ಹೊರ್ಮುಜ್ ಬಳಿಕ ಕೆಂಪು ಸಮುದ್ರದ ಸರದಿ? ಮೆಕ್ಕಾ ಮೇಲೆ ಹೌತಿ ಡ್ರೋನ್ ದಾಳಿ, ತೈಲ ಮಾರುಕಟ್ಟೆಗೆ ಹೊಸ ಸಂಕಷ್ಟ! Oil Price Hike
ಕೆಂಪು ಸಮುದ್ರದ ಬಿಕ್ಕಟ್ಟು ಮತ್ತು ಹೌತಿ ಡ್ರೋನ್ ದಾಳಿಗಳು ಜಾಗತಿಕ ತೈಲ ಮಾರುಕಟ್ಟೆಗೆ ಬೆದರಿಕೆ
Published on:
Copied
Follow Us
ನವದೆಹಲಿ: ಕಳೆದೆ ಏಳು ತಿಂಗಳಿನಿಂದ ಇರಾನ್ ಮತ್ತು ಅಮೆರಿಕ ನಡುವೆ ಸಂಘರ್ಷ ನಡೆಯುತ್ತಿದೆ. ಈ ಯುದ್ಧದಿಂದಾಗಿ ಹೊರ್ಮುಜ್ ಜಲಸಂಧಿ ಬಂದ್ಆಗಿದ್ದ ಕಾರಣ ಜಾಗತಿಕ ತೈಲ ಮಾರುಕಟ್ಟೆ (Oil Price Hike) ಯಲ್ಲಿ ಭಾರಿ ತಲ್ಲಣ ಉಂಟಾಗಿತ್ತು. ನಂತರ ಅಮೆರಿಕೆ ಹಾಗೂ ಇರಾನ್ ನಡುವೆ ಶಾಂತಿ, ಒಪ್ಪಂದ ಮಾತುಕತೆ ಹೆಸರಿನಲ್ಲಿ ಕೆಲಕಾಲ ಹೊರ್ಮುಜ್ನಲ್ಲಿ ವಾತಾವರಣ ತಿಳಿಯಾಗಿತ್ತು.
ಆದರೆ, ಈಗ ಯೆಮನ್ ದೇಶದ ಹೌತಿ ಬಂಡುಕೋರರು, ಇಸ್ಲಾಂನ ಪವಿತ್ರ ಸ್ಥಳವಾದ ಸೌದಿ ಅರೇಬಿಯಾದ ಮೆಕ್ಕಾದ ಮೇಲೆ ಡ್ರೋನ್ ದಾಳಿ ನಡೆಸಿರುವುದು, ಕೇವಲ ಅರಬ್ ಮಾತ್ರವಲ್ಲದೇ, ಸಂಪೂರ್ಣ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.
ಮೆಕ್ಕಾದಲ್ಲಿರುವ ಮಸೀದಿ ಜಗತ್ತಿನಲ್ಲಿರುವ ಪ್ರತಿ ಮುಸಲ್ಮಾನರಿಗೂ ಪವಿತ್ರವಾಗಿದ್ದು, ದಿನದ ಐದು ನಮಾಜ್ ಅನ್ನು ಈ ಮಸೀದಿಯಿರುವ ದಿಕ್ಕಿಗೆ ಮುಖಮಾಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈಗ ಈ ಮಸೀದಿ ಮೇಲೆ ನಡೆದಿರುವ ದಾಳಿ ಇಸ್ಲಾಂ ಮೇಲೆ ನಡೆದಿರುವ ದಾಳಿ ಎಂದೇ ಭಾವಿಸಲಾಗುತ್ತಿದೆ.
ಆದರೆ, ಈ ದಾಳಿಯನ್ನು ಕೂಡ ಇಸ್ಲಾಂ ಧರ್ಮ ಪರಿಪಾಲಕರೇ ಮಾಡಿರುವ ಕಾರಣ ಸೌದಿ ಆಡಳಿತ ಈ ಪರಿಸ್ಥಿತಿಯನ್ನು ಯಾವ ರೀತಿ ಎದುರಿಸಲಿದೆ ಎಂದು ಕಾದು ನೋಡಬೇಕಿದೆ. ಅಂತೆಯೇ ಸೌದಿ ವಾಯು ಪ್ರದೇಶಕ್ಕೆ ಪ್ರವೇಶ ಪಡೆದಿದ್ದ, ಹೌತಿ ಡ್ರೋನ್ವೊಂದನ್ನು ಸೌದಿ ಮಿಲಿಟರಿ ಹೊಡೆದುರಳಿಸಿದ್ದು, ಮೆಕ್ಕಾದಲ್ಲಿ ಇದೇ ಮೊದಲ ಬಾರಿಗೆ ತುರ್ತು ಎಚ್ಚರಿಕೆ ಸೈರನ್ ಅನ್ನು ಮೊಳಗಿಸಲಾಗಿದೆ.
ಹೊರ್ಮುಜ್ ಆಯ್ತು; ಈಗ ಕೆಂಪು ಸಮುದ್ರ!
ಇರಾನ್ ಮತ್ತು ಅಮೆರಿಕ ಸಂಘರ್ಷದಲ್ಲಿ ಅತೀ ಹೆಚ್ಚು ಚರ್ಚೆಗೆ ಒಳಪಟ್ಟ ಸ್ಥಳ ಎಂದರೆ ಅದು ಹೊರ್ಮುಜ್ ಜಲಸಂಧಿ. ಈ ಮಾರ್ಗದಲ್ಲಿ ಜಗತ್ತಿನ ತೈಲ ಹಾಗೂ ಆಹಾರ ಪದಾರ್ಥಗಳು ಸರಬರಾಜಾಗುತ್ತಿದ್ದು, ಯುದ್ಧದಿಂದಾಗಿ ಇಲ್ಲಿ ಭಾರಿ ವ್ಯತ್ಯಯ ಉಂಟಾಗಿತ್ತು.
ಈಗ, ತೈಲ ಉತ್ಪಾದಕ ದೇಶಗಳಾಗಿರುವ ಅರಬ್ ದೇಶಗಳಲ್ಲೇ ಸಂಘರ್ಷ ಆರಂಭವಾಗಿರುವ ಹಿನ್ನಲೆ, ಈಗ ಕೆಂಪು ಸಮುದ್ರದ ಜಲಮಾರ್ಗ ಕೂಡ ಬಂದ್ ಆಗುವ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ. ಈ ಕೆಂಪು ಸಮುದ್ರವು ಏಷ್ಯಾ ಹಾಗೂ ಆಫ್ರಿಕಾ ಖಂಡಗಳ ನಡುವೆ ಇರುವ ಪ್ರಮುಖ ಜಲಮಾರ್ಗವಾಗಿದ್ದು, ಅರಬ್ ದೇಶಗಳಿಂದ ರಫ್ತಾಗುವ ಶೇ. 60 ರಷ್ಟು ವಸ್ತುಗಳು ಈ ಮಾರ್ಗದ ಮೂಲಕವೇ ಸಾಗುತ್ತದೆ.
ಅಂತೆಯೇ ಪ್ರಸಿದ್ಧ ಸೂಯೇಜ್ ಕಾಲುವೆ ಕೂಡ ಇದೇ ಕೆಂಪು ಸಮುದ್ರದಲ್ಲಿದ್ದು, ಈ ಸಮುದ್ರ ಸೌದಿ ಅರೇಬಿಯಾದ ಗಡಿಯಲ್ಲಿದ್ದು ಹೌತಿಗಳೊಂದಿಗಿನ ಯುದ್ಧ ತೀವ್ರವಾದರೆ ಈ ಸಮುದ್ರದಲ್ಲಿ ಹಡಗುಗಳ ಓಡಾಟಕ್ಕೆ ಕುತ್ತುಬರಲಿದೆ ಎಂದು ಹೇಳಲಾಗುತ್ತಿದೆ.
ತೈಲ ಮಾರುಕಟ್ಟೆ ತತ್ತರ!
ಇನ್ನೂ ತೈಲ ಮಾರುಕಟ್ಟೆಯ ಪ್ರಮುಖ ಕೊಂಡಿಯಾಗಿರುವ ಅರಬ್ ದೇಶದಲ್ಲಿ ಯುದ್ಧ ಕಾರ್ಮೋಡ ಕವಿದಿರುವುದು ತೈಲ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಯವನ್ನು ಉಂಟುಮಾಡಲಿದೆ ಎಂದು ನಂಬಲಾಗಿದೆ.
ಇರಾನ್ ಸಂಘರ್ಷಕ್ಕೂ ಪೂರ್ವದಲ್ಲಿ ಬ್ಯಾರೆಲ್ ಕಚ್ಚಾ ತೈಲ ಬೆಲೆ 80-90 ಡಾಲರ್ ಇತ್ತು. ಯುದ್ಧ ತಾರಕ್ಕಕೇ ತಲುಪಿ ಹೊರ್ಮುಜ್ ಜಲಸಂಧಿ ಬಂದ್ ಆದಾಗ ಬ್ಯಾರೆಲ್ ತೈಲದ ಬೆಲೆ 150 ಡಾಲರ್ ಗಡಿ ದಾಟಿತ್ತು. ಪ್ರಸ್ತುತ ಬ್ಯಾರೆಲ್ ಕಚ್ಚಾ ತೈಲದ ಬೆಲೆ 105-110 ಡಾಲರ್ ಇದೆ. ಆದರೆ ಈಗ ಸೌದಿಯಲ್ಲಿ ಸಂಘರ್ಷ ಆರಂಭವಾಗಿದ್ದು, ಈ ಬೆಲೆ ದಿನಕಳೆದಂತೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.
ಕಚ್ಚಾ ತೈಲ ಬೆಲೆ ಏರಿಕೆಯಾದರೆ ಸಹಜವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಕೂಡ ಹೆಚ್ಚಳವಾಗಲಿದ್ದು, ಇದರ ಬಿಸಿಯನ್ನು ಭಾರತ ಸೇರಿದಂತೆ ಪೆಟ್ರೋಲ್ ಅನ್ನು ಆಮದು ಮಾಡಿಕೊಳ್ಳುವ ದೇಶಗಳು ಮೊದಲು ಅನುಭವಿಸಲಿವೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ, (ಏಜೆನ್ಸೀಸ್).