ಶೆಡ್‌ಗೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ; ಆರೋಪಿಗಳಿಗೆ 6 ಮಂದಿಗೆ 20 ವರ್ಷ ಕಠಿಣ ಶಿಕ್ಷೆ

law
Published on

ಬೆಳಗಾವಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಹಾಗೂ ಪ್ರಚೋದನೆ ನೀಡಿದ 6 ಜನರಿಗೆ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಢ ವಿಧಿಸಿ ಜಿಲ್ಲಾ ಪೋಕ್ಸೊ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿದೆ.

ರಾಯಬಾಗ ತಾಲ್ಲೂಕಿನ ನಸಲಾಪುರದ ಸಚಿನ ಬಾಬಾಸಾಹೇಬ ರಾಯಮಾನೆ, ರೂಪಾ ಬಾಬಾಸಾಹೇಬ ಮಾನೆ, ರಾಕೇಶ  ಬಾಬಾಸಾಹೇಬ ರಾಯಮಾನೆ, ಚಿಕ್ಕೋಡಿ ತಾಲ್ಲೂಕಿನ ಗಳತಗಾದ ರೋಹಿಣಿ ಶ್ರೀಮಂತ ದೀಕ್ಷಿತ, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್‌ ತಾಲ್ಲೂಕಿನ ಕುಪ್ಪವಾಡದ ವಿನೋದ ಸುರೇಶ ರಾಯಮಾನೆ, ವಿಜಯ ತಾನಾಜಿ ಸಾಳುಂಕೆ ಶಿಕ್ಷೆಗೆ ಒಳಗಾದವರು.

ಸಚಿನ ರಾಯಮಾನೆ ಎಂಬಾತನು, ‘ನಿನ್ನನ್ನು ಮದುವೆಯಾಗುತ್ತೇನೆ’ ಎಂದು ನಂಬಿಸಿ ಬಾಲಕಿಯನ್ನು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಗಗನಬಾವಡಾ ತಾಲ್ಲೂಕಿನ ನಿಗದಿವಾಡಿ ವೇಶ್ರಾಪ್‌ ಗ್ರಾಮಕ್ಕೆ ಕರೆದೊಯ್ದಿದ್ದ. ಅಲ್ಲಿನ ಮನೆಯೊಂದರ ಶೆಡ್‌ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಉಳಿದ ಆರೋಪಿಗಳು ಅವನಿಗೆ ಪ್ರಚೋದನೆ ನೀಡಿದ್ದರು. ಅಪ್ರಾಪ್ತೆ ಶೆಡ್‌ನಿಂದ ಹೊರಗೆ ಬರದಂತೆ ತಡೆದಿದ್ದರು. 3 ಲಕ್ಷ ರೂ. ಕೊಟ್ಟರೆ, ನಿಮ್ಮ ಮಗಳನ್ನು ವಾಪಸ್‌ ತಂದುಬಿಡುವುದಾಗಿ ಬಾಲಕಿ ತಂದೆಗೆ ಬೆದರಿಕೆ ಹಾಕಿದ್ದರು. ಈ ಸಂಬಂಧ ತಂದೆ ನೀಡಿದ ದೂರು ಆಧರಿಸಿ, ಚಿಕ್ಕೋಡಿಯ ತನಿಖಾಧಿಕಾರಿ ಎಂ.ಎಸ್‌.ನಾಯ್ಕರ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಿ.ಎಂ.ಪುಷ್ಪಲತಾ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ತೀರ್ಪು ನೀಡಿದ್ದಾರೆ. ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಪರಿಹಾರ ಪಡೆಯುವಂತೆ ಸಂತ್ರಸ್ತೆ ತಂದೆಗೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್‌.ವಿ.ಪಾಟೀಲ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net