

ಬೆಂಗಳೂರು : ದೇಶದಲ್ಲೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಯನ್ನು ರಾಜ್ಯ ಸರ್ಕಾರ ನಡೆಸಲಿದೆ. ಜತೆಗೆ ಮಾಜಿ ದೇವದಾಸಿಯರ ಸರ್ವೇ ನಡೆಯಲಿದ್ದು, ಜಿಲ್ಲಾ ಮತ್ತು ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಹಿತಿ ದಾಖಲಿಸಲು 45 ದಿನಗಳ ಅವಕಾಶ ಕಲ್ಪಿಸಲಾಗಿದೆ.
ಲಿಂಗತ್ವ ಅಲ್ಪಸಂಖ್ಯಾತರ ಮತ್ತು ಮಾಜಿ ದೇವದಾಸಿಯರ ಸರ್ವೇ ಜವಾಬ್ದಾರಿಯನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ವಹಿಸಿಕೊಂಡಿದೆ. ಜಿಲ್ಲಾ, ತಾಲೂಕು ಮತ್ತು ಪಟ್ಟಣ ಸೇರಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿಯನ್ನು ನಿಗದಿ ಮಾಡಲಾಗಿದೆ. ಅಲ್ಲಿಗೆ ದೇವದಾಸಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಬಂದು ನೋಂದಣಿ ಮಾಡಿಸಬೇಕಾಗಿದೆ.
ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗಾಗಿ ಕರ್ಮಿಣಿ ವೆಬ್ ಅಪ್ಲಿಕೇಷನ್‌ನ್ನು ಸಿದ್ಧಪಡಿಸಲಾಗಿದೆ. ಕರ್ನಾಟಕ ನಿವಾಸಿಗಳು ಎಂದು ದೃಢೀಕರಿಸಲು ಆಧಾರ್ ಕಡ್ಡಾಯವಾಗಿದೆ. ಆಧಾರ್ ನಂಬರ್, ಹೆಸರು, ವಿಳಾಸ, ಕೆಲಸ, ವಿದ್ಯಾಭ್ಯಾಸ ಮತ್ತು ಸಮಾಜದಲ್ಲಿ ಏನು ಆಗಬಯಸುತ್ತೀರಾ ಎಂಬ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಸರ್ವೇಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರೇ ಜೋಡಿಸಿಕೊಂಡಿರುವುದು ವಿಶೇಷವಾಗಿದೆ. ಸಮೀಕ್ಷಾ ಕಾರ್ಯನಿರ್ವಹಣೆಗೆ ಜಿಲ್ಲಾಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಸಮಿತಿಗಳನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು, ಎನ್‌ಜಿಒ ಸೇರಿಸಿಕೊಂಡು ರಚಿಸಲಾಗಿದೆ.
ಮರು ಸಮೀಕ್ಷೆ
ಮಾಜಿ ದೇವದಾಸಿಯರ ಮರು ಸಮೀಕ್ಷೆ ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಮತ್ತು ವಿಜಯನಗರದಲ್ಲಿ ನಡೆಯಲಿದೆ. ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಪುನರ್ವಸತಿ ಕಲ್ಪಿಸಲು ಸರ್ಕಾರ ಮುಂದಾಗಿದೆ. ಸೇವಾ ಸಿಂಧು ಮೂಲಕ ಮಾಜಿ ದೇವದಾಸಿಯರ ಮರು ಸಮೀಕ್ಷೆ ನಡೆಯಲಿದೆ.
ಎರಡೂ ಸಮೀಕ್ಷೆಗಳನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಕೈಗೊಳ್ಳಲಿದ್ದಾರೆ. ಸೋಮವಾರದಿಂದ ಶುರುವಾಗಿ 45 ಕಚೇರಿ ಕೆಲಸದ ದಿನಗಳಲ್ಲಿ ಮುಕ್ತಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆ ರೂಪಿಸಲು ದತ್ತಾಂಶ ಪೂರಕ
ರಾಜ್ಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಎಷ್ಟು ಜನರಿದ್ದಾರೆ ಎಂಬ ದತ್ತಾಂಶವಿಲ್ಲ. ಆದರಿಂದ ಸರ್ಕಾರ ಯಾವುದೇ ಯೋಜನೆ ರೂಪಿಸಬೇಕಾದರೂ ಅಸ್ಪಷ್ಟವಾಗುತ್ತಿದೆ. ಆದರಿಂದ ಸರ್ವೇ ನಡೆಸಿ ನಿಖರ ಮಾಹಿತಿ ಇದ್ದರೇ ಅವರ ಪುನರ್ ವಸತಿ ಕಲ್ಪಿಸಲು ಮತ್ತು ಸಾಮಾಜಿಕ, ಶೈಕ್ಷಣಿಕವಾಗಿ ಯೋಜನೆ ರೂಪಿಸಲು ಅನುಕೂಲವಾಗಲಿದೆ. ಇದೇ ಉದ್ದೇಶಕ್ಕೆ ದೇಶದಲ್ಲಿಯೇ ಮೊದಲು ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿಖರ ಮಾಹಿತಿ ಸಂಗ್ರಹ
15 ಜಿಲ್ಲೆಗಳಲ್ಲಿ ಮಾಜಿ ದೇವದಾಸಿಯರು 45 ಸಾವಿರ ಇದ್ದಾರೆ ಎಂಬ ಮಾಹಿತಿ ಇದೆ. ಸರ್ಕಾರದ ದಾಖಲೆ ಪ್ರಕಾರ 37 ಸಾವಿರ ಎನ್ನಲಾಗುತ್ತಿದೆ. ಸ್ಪಷ್ಟವಾದ ಮಾಹಿತಿ ಬದಲು ನಿಖರ ದತ್ತಾಂಶ ಸಂಗ್ರಹಿಸಲು ಮರು ಸರ್ವೇ ನಡೆಸಲಾಗುತ್ತಿದೆ. ಈಗಾಗಲೇ ಸರ್ಕಾರ ಪುನರ್ ವಸತಿಗೆ, ಆರೋಗ್ಯ ಯೋಜನೆ, ಕೃಷಿ ಜಮೀನು ಮಂಜೂರಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅರ್ಹರಿಗೆ ತಲುಪಿಸುವ ಉದ್ದೇಶದಿಂದ ಸರ್ವೇ ನಡೆಸಲಾಗುತ್ತಿದೆ.