ಕ್ರೀಡಾಪಟುಗಳಿಗೆ ನೀಡುವ ಬಹುಮಾನ ಮೊತ್ತ ಹೆಚ್ಚಳ ?

ಉಪಮುಖ್ಯಮಂತ್ರಿ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್
Published on: 

ಬೆಂಗಳೂರು : ರಾಜ್ಯದ ಕ್ರೀಡಾಪಟುಗಳಿಗೆ ನೀಡಲಾಗುತ್ತಿರುವ ಬಹುಮಾನ ಮೊತ್ತವನ್ನು ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿ ಮರುಪರಿಶೀಲಿಸಲಾಗುತ್ತಿದೆ. ಈಗಾಗಲೇ ಸಿಎಂ ಜತೆಗೆ ಚರ್ಚಿಸಿದ್ದು, ಬಹುಮಾನ ಮೊತ್ತ ಹೆಚ್ಚಳ ಸಂಬಂಧ ಮಂಗಳವಾರ ಘೋಷಣೆ ಮಾಡುವುದಾಗಿ ಉಪ ಮುಖ್ಯಮಂತ್ರಿ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ್ ಸಿಹಿ ಸುದ್ದಿ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂವಮ್ಮ ಜಪಾನ್‌ನಲ್ಲಿದ್ದಾಗಲೇ ಅವರನ್ನು ಸಂಪರ್ಕಿಸಿ ಅಭಿನಂದಿಸಲು ಪ್ರಯತ್ನಿಸಿದ್ದೆವು. ಆಗ ಸಂಪರ್ಕ ಸಾಧ್ಯವಾಗಿರಲಿಲ್ಲ. ಅವರು ಭಾರತಕ್ಕೆ ಬಂದ ಒಂದೆರಡು ಗಂಟೆಯಲ್ಲೇ ಅವರನ್ನು ಸಂಪರ್ಕಿಸಿ ಮಾತನಾಡಿದ್ದೇನೆ. ಪೂವಮ್ಮ ಅವರಷ್ಟೇ ಅಲ್ಲ, ಬೇರೆ ಬೇರೆ ಅಥ್ಲೀಟ್‌ಗಳೊಂದಿಗೂ ಮಾತನಾಡಿದ್ದೇನೆ ಎಂದರು.

ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಮೊತ್ತ ನೀಡಲಾಗುತ್ತಿದೆ ಎಂದು ಕ್ರೀಡಾಪಟುಗಳು ಹೇಳಿರುವ ಮಾಹಿತಿ ಸಂಗ್ರಹಿಸಲಾಗಿದೆ. ನಮ್ಮಲ್ಲಿಯೂ ಬಹುಮಾನ ಮೊತ್ತವನ್ನು ಪುನರ್ ಪರಿಶೀಲಿಸಬೇಕು ಎಂಬ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಎಷ್ಟು ಮಾಡಬೇಕು ಎಂಬುದನ್ನು ಘೋಷಿಸಲಾಗುವುದು ಎಂದು ಹೇಳಿದರು.

ಕೇಂದ್ರದ ಬರ ವೀಕ್ಷಣಾ ತಂಡದ ಪರಿಶೀಲನೆ ಕುರಿತು ಮಾತನಾಡಿದ ಡಾ. ಜಿ. ಪರಮೇಶ್ವರ್, ಕೇಂದ್ರದ ತಂಡವನ್ನು ಮೂರು ತಂಡಗಳಾಗಿ ವಿಂಗಡಿಸಿ ರಾಜ್ಯದ ವಿವಿಧ ಭಾಗಗಳಿಗೆ ಕಳುಹಿಸಲಾಗಿದೆ. ಅಕ್ಟೋಬರ್ 3 ರಿಂದ 6ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿವೆ.

ಪ್ರತಿಯೊಂದು ತಂಡವೂ ಮೂರರಿಂದ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ. ನಾವು ಮೊದಲನೇ ಪಟ್ಟಿಯಲ್ಲಿ ಬರಪೀಡಿತ ಎಂದು ಘೋಷಿಸಿದ್ದ 101 ತಾಲೂಕುಗಳ ಪರಿಸ್ಥಿತಿಯನ್ನು ಅವರು ಪರಿಶೀಲಿಸುತ್ತಿದ್ದಾರೆ.

ಮುಖ್ಯಮಂತ್ರಿ ಮತ್ತು ನಾನು ಕೇಂದ್ರದ ತಂಡವನ್ನು ಬರಮಾಡಿಕೊಂಡು ರಾಜ್ಯದ ಬರ ಪರಿಸ್ಥಿತಿಯ ಕುರಿತು ಅವರಿಗೆ ಮಾಹಿತಿ ನೀಡಿದ್ದೇವೆ. 2ನೇ ಹಂತದಲ್ಲಿ ಘೋಷಿಸಿರುವ ಉಳಿದ 77 ತಾಲೂಕುಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದೇವೆ. ಆ ಆಧಾರದ ಮೇಲೆ ಅವರು ಹೆಚ್ಚು ಕಡಿಮೆ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದರು.

46 ಸಾವಿರ ಕೋಟಿ ನಷ್ಟ

ರಾಜ್ಯದ 177 ತಾಲೂಕುಗಳಲ್ಲಿ ಈಗಾಗಲೇ 46 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ. ಇದರಲ್ಲಿ 10 ಸಾವಿರದಿಂದ 11 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆ ನಾವು ಮನವಿ ಮಾಡಿದ್ದೇವೆ. ಕೇಂದ್ರ ತಂಡದವರಿಗೂ ಈ ಕುರಿತು ಮನವಿ ಮಾಡಿದ್ದೇವೆ ಎಂದು ಡಾ. ಜಿ. ಪರಮೇಶ್ವರ ಹೇಳಿದರು.

ಅನೇಕ ಕಾರಣಗಳಿಂದ ಹಿಂದೆ 79ಎ, 79ಬಿ ಕಲಂಗಳನ್ನು ಕೈಬಿಡಲಾಗಿತ್ತು. ಈಗ ಅವುಗಳನ್ನು ಪುನರ್ ಪರಿಶೀಲಿಸಬೇಕು ಎಂದು ಸಾಕಷ್ಟು ಮನವಿಗಳು ಬಂದಿವೆ. ಅದನ್ನು ಪರಿಶೀಲಿಸುತ್ತಿದ್ದೇವೆ ಎಂದರು.

ಬರದ ಪರಿಣಾಮ ಜಿಎಸ್‌ಟಿ ಮೇಲೂ ಬೀಳುವ ಸಾಧ್ಯತೆ ಕರ್ನಾಟಕವು ನಿರಂತರವಾಗಿ ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಯಾವುದೇ ರೀತಿಯ ಕೊರತೆ ಅಥವಾ ತಪ್ಪು ಆಗದಂತೆ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಜಿಎಸ್‌ಟಿ ಸಂಗ್ರಹ ಮಾಡಲಾಗುತ್ತಿದೆ.
ನಮೂನೆ-7 ದುರುಪಯೋಗ ನಮೂನೆ-7 ದುರುಪಯೋಗದ ಕುರಿತು ಚುನಾವಣಾ ಆಯೋಗಕ್ಕೆ ನೀಡಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಡಾ. ಜಿ. ಪರಮೇಶ್ವರ್, ಅವರು ಅವರ ಕೆಲಸ ಮಾಡುತ್ತಾರೆ, ನಾವು ನಮ್ಮ ಕೆಲಸ ಮಾಡುತ್ತೇವೆ. ನಾವು ಸಾಕ್ಷ್ಯ ಸಹಿತ ದೂರು ನೀಡಿದ್ದೇವೆ. ನಮೂನೆ-7 ಅನ್ನು ದುರುಪಯೋಗ ಮಾಡಿಕೊಳ್ಳುತ್ತಾ ಇದ್ದದ್ದನ್ನ ರೆಡ್ ಹ್ಯಾಂಡ್ ಆಗಿ ನಾವು ಹಿಡ್ಕೊಂಡು ಅದನ್ನ ಕೊಟ್ಟಿದ್ದೇವೆ ಎಂದರು. ಒಬ್ಬ ವ್ಯಕ್ತಿ ಎಷ್ಟು ನಮೂನೆ -7 ಸಲ್ಲಿಸಬಹುದು? ಅದಕ್ಕೆ ಇತಿಮಿತಿ ಇಲ್ಲವೇ? ಒಬ್ಬರೇ 100, 200, 400 ಅರ್ಜಿಗಳನ್ನು ಸಲ್ಲಿಸಿದರೆ ಅದು ಯಾವ ರೀತಿ ಸಾಧ್ಯ? ಎಂದು ಪ್ರಶ್ನಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net