ಬಿಹಾರದಲ್ಲಿ ಕುದುರೆ ರೇಸ್ ಕ್ರೇಜ್; 33 ಸಾವಿರ ವೋಲ್ಟ್ ಟವರ್ ಏರಿದ ಜನ! | Bihar Horse Race

Bihar Horse Race
ಕುದುರೆ ರೇಸ್‌ ನೋಡಲು ವಿದ್ಯುತ್ ಟವರ್ ಏರಿದ ಜನ
Published on: 

Bihar Horse Race: ಬಿಹಾರದಲ್ಲಿ ಮಾಜಿ ಶಾಸಕ ಅನಂತ್ ಸಿಂಗ್ ಅವರ ಮಗಳ ಮದುವೆ ಹಿನ್ನೆಲೆ ಆಯೋಜಿಸಿದ್ದ ಕುದುರೆ ರೇಸ್ ಭಾರೀ ಜನಸಂದಣಿಯಿಂದಾಗಿ ಸುದ್ದಿಯಾಗಿದೆ. ರೇಸ್ ನೋಡಲು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದು, ಜಾಗ ಸಿಗದೆ ಕೆಲವರು 33 ಸಾವಿರ ವೋಲ್ಟ್ ವಿದ್ಯುತ್ ಟವರ್ ಏರಿ ಕುಳಿತಿದ್ದಾರೆ. ಈ ಘಟನೆ ಆತಂಕಕ್ಕೆ ಕಾರಣವಾಗಿದೆ.

ಬಿಹಾರದ ಪಾಟ್ನಾ ಜಿಲ್ಲೆಯ ಮೊಕಾಮಾ ಬಳಿಯ ನದವಾ ಗ್ರಾಮದಲ್ಲಿ ನವೆಂಬರ್ 25ರಂದು ಈ ಕುದುರೆ ರೇಸ್ ಆಯೋಜಿಸಲಾಗಿತ್ತು. ಮಾಜಿ ಶಾಸಕ ಅನಂತ್ ಸಿಂಗ್ ಅವರ ಮಗಳು ಶಿವಾಂಗಿ ಸಿಂಗ್ ಅವರ ವಿವಾಹದ ಪ್ರಯುಕ್ತ ನಡೆದ ಈ ಸ್ಪರ್ಧೆ ವೀಕ್ಷಿಸಲು ಬಿಹಾರ ಸೇರಿದಂತೆ ವಿವಿಧ ಭಾಗಗಳಿಂದ ಜನರು ಆಗಮಿಸಿದ್ದರು.

ರೇಸ್ ನೋಡಲು ಸೇರಿದ್ದರು ಲಕ್ಷಕ್ಕೂ ಹೆಚ್ಚು ಮಂದಿ

ಕುದುರೆ ರೇಸ್ ವೀಕ್ಷಿಸಲು ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಜಮಾಯಿಸಿದ್ದರು ಎನ್ನಲಾಗಿದೆ. ಭಾರೀ ಜನಸಂದಣಿಯಿಂದಾಗಿ ಸುತ್ತಮುತ್ತಲಿನ ರಸ್ತೆಗಳಲ್ಲಿ 10 ಕಿ.ಮೀ.ಗೂ ಹೆಚ್ಚು ದೂರ ಟ್ರಾಫಿಕ್ ಜಾಮ್ ಉಂಟಾಗಿತ್ತು. ರೇಸ್ ವೀಕ್ಷಿಸಲು ಸೂಕ್ತ ಸ್ಥಳ ಸಿಗದೆ ನೂರಾರು ಜನರು ಅಲ್ಲಿದ್ದ ವಿದ್ಯುತ್ ಟವರ್ ಏರಿ ಕುಳಿತಿದ್ದರು.

ವಿದ್ಯುತ್ ಟವರ್ ಏರಿದ ಜನ

ರೇಸ್ ವೀಕ್ಷಿಸಲು ಜನರು 33 ಸಾವಿರ ವೋಲ್ಟ್ ಹೈಟೆನ್ಷನ್ ವಿದ್ಯುತ್ ಟವರ್ ಏರಿರುವುದು ಆತಂಕಕ್ಕೆ ಕಾರಣವಾಗಿತ್ತು. ಇಂತಹ ಅಪಾಯಕಾರಿ ವಿದ್ಯುತ್ ವ್ಯವಸ್ಥೆಗಳ ಸಮೀಪ ಜನರು ಸೇರಿದ್ದರಿಂದ ಅನಾಹುತದ ಭೀತಿ ಎದುರಾಗಿತ್ತು.

ಅಂತಿಮ ಸುತ್ತು ಸ್ಥಗಿತ

ಜನಸಂದಣಿ ನಿಯಂತ್ರಣ ಮೀರುತ್ತಿರುವುದು ಹಾಗೂ ಜನರು ಅಪಾಯಕಾರಿ ಸ್ಥಳಗಳಲ್ಲಿ ನಿಂತು ರೇಸ್ ವೀಕ್ಷಿಸುತ್ತಿರುವುದನ್ನು ಗಮನಿಸಿದ ಅನಂತ್ ಸಿಂಗ್, ಯಾವುದೇ ಅನಾಹುತ ಸಂಭವಿಸದಂತೆ ಕುದುರೆ ರೇಸ್‌ನ ಅಂತಿಮ ಸುತ್ತನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ ಎನ್ನಲಾಗಿದೆ.

ಥಾರ್, ಬೈಕ್ ಬಹುಮಾನ

ಈ ಕುದುರೆ ರೇಸ್‌ನಲ್ಲಿ ವಿಜೇತರಾಗುವ ಕುದುರೆಯ ಮಾಲೀಕರಿಗೆ ಮೊದಲ ಬಹುಮಾನವಾಗಿ ಮಹೀಂದ್ರಾ ಥಾರ್, ಎರಡನೇ ಬಹುಮಾನವಾಗಿ ಬೈಕ್ ಹಾಗೂ ಮೂರನೇ ಬಹುಮಾನವಾಗಿ ಸ್ಕೂಟಿ ನೀಡುವುದಾಗಿ ಘೋಷಿಸಲಾಗಿತ್ತು. ಬಹುಮಾನದ ಆಕರ್ಷಣೆಯೂ ಸ್ಪರ್ಧೆಯ ಬಗ್ಗೆ ಭಾರೀ ಕುತೂಹಲ ಮೂಡಿಸಿತ್ತು.

ಇದನ್ನೂ ಓದಿ: ಗಾಳಿಯ ರಭಸಕ್ಕೆ 180 ಡಿಗ್ರಿ ತಿರುಗಿದ ತೂಗು ಸೇತುವೆ! ಕೂದಲೆಳೆ ಅಂತರದಲ್ಲಿ ಪಾರಾದ ಜರ್ಮನ್ ಪ್ರವಾಸಿಗ | German tourist

ಮದುವೆ ಸಂಭ್ರಮದ ಭಾಗವಾಗಿ ಆಯೋಜಿಸಿದ್ದ ಕುದುರೆ ರೇಸ್, ಭಾರೀ ಜನಸಂದಣಿ ಹಾಗೂ ವಿದ್ಯುತ್ ಟವರ್ ಏರಿದ ಜನರ ಘಟನೆಯಿಂದಾಗಿ ಈಗ ಗಮನ ಸೆಳೆದಿದೆ.