Delhi CJP Protest: ನವದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆಗೆ ಪೊಲೀಸರು ನಿರ್ಬಂಧ ವಿಧಿಸಿರುವುದಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚುನಾವಣೆಗಳ ಬಗ್ಗೆ ಜನ ಪ್ರಶ್ನೆ ಕೇಳಿದರೆ ಸರ್ಕಾರ ಉತ್ತರ ಕೊಡಬೇಕು. ಅದನ್ನು ಬಿಟ್ಟು ರಾಜಧಾನಿಯನ್ನೇ ಕೋಟೆಯಂತೆ ಮಾಡುವುದು ಸರಿಯಲ್ಲ ಎಂದು ಅವರು ಟೀಕಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಸಿಜೆಪಿ ನಾಯಕರು ಸೇರಿದಂತೆ ನೂರಾರು ಪ್ರತಿಭಟನಾಕಾರರನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಶಶಿ ತರೂರ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆದಿವೆ ಎಂಬ ವಿಶ್ವಾಸ ಸರ್ಕಾರಕ್ಕಿದ್ದರೆ ಜನರ ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಎಂದು ತರೂರ್ ಹೇಳಿದ್ದಾರೆ. ಪ್ರಶ್ನೆಗಳಿಗೆ ಉತ್ತರಿಸುವ ಬದಲು ದೆಹಲಿಯನ್ನೇ ಕೋಟೆಯಂತೆ ಮಾಡುವುದು ಜನರ ಅನುಮಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಬ್ಯಾರಿಕೇಡ್‌ಗಳನ್ನು ಹಾಕುವುದರಿಂದ ಚುನಾವಣಾ ಆಯೋಗದ ಮೇಲಿನ ಜನರ ನಂಬಿಕೆಯನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಜನರ ಪ್ರಶ್ನೆಗಳಿಗೆ ಉತ್ತರ ಕೊಟ್ಟಾಗಲೇ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾತ್ರಿ ದೆಹಲಿಗೆ ವಾಪಸ್ ಬಂದಾಗ ಕಂಡ ಪರಿಸ್ಥಿತಿ ಅಚ್ಚರಿ ಮೂಡಿಸಿತು ಎಂದು ತರೂರ್ ಹೇಳಿದ್ದಾರೆ. ಕೆಲವೇ ನೂರು ಮೀಟರ್‌ಗಳಿಗೊಮ್ಮೆ ಪೊಲೀಸ್ ತಪಾಸಣೆ, ಕಾಂಕ್ರೀಟ್ ತಡೆಗೋಡೆಗಳು ಮತ್ತು ರಸ್ತೆಗಳ ಮೇಲೆ ಮೊಳೆಗಳಿರುವ ತಡೆಪಟ್ಟಿಗಳನ್ನು ಹಾಕಲಾಗಿತ್ತು ಎಂದು ತಿಳಿಸಿದ್ದಾರೆ. ನಗರದಾದ್ಯಂತ ಸುಮಾರು 22 ಸಾವಿರ ಪೊಲೀಸ್ ಮತ್ತು ಅರೆಸೇನಾ ಸಿಬ್ಬಂದಿಯನ್ನು ನಿಯೋಜಿಸಿರುವುದು, 250 ರೈಲುಗಳ ಸಂಚಾರ ರದ್ದಾಗಿರುವುದು ಹಾಗೂ 45 ಮೆಟ್ರೋ ನಿಲ್ದಾಣಗಳನ್ನು ಮುಚ್ಚಿರುವ ವರದಿಗಳನ್ನೂ ಅವರು ಉಲ್ಲೇಖಿಸಿದ್ದಾರೆ. ಚುನಾವಣೆಗಳ ಬಗ್ಗೆ ಶಾಂತಿಯುತವಾಗಿ ಪ್ರಶ್ನೆ ಕೇಳುವ ಯುವಕರನ್ನು ವಶಕ್ಕೆ ಪಡೆಯುತ್ತಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಹೃದಯಭಾಗದಲ್ಲೇ ಅಂತರ್ಜಾಲ ಸೇವೆ ಸ್ಥಗಿತಗೊಳಿಸಿರುವ ಕ್ರಮವನ್ನು ತರೂರ್ ಟೀಕಿಸಿದ್ದಾರೆ. ಜನರ ಓಡಾಟಕ್ಕೂ ನಿರ್ಬಂಧ ವಿಧಿಸಿದ್ದು, ಪ್ರತಿಭಟನೆಗೆ ನಿಗದಿಪಡಿಸಿರುವ ಜಂತರ್ ಮಂತರ್‌ಗೆ ಹೋಗುವ ರಸ್ತೆಗಳನ್ನು ಬಂದ್ ಮಾಡಿರುವುದು ಹಳೆಯ ಕಾಲದ, ದಮನಕಾರಿ ಕ್ರಮ ಎಂದು ಹೇಳಿದ್ದಾರೆ. ಪ್ರತಿಭಟನೆ ನಡೆಸಲು ಅವಕಾಶ ಕೊಡಬೇಕಾದ ಜಾಗದಲ್ಲೇ ಜನರನ್ನು ತಡೆಯುತ್ತಿರುವುದನ್ನು ಪ್ರಶ್ನಿಸಿರುವ ಅವರು, ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇರಬೇಕು ಎಂದು ಹೇಳಿದ್ದಾರೆ.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ದೆಹಲಿಯಲ್ಲಿ ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಆದರೆ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಯ ಪ್ರಶ್ನೆ ಬಂದಾಗ ಇದೇ ವೇಗದಲ್ಲಿ ಕ್ರಮ ಕೈಗೊಳ್ಳುವುದು ಎಲ್ಲಿ ಹೋಗುತ್ತದೆ ಎಂದು ತರೂರ್ ಪ್ರಶ್ನಿಸಿದ್ದಾರೆ. ಮಹಿಳೆಯರ ಸುರಕ್ಷತೆಗೂ ಸರ್ಕಾರ ಇದೇ ರೀತಿಯ ತುರ್ತು ಗಮನ ಕೊಡಬೇಕು ಎಂಬುದು ಅವರ ವಾದ.
ತಮ್ಮ ಟೀಕೆಯನ್ನು ಮುಂದುವರಿಸಿದ ತರೂರ್, ‘ಎಮರ್ಜೆನ್ಸಿ’ (ತುರ್ತು ಪರಿಸ್ಥಿತಿ) ಎಂಬ ಪದವನ್ನು ನೆನಪಿಸುವಂತೆ ‘ಎಮರ್ಜೆನ್‌ಝೀ’ ಎಂಬ ಪದ ಬಳಸಿ ಸರ್ಕಾರದ ಕ್ರಮಗಳನ್ನು ವ್ಯಂಗ್ಯವಾಡಿದ್ದಾರೆ. ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡಬೇಕು. ಪ್ರತಿಭಟನಾಕಾರರು ಸೋಮವಾರ ಮತ್ತೆ ಬಂದರೆ, ಅಧಿಕಾರಿಗಳು ಮತ್ತೊಮ್ಮೆ ಇಡೀ ರಾಜಧಾನಿಯನ್ನೇ ಬಂದ್ ಮಾಡುತ್ತಾರೆಯೇ? ನಮ್ಮ ಯುವಜನತೆಗೆ ಘೋಷಣೆಯಾಗದ ತುರ್ತು ಪರಿಸ್ಥಿತಿಗಿಂತ ಉತ್ತಮವಾದದ್ದು ಬೇಕು ಎಂಬರ್ಥದಲ್ಲಿ ಅವರು ಹೇಳಿದ್ದಾರೆ.
ಚುನಾವಣೆಗಳ ಬಗ್ಗೆ ಜನರ ಪ್ರಶ್ನೆಗಳಿಗೆ ಉತ್ತರ ಕೊಡುವ ಬದಲು ಪ್ರತಿಭಟನೆಗಳನ್ನು ತಡೆಯುವುದು ಸರಿಯಲ್ಲ ಎಂಬುದು ಶಶಿ ತರೂರ್ ಅವರ ವಾದ. ದೆಹಲಿಯಲ್ಲಿ ಪ್ರತಿಭಟನೆಗೆ ವಿಧಿಸಿರುವ ನಿರ್ಬಂಧಗಳು ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿವೆ. (ಏಜೆನ್ಸೀಸ್)