫೈಡ್​ ಫ್ಲೈಯಿಂಗ್​ ಆಬ್ಜೆಕ್ಟ್​) ಎಂದು ಕರೆಯಲಾಗುತ್ತದೆ. ಈ ಯುಎಫ್​ಒಗಳು ಅನ್ಯಗ್ರಹ ಜೀವಿಗಳ ವಾಹನ ಎಂದೂ ಹೇಳಲಾಗುತ್ತದೆ. ಇವುಗಳನ್ನು ಕಂಡಿದ್ದಾಗಿ ಆಗಾಗ ಕೆಲವರು ಹೇಳಿಕೊಳ್ಳುತ್ತಿರುತ್ತಾರೆ. ಆದರೆ, ಇಂದಿಗೂ ಏಲಿಯನ್​ ಇರುವಿಕೆ ಪ್ರಶ್ನೆಯಾಗೇ ಉಳಿದಿದೆ.
ಇನ್ನೂ ಭೂಮಿಯಂತಹ ಮತ್ತೊಂದು ಗ್ರಹವನ್ನು ಮತ್ತು ಅದರ ಮೇಲೆ ಜೀವಿಗಳಿರುವ ಕುರುಹುಗಳನ್ನು ನಾವು ಕಂಡುಕೊಳ್ಳುತ್ತೇವೆ ಎಂದು ತಜ್ಞರು ಹೇಳುತ್ತಲೇ ಇದಾರೆ. ಇದಕ್ಕಾಗಿ ಅನೇಕ ಪ್ರಯೋಗಗಳನ್ನು ಸಹ ನಡೆಸಲಾಗುತ್ತಿದೆ. ಆದರೆ, ಇನ್ನೂ ಯಾವುದೇ ನಿರ್ಣಾಯಕ ಪುರಾವೆಗಳು ಲಭ್ಯವಾಗಿಲ್ಲ. ಕೆಲವರು ಏಲಿಯನ್ಸ್ ಮನುಷ್ಯರ ಜತೆ ಸಂವಹನ ನಡೆಸಲು ಪ್ರಯತ್ನಿಸುತ್ತಿವೆ ಮತ್ತು ಶೀಘ್ರದಲ್ಲೇ ಭೂಮಿಗೆ ಬರಲಿವೆ ಎನ್ನುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹೊಸ ಸಿದ್ಧಾಂತವೊಂದರ ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ. ಈ ಹೊಸ ಸಿದ್ಧಾಂತದಲ್ಲಿ ಏಲಿಯನ್ಸ್ ನಮ್ಮನ್ನು ಹುಡುಕುತ್ತಿಲ್ಲ ಎಂಬ ವಾದವಿದೆ.

ಏನಿದು ರಾಡಿಕಲ್ ಮುಂಡಾನಿಟಿ ಸಿದ್ಧಾಂತ?

ನಾಸಾದ ಗೊಡ್ಡಾರ್ಡ್ ಸ್ಪೇಸ್ ಫ್ಲೀಟ್ ಸೆಂಟರ್‌ನಲ್ಲಿ ಹಿರಿಯ ಸಂಶೋಧನಾ ವಿಜ್ಞಾನಿಯಾಗಿರುವ ಡಾ. ರಾಬಿನ್ ಕಾರ್ಬೆಟ್ ಮಂಡಿಸಿರುವ 'ರಾಡಿಕಲ್ ಮುಂಡಾನಿಟಿ' (Radical Mundanity) ಎಂಬ ಸಿದ್ಧಾಂತವು ಅನ್ಯಗ್ರಹ ಜೀವಿಗಳ ಬಗ್ಗೆ ಒಂದು ವಿಭಿನ್ನ ದೃಷ್ಟಿಕೋನವನ್ನು ನೀಡುತ್ತದೆ. ಈ ಸಿದ್ಧಾಂತದ ಪ್ರಕಾರ, ಭೂಮಿಯ ಮೇಲಿರುವ ಮಾನವರು ಅನ್ಯಗ್ರಹ ಜೀವಿಗಳನ್ನು ಹುಡುಕಲು ಎಷ್ಟು ಉತ್ಸುಕರಾಗಿದ್ದಾರೋ, ಅನ್ಯಗ್ರಹ ಜೀವಿಗಳಿಗೆ ನಮ್ಮನ್ನು ಹುಡುಕುವಲ್ಲಿ ಅಂತಹ ಯಾವುದೇ ಆಸಕ್ತಿಯಿಲ್ಲ. ಅನ್ಯಗ್ರಹ ಜೀವಿಗಳು ಈಗಾಗಲೇ ಸಾಕಷ್ಟು ಮುಂದುವರಿದಿದ್ದು, ಭೂಮಿಯಂತಹ ಸಾಮಾನ್ಯ ಗ್ರಹಗಳ ಸಂಪರ್ಕ ಸಾಧಿಸುವ ವಿಷಯದಲ್ಲಿ ಅವರು ಬೇಸರಗೊಂಡಿದ್ದಾರೆ ಅಥವಾ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ ಎಂದು ಕಾರ್ಬೆಟ್ ವಿವರಿಸುತ್ತಾರೆ. ಅಂದರೆ, ವಿಶ್ವದಲ್ಲಿ ಅನ್ಯಗ್ರಹ ಜೀವಿಗಳ ಅಸ್ತಿತ್ವವಿದ್ದರೂ ಸಹ, ಮಾನವ ನಾಗರಿಕತೆಯು ಅವರಿಗೆ ಕುತೂಹಲಕಾರಿಯಾಗಿ ಕಾಣಿಸದಿರುವುದೇ ಅವರು ನಮ್ಮನ್ನು ಸಂಪರ್ಕಿಸದಿರಲು ಮುಖ್ಯ ಕಾರಣವಾಗಿದೆ ಅನ್ನೋದು ಈ ಸಿದ್ಧಾಂತದ ವಾದವಾಗಿದೆ.

ಈ ಸಿದ್ಧಾಂತ ಏಕೆ ಮುಖ್ಯ?

ಏಲಿಯನ್ಸ್ ವಿಚಾರಕ್ಕೆ ಬಂದರೆ, ಹೆಚ್ಚಿನ ಜನರು ಸಿನಿಮಾಗಳಲ್ಲಿ ತೋರಿಸಿರುವಂತೆಯೇ ಏಲಿಯನ್​ಗಳು ಅಲೌಕಿಕ ಸಾಮರ್ಥ್ಯಗಳನ್ನು ಹೊಂದಿವೆ ಎಂದು ಭಾವಿಸುತ್ತಾರೆ. ಈ ಬ್ರಹ್ಮಾಂಡದ ಯಾವುದೇ ಸ್ಥಳಕ್ಕೆ ಬಹುಬೇಗನೆ ಪ್ರಯಾಣಿಸಬಲ್ಲ ಮತ್ತು ಯಾವುದೇ ವಿಷಯಗಳನ್ನು ತಕ್ಷಣ ಬದಲಾಯಿಸಬಲ್ಲ ಅಗಾಧ ಸಾಮರ್ಥ್ಯವುಳ್ಳ ಒಂದು ಜೀವಿಯನ್ನಾಗಿ ನೋಡಲಾಗುತ್ತದೆ. ಆದರೆ, ಡಾ. ರಾಬಿನ್ ಅವರ ಸಿದ್ಧಾಂತವು ಅದನ್ನು ಸಂಪೂರ್ಣವಾಗಿ ನಿರಾಕರಿಸುತ್ತದೆ. ಏಲಿಯನ್ಸ್ ಮತ್ತು ಮನುಷ್ಯರ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ ಮತ್ತು ಅವರಿಗೆ ಅಲೌಕಿಕ ಸಾಮರ್ಥ್ಯಗಳಿಲ್ಲ ಎನ್ನುವ ಮೂಲಕ ರಾಬಿನ್​ ಗಮನಸೆಳೆದಿದ್ದಾರೆ. ಆದರೆ, ಕೆಲವೊಮ್ಮೆ ಅವರು ನಮಗಿಂತ ಹೆಚ್ಚು ಮುಂದುವರಿದಿರುವ ಸಾಧ್ಯತೆಯಿದೆ ಎಂದಿದ್ದಾರೆ. ಅವರು ಮನುಷ್ಯರಂತೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿರಬಹುದು ಎಂದು ರಾಬಿನ್​ ಅವರು ತಮ್ಮ ಸಿದ್ಧಾಂತದಲ್ಲಿ ಹೇಳಿದ್ದಾರೆ.
ಅಂತರನಕ್ಷತ್ರ ಸಂಕೇತಗಳನ್ನು ಅಥವಾ ಶೋಧಕಗಳನ್ನು (Probes) ಇತರ ಗ್ರಹಗಳಿಗೆ ಕಳುಹಿಸುವುದು ಅತಿ ಹೆಚ್ಚು ಶಕ್ತಿ ಮತ್ತು ಸಮಯವನ್ನು ಬೇಡುವ ಕೆಲಸವಾಗಿದ್ದು, ಇದು ಲಕ್ಷಾಂತರ ವರ್ಷಗಳ ಕಾಲಾವಕಾಶ ತೆಗೆದುಕೊಳ್ಳಬಹುದು. ರಾಬಿನ್ ಅವರ ಸಿದ್ಧಾಂತದ ಪ್ರಕಾರ, ಇದರ ಕಠಿಣತೆಯನ್ನು ಅರಿತ ಪರಗ್ರಹ ಜೀವಿಗಳು (Aliens) ಇಂತಹ ಪ್ರಯತ್ನಗಳನ್ನೇ ಕೈಬಿಟ್ಟಿರಬಹುದು ಅಥವಾ ಅವರಿಗೆ ಭೂಮಿಯು ಅಷ್ಟೊಂದು ಆಕರ್ಷಕವಾಗಿ ಕಂಡಿರಲಿಕ್ಕಿಲ್ಲ. ವಿಶ್ವದಲ್ಲಿ ನಮಗೆ ಕಾಣಿಸದ ಇನ್ನೂ ಅನೇಕ ಗ್ರಹಗಳಿದ್ದು, ಅವರು ಆ ಕಡೆಗೆ ಗಮನ ಹರಿಸಿರುವ ಸಾಧ್ಯತೆಯಿದೆ. ಅಲ್ಲದೆ, ಭೂಮಿಯ ಸಮೀಪಕ್ಕೆ ಬರುವುದು ತಾಂತ್ರಿಕವಾಗಿ ಅಥವಾ ಭೌತಿಕವಾಗಿ ಅತೀ ಕಷ್ಟಕರವಾದ್ದರಿಂದ ಅವರು ಈ ಪ್ರಯತ್ನದಿಂದ ಹಿಂದೆ ಸರಿದಿರಬಹುದು ಎಂದು ಈ ಸಿದ್ಧಾಂತವು ವಿವರಿಸುತ್ತದೆ.

ಈ ಸಿದ್ಧಾಂತಕ್ಕೂ ವಿರೋಧ

ಅಂದಹಾಗೆ, ಕಾರ್ಬೆಟ್ ಅವರ ರಾಡಿಕಲ್​ ಮುಂಡಾನಿಟಿ ಸಿದ್ಧಾಂತವು ಕುತೂಹಲಕಾರಿಯಾಗಿದ್ದರೂ, ಅನೇಕ ತಜ್ಞರು ಇದನ್ನು ಒಪ್ಪುವುದಿಲ್ಲ. ಈ ಸಿದ್ಧಾಂತವನ್ನು ಹೊಸ ದೃಷ್ಟಿಕೋನ ಎಂದು ವಿವರಿಸಲಾಗಿದ್ದರೂ, ಅನೇಕ ಸಂಶೋಧಕರು ಇದನ್ನು ತಟಸ್ಥ ಸಿದ್ಧಾಂತವೆಂದು ಪರಿಗಣಿಸುತ್ತಾರೆ. ಕೆಲವು ಸಂಶೋಧಕರು ಆಕಾಶದಲ್ಲಿ ನಡೆಯುವ ಕೆಲ ವಿಚಿತ್ರ ವಿದ್ಯಾಮಾನಗಳು ಅನ್ಯಲೋಕದ ಜೀವಿಗಳ ಪುರಾವೆಗಳಾಗಿವೆ ಮತ್ತು ಅವು ಭೂಮಿಗೆ ಬಂದಿವೆ ಎಂದು ಹೇಳಿಕೊಳ್ಳುತ್ತಾರೆ. ಆದ್ದರಿಂದ, ಕೆಲವು ತಜ್ಞರು ಏಲಿಯನ್ಸ್​ ಭೂಮಿಗೆ ಬರುವುದಿಲ್ಲ ಎಂಬ ಸಿದ್ಧಾಂತವು ನಿಜವಲ್ಲ ಎಂದು ಹೇಳುತ್ತಾರೆ.

ಭೂಮಿಯ ಒಳಗಿನ ಸಿದ್ಧಾಂತ

ಹಾರ್ಟ್‌ವರ್ಡ್ ವಿಶ್ವವಿದ್ಯಾಲಯದ 'ಹ್ಯೂಮನ್ ಫ್ಲರಿಶಿಂಗ್ ಪ್ರೋಗ್ರಾಂ'ನ ಸಂಶೋಧಕರು ಇತ್ತೀಚೆಗೆ ಮಂಡಿಸಿರುವ ವಿಶಿಷ್ಟ ಸಿದ್ಧಾಂತದ ಪ್ರಕಾರ, ಏಲಿಯನ್‌ಗಳು ಅಥವಾ ಪರಗ್ರಹ ಜೀವಿಗಳು ಬಾಹ್ಯಾಕಾಶದಲ್ಲಿಲ್ಲ, ಬದಲಿಗೆ ಭೂಮಿಯ ಮೇಲೆಯೇ ಇರಬಹುದು ಎಂದಿದ್ದಾರೆ. ನಾವು ಅವರನ್ನು ತಪ್ಪು ದಿಕ್ಕಿನಲ್ಲಿ ಹುಡುಕುತ್ತಿದ್ದೇವೆ ಎಂದು ಪ್ರತಿಪಾದಿಸುವ ಈ ಸಿದ್ಧಾಂತವು ಏಲಿಯನ್‌ಗಳು ಭೂಮಿಯ ಅಡಿಯಲ್ಲಿ ಅಥವಾ ಚಂದ್ರನ ಮೇಲೆ ಅಡಗಿರಬಹುದು ಅಥವಾ ಮನುಷ್ಯರ ನಡುವೆಯೇ ವೇಷ ಮರೆಸಿಕೊಂಡು ವಾಸಿಸುತ್ತಿರಬಹುದು ಎಂಬ ಕುತೂಹಲಕಾರಿ ಅಂಶಗಳನ್ನು ಮುಂದಿಟ್ಟಿದೆ. ಇಂತಹ ಹಲವಾರು ಸಿದ್ಧಾಂತಗಳು ಚರ್ಚೆಯಲ್ಲಿದ್ದರು ಕೂಡ ಈವರೆಗೂ ಇವುಗಳನ್ನು ಸಾಬೀತುಪಡಿಸಲು ಯಾವುದೇ ಸ್ಪಷ್ಟ ಅಥವಾ ಖಚಿತ ಪುರಾವೆಗಳು ದೊರೆತಿಲ್ಲ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net