ಮತದಾನಕ್ಕಾಗಿ ಟೋಪಿ ಧರಿಸುವ ದಿನ ಬಂದರೆ ನನ್ನ ತಲೆಯನ್ನೇ ಕತ್ತರಿಸಿಕೊಳ್ಳುತ್ತೇನೆ: ಸಚಿವ ಬಂಡಿ ಸಂಜಯ್ ಕುಮಾರ್ Skull cap

untitled-design-26-690dc1021a9fa
Published on

ಹೈದರಬಾದ್​: ಹೈದರಾಬಾದ್‌ನ ಬೋರಬಂದದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಮತ ಪಡೆಯುವ ಆಸೆಯಿಂದ ಧಾರ್ಮಿಕ ಭಂಗಿ (Skull cap) ಮಾಡುತ್ತಿದ್ದಾರೆ ಎಂದು ಗೃಹ ಖಾತೆ ಸಚಿವ ಬಂಡಿ ಸಂಜಯ್ ಕುಮಾರ್ ಕಿಡಿಕಾರಿದ್ದಾರೆ.

ಮಂಗಳವಾರ (ನ​.11) ರಂದು ಉಪಚುನಾವಣೆ ನಡೆಯಲಿರುವ ಹೈದರಾಬಾದ್‌ನ ಜುಬಿಲಿ ಹಿಲ್ಸ್ ಕ್ಷೇತ್ರದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಬಂಡಿ ಸಂಜಯ್, ಇತ್ತೀಚೆಗೆ ನಡೆದ ಕಾಂಗ್ರೆಸ್ ಪ್ರಚಾರದಲ್ಲಿ ಮುಖ್ಯಮಂತ್ರಿಗಳು ತಲೆಗೆ ಟೋಪಿ ಧರಿಸಿದ್ದರು ಎಂದು ಅಣಕಿಸಿದ್ದಾರೆ.

ಮತದಾನಕ್ಕಾಗಿ ತಲೆಗೆ ಟೋಪಿ ಧರಿಸಬೇಕಾದ ಸಂದರ್ಭವೇನಾದರೂ ನನಗೆ ಬಂದರೆ, ನಾನು ನನ್ನ ತಲೆಯನ್ನೇ ಕತ್ತರಿಸಿಕೊಳ್ಳುತ್ತೇನೆ ಹೊರತು ಟೋಪಿ ಧರಿಸುವುದಿಲ್ಲ. ನಾನು ಕ್ಷಮೆಯಾಚಿಸದ ಹಿಂದೂ, ನಕಲಿ ನಮಾಜ್​ ಮಾಡುವ ಮೂಲಕ ಇತರ ಧರ್ಮಗಳನ್ನು ಅವಮಾನಿಸುವುದಿಲ್ಲ ಎಂದು ಹೇಳಿದರು.

ರೇವಂತ್ ರೆಡ್ಡಿ ಅವರೇ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರನ್ನು ನಿಮ್ಮ ದೇವಾಲಯದಲ್ಲಿ ಕೂರಿಸಿ ಅವರಿಂದ ಆರತಿ ಮಾಡಿಸಿ ಎಂದು ಕುಮಾರ್​ ಸವಾಲು ಹಾಕಿದರು.

ಅಜರುದ್ದೀನ್ ಮತ್ತು ಎಂಐಎಂ ನಂತಹ ಮುಸ್ಲಿಂ ನಾಯಕರು ಕೂಡ ಟೋಪಿಯನ್ನು ಧರಿಸಲಿಲ್ಲ. ಆದರೆ ಮತದ ಆಸೆಗಾಗಿ ಸಿಎಂ ರೇವಂತ್ ರೆಡ್ಡಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಅದನ್ನು ಧರಿಸಿದ್ದರು. ರೇವಂತ್​ ಅವರೇ ಅಜರುದ್ದೀನ್ ಅವರಿಗೆ ವಕ್ರತುಂಡ ಮಹಾಕಾಯ ಜಪಿಸುವಂತೆ ಹೇಳುವ ಧೈರ್ಯವಿದೆಯೇ? ಅಥವಾ ಹಿಂದೂಗಳ ಮತವನ್ನು ಪಡೆಯಲು ಓವೈಸಿಯನ್ನು ಭಾಗ್ಯಲಕ್ಷ್ಮಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಅವರಿಂದ ಆರತಿ ಮಾಡುಸುತ್ತೀರಾ ಎಂದು ಪ್ರಶ್ನೆ ಮಾಡಿದರು.

ಹೈದರಬಾದ್​ನ ಹಳೆಯ ನಗರದಲ್ಲಿ ಭಾಗ್ಯಲಕ್ಷ್ಮಿ ದೇವಸ್ಥಾನವಿದೆ. ಅಲ್ಲಿಗೆ ಅಕ್ಬರುದ್ದೀನ್ ಓವೈಸಿ ಅಥವಾ ಅಸಾದುದ್ದೀನ್ ಓವೈಸಿ ಎಂದಾದರೂ ಭೇಟಿ ನೀಡಿದ್ದಾರಾ? ಅಥವಾ ಆರತಿ ಬೆಳಗಿದ್ದಾರಾ? ಈ ಬಗ್ಗೆ ರೇವಂತ್​ ಉತ್ತರಿಸಬೇಕು. ಆ ನಾಯಕರು ಪ್ರಾರ್ಥನೆ ಮಾಡುವುದಿಲ್ಲ ಹಾಗೂ ತಿಲಕ ಇಡುವುದಿಲ್ಲ. ಆದರೆ, ಈ ಜನರು (ಕಾಂಗ್ರೆಸ್​ ನಾಯಕರು) ಮತಗಳ ಆಸೆಗಾಗಿ ಟೋಪಿ ಧರಿಸುತ್ತಾರೆ ಇದು ನಿಜವಾದ ನಾಚಿಕೆಗೇಡಿನ ಸಂಗತಿ ಎಂದರು.

ಇನ್ನು ಮತ ಚಲಾಯಿಸುವ ಮೊದಲು ಮುಖಗಳನ್ನು ಪರಿಶೀಲಿಸಬೇಕು ಎಂದು ಭಾರತೀಯ ಚುನಾವಣಾ ಆಯೋಗವನ್ನು ಸಂಜಯ್​ ಕುಮಾರ್​ ಒತ್ತಾಯಿಸಿದ್ದಾರೆ. ಸಂವಿಧಾನ ಮತ್ತು ಚುನಾವಣಾ ಆಯೋಗ ಎಲ್ಲರಿಗೂ ಒಂದೇ ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net