Hindu Priest Muslim Family: ಧರ್ಮ ಬೇರೆ ಆದ್ರೂ ಮಾನವೀಯತೆ ಒಂದೇ ಅನ್ನೋದಕ್ಕೆ ಜಮ್ಮು-ಕಾಶ್ಮೀರದ ಗಡಿ ಗ್ರಾಮವೊಂದರಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಕುಪ್ವಾರ ಜಿಲ್ಲೆಯ ಟೀಟ್ವಾಲ್‌ಗೆ ಹೋಗಿದ್ದ ಹಿಂದೂ ಅರ್ಚಕರೊಬ್ಬರು ಅಲ್ಲಿನ ಮುಸ್ಲಿಂ ಕುಟುಂಬದ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಕುಟುಂಬ ತೋರಿದ ಆತಿಥ್ಯಕ್ಕೆ ಮನಸೋತ ಅರ್ಚಕರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್‌ಸ್ಟಾಗ್ರಾಂ ಬಳಕೆದಾರ ಆಶು ಮಿಶ್ರಾ ಹಂಚಿಕೊಂಡಿರುವ ವಿಡಿಯೋದಲ್ಲಿ ಅರ್ಚಕರು ಬೆಳಗ್ಗೆ ಪ್ರಸಾದ ತಯಾರಿಸುತ್ತಿರುವುದು ಕಾಣಿಸುತ್ತದೆ. ಈ ವೇಳೆ ತಮ್ಮ ಆತಿಥೇಯ ಕುಟುಂಬದ ಬಗ್ಗೆ ಮಾತನಾಡಿರುವ ಅವರು, ಅಹ್ಬಾಜ್ ಖಾನ್ ಎಂಬ ಮುಸ್ಲಿಂ ವ್ಯಕ್ತಿಯ ಮನೆಯಲ್ಲಿ ತಂಗಿದ್ದಾಗಿ ಹೇಳಿದ್ದಾರೆ. ಕುಟುಂಬ ತಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿತು ಎಂದು ತಿಳಿಸಿದ್ದಾರೆ.
ಟೀಟ್ವಾಲ್‌ನ ಹಿಂದೂ ದೇವಸ್ಥಾನದ ಬಗ್ಗೆಯೂ ಅರ್ಚಕರು ಮಾತನಾಡಿದ್ದಾರೆ. ದೇವಸ್ಥಾನ ನಿರ್ಮಾಣದ ವೇಳೆ ಹಲವು ಸವಾಲುಗಳಿದ್ದರೂ ಅದನ್ನು ನಿರ್ಮಿಸಲಾಗಿದೆ. ಸದ್ಯ ಸುತ್ತಮುತ್ತ ಯಾವುದೇ ಹಿಂದೂ ಕುಟುಂಬಗಳು ವಾಸಿಸುತ್ತಿಲ್ಲ. ದೇವಸ್ಥಾನದಲ್ಲಿ ಪೂಜೆ ನಡೆಯುತ್ತಿದ್ದು, ಪೂಜೆಯ ಜವಾಬ್ದಾರಿಯನ್ನು ಹಿಂದೂ ಅರ್ಚಕರು ನೋಡಿಕೊಳ್ಳುತ್ತಿದ್ದಾರೆ. ಉಳಿದ ವ್ಯವಸ್ಥೆಗಳನ್ನು ಅಹ್ಬಾಜ್ ಖಾನ್ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕುಟುಂಬ ತಮ್ಮಿಗಾಗಿ ಕೊಠಡಿ ವ್ಯವಸ್ಥೆ ಮಾಡಿ, ಊಟವನ್ನೂ ನೀಡಿತ್ತು ಎಂದು ಅರ್ಚಕರು ಹೇಳಿದ್ದಾರೆ. ಆದರೆ ಪ್ರಯಾಣದ ವೇಳೆ ತಾವೇ ಅಡುಗೆ ಮಾಡಿಕೊಳ್ಳುವ ಅಭ್ಯಾಸ ಇರುವುದರಿಂದ ತಮ್ಮ ಊಟವನ್ನು ತಾವೇ ತಯಾರಿಸಿಕೊಂಡಿದ್ದಾರೆ. ಕುಟುಂಬ ತೋರಿದ ಗೌರವ ಮತ್ತು ಆತಿಥ್ಯ ತಮ್ಮ ಹೃದಯ ಗೆದ್ದಿದೆ ಎಂದು ಅವರು ಹೇಳಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಕುಟುಂಬದ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೇರೆ ಧರ್ಮದವರು ಪರಸ್ಪರ ಗೌರವದಿಂದ ಬದುಕಬೇಕು ಎಂದು ಕೆಲವರು ಹೇಳಿದ್ದಾರೆ. ಅರ್ಚಕರ ಸುರಕ್ಷತೆ ಬಗ್ಗೆ ಒಬ್ಬರು ಕಳವಳ ವ್ಯಕ್ತಪಡಿಸಿದಾಗ, ಪ್ರೀತಿ ಹೆಚ್ಚಬೇಕೆಂದರೆ ಯಾರಾದರೂ ಮೊದಲ ಹೆಜ್ಜೆ ಇಡಬೇಕು ಎಂದು ಅರ್ಚಕರು ಪ್ರತಿಕ್ರಿಯಿಸಿದ್ದಾರೆ.
ಟೀಟ್ವಾಲ್‌ಗೆ ಐತಿಹಾಸಿಕ ಶಾರದಾ ಪೀಠದ ಜೊತೆ ಹಳೆಯ ನಂಟಿದೆ. ಶಾರದಾ ಪೀಠ ಪ್ರಾಚೀನ ಹಿಂದೂ ಧಾರ್ಮಿಕ ಹಾಗೂ ಜ್ಞಾನ ಕೇಂದ್ರವಾಗಿದ್ದು, ವಿಭಜನೆಗೂ ಮುನ್ನ ಟೀಟ್ವಾಲ್ ಶಾರದಾ ಯಾತ್ರೆಗೆ ಪ್ರಮುಖ ತಾಣವಾಗಿತ್ತು. ಇಲ್ಲಿನ ದೇವಸ್ಥಾನವನ್ನು ಪುನರ್‌ನಿರ್ಮಿಸಿ 2023ರಲ್ಲಿ ಮತ್ತೆ ತೆರೆಯಲಾಯಿತು. ಇದರಿಂದ ಕಾಶ್ಮೀರದ ಧಾರ್ಮಿಕ ಪರಂಪರೆಯ ಜೊತೆಗಿನ ಹಳೆಯ ಸಂಪರ್ಕ ಮತ್ತೆ ಬೆಸೆದಂತಾಗಿದೆ. (ಏಜೆನ್ಸೀಸ್)