ಕೋವಿಡ್​-19 ಪ್ರಸರಣ ದರ ತಿಳಿಸುವ PRACRITI ಡ್ಯಾಶ್​ ಬೋರ್ಡ್​ ಅಭಿವೃದ್ಧಿ ಪಡಿಸಿದ ದೆಹಲಿ ಐಐಟಿ ಸಂಶೋಧಕರು...

Delhi IIT 26 april 20
Published on

ನವದೆಹಲಿ: ದೆಹಲಿ ಐಐಟಿಯ ಸಂಶೋಧಕರ ತಂಡ ವೆಬ್​ ಆಧಾರಿತ ಡ್ಯಾಶ್​ ಬೋರ್ಡ್​ "ಪ್ರಕೃತಿ'(PRACRITI - Prediction and Assessment of Corona Infections and Transmission in India) ಯನ್ನು ಅಭಿವೃದ್ಧಿಪಡಿಸಿದೆ.

ಇದು ಭಾರತದ ಪ್ರತಿಯೊಂದು ರಾಜ್ಯಗಳು ಹಾಗೂ ಜಿಲ್ಲೆಗಳಲ್ಲಿ ಕೋವಿಡ್​-19 ಪ್ರಸರಣ ದರವನ್ನು ತಿಳಿಸುತ್ತದೆ ಮತ್ತು ಭಾರತದಲ್ಲಿ ಕರೊನಾ ವೈರಸ್​ ಪ್ರಸರಣವನ್ನು ಹೇಗೆ ನಿಯಂತ್ರಿಸಬೇಕು ಮತ್ತು ತಗ್ಗಿಸಬೇಕು ಎಂಬುದರ ಕುರಿತು ಅಧಿಕಾರಿಗಳು ಮತ್ತು ಸಾರ್ವಜನಿಕರು ತಿಳಿದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ.

ಪ್ರೊ.ಅನೂಪ್​ ಕೃಷ್ಣನ್​ ಹಾಗೂ ಸಂಶೋಧಕರ ತಂಡ ಇದನ್ನು ಅಭಿವೃದ್ಧಿಪಡಿಸಿದ್ದು, ದೇಶದ ಪ್ರತಿ ಜಿಲ್ಲೆಯ ಕೋವಿಡ್​-19 ಹರಡುವಿಕೆಯ ಕುರಿತು ಮೂರು ವಾರ ಮುನ್ಸೂಚನೆ ನೀಡುತ್ತದೆ.

ಸರ್ಕಾರದ ನೀತಿಗಳು ಹಾಗೂ ಹವಾಮಾನ ಸ್ಥಿತಿಗತಿ ಸೇರಿದಂತೆ ಭಾರತದಲ್ಲಿ ಯಾವುದೇ ಬದಲಾವಣೆಗಳಿಗೆ ಅನುಗುಣವಾಗಿ ವಾರಕ್ಕೊಮ್ಮೆ ಈ ಮುನ್ನೋಟವನ್ನು ನವೀಕರಿಸಲಾಗುತ್ತದೆ ಎಂದು ಕೃಷ್ಣನ್​ ತಿಳಿಸಿದ್ದಾರೆ.

"ಪ್ರಕೃತಿ'ಯನ್ನು ಅಭಿವೃದ್ಧಿಪಡಿಸುವ ಹಿಂದಿನ ಪ್ರೇರಣೆಯ ಕುರಿತು ವಿದ್ಯಾರ್ಥಿ ಹರ್ಗುಣ್​ ಸಿಂಗ್​ ಗ್ರೋವರ್​ ಮಾತನಾಡಿ, ಕೋವಿಡ್​- 19 ನಿಯಂತ್ರಣ ಹಾಗೂ ತಡೆಗಟ್ಟುವ ತಂತ್ರಗಳನ್ನು ಅಭಿವೃದ್ಧಿಪಡಿಸಲು ಪ್ರತಿ ರಾಜ್ಯದಲ್ಲಿ ನಿಖರವಾದ ಸ್ಥಿತಿಗತಿ ಏನಿದೆ ಎಂಬುದನ್ನು ಹಾಗೂ ಲಾಕ್​ಡೌನ್​ ಷರತ್ತುಗಳು ಬದಲಾದಂತೆ ಸನ್ನಿವೇಶ ಹೇಗೆ ಬದಲಾಗಬಹುದು ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯ ಎಂದರು.

ಭಾರತದಲ್ಲಿ ಕೋವಿಡ್-19 ನಿಯಂತ್ರಿಸುವಲ್ಲಿ ಮತ್ತು ತಡೆಗಟ್ಟುವಲ್ಲಿ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಇದು ಸಹಾಯವಾಗಲಿದೆ ಎಂದು ಪ್ರೊ. ಕೃಷ್ಣನ್​ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net