ಆರೋಗ್ಯ ವೃದ್ಧಿಗೆ ಆಹಾರದ ಜತೆ ಹಣ್ಣು ಪೂರಕ

Mango-Jacquesan Fair
ಶಿವಮೊಗ್ಗ ಎಪಿಎಂಸಿ ಆವರಣದಲ್ಲಿ ಮಾವು-ಹಲಸಿನ ಮೇಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಮಾವು ಸವಿದರು. ಎಸ್.ಎನ್.ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಬಲ್ಕಿಷ್ ಬಾನು, ಎಸ್.ರವಿಕುಮಾರ್, ಸಿ.ಎಸ್.ಚಂದ್ರಭೂಪಾಲ್, ಬಿ.ಡಿ.ಭೂಕಾಂತ್, ವಿಜಯಕುಮಾರ್, ಗುರುದತ್ತ ಹೆಗಡೆ, ಎನ್.ಹೇಮಂತ್, ಅಕ್ಷಯ್, ಪ್ರಸನ್ನಕುಮಾರ್ ಇದ್ದರು.
Published on

ಶಿವಮೊಗ್ಗ: ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳುವಲ್ಲಿ ದೈನಂದಿನ ಆಹಾರದ ಜತೆಗೆ ಹಣ್ಣುಗಳು ಪೂರಕವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ವಿನೋಬನಗರ ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಆವರಣದಲ್ಲಿ ಶನಿವಾರ ಜಿಲ್ಲಾ ಹಾಪ್‌ಕಾಮ್ಸ್‌ನಿಂದ ಎರಡು ದಿನಗಳ ಮಾವು-ಹಲಸಿನ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಆರೋಗ್ಯಕ್ಕೆ ಪೂರಕವಾದ ಹಣ್ಣುಗಳ ಸೇವನೆ ಮಿತವಾಗಿರಬೇಕು ಎಂದರು.

ಸ್ಥಳೀಯವಾಗಿ ದೊರೆಯದಿರುವ ಅಪರೂಪದ ಹಾಗೂ ಪೌಷ್ಠಿಕಾಂಶಯುಕ್ತ ಹಣ್ಣಿನ ಬೆಳೆಗಳನ್ನು ಇಲ್ಲಿನ ಹವಾಗುಣಕ್ಕೆ ಒಗ್ಗಿಕೊಳ್ಳುವಂತೆ ಸಸಿಗಳನ್ನು ತಂದು ಪೋಷಿಸಿ ಜನಸಾಮಾನ್ಯರಿಗೆ ಸರಳವಾಗಿ ದೊರೆಯುವಂತೆ ಮಾರುಕಟ್ಟೆ ಸೌಲಭ್ಯ ದೊರೆಕಿಸುವಂತಾಗಬೇಕು ಎಂದು ಹೇಳಿದರು.

ಈ ರೀತಿಯ ಮಾವು ಮತ್ತು ಹಲಸಿನ ಪ್ರದರ್ಶನ ಮತ್ತು ಮಾರಾಟ ಮೇಳಗಳು ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿಯೂ ಆಯೋಜಿಸುವಂತಾಗಬೇಕು. ಈ ಮೇಳಗಳಿಂದ ಅಪರೂಪದ ಎಲ್ಲ ತಳಿಯ ಹಣ್ಣುಗಳ ಜನಸಾಮಾನ್ಯರಿಗೆ ದೊರೆಯಲಿವೆ. ಮಾತ್ರವಲ್ಲ ಯಾವುದೇ ಮದ್ಯವರ್ತಿಗಳ ಹಾವಳಿಯಿಲ್ಲದೆ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ.

ಹಾಪ್‌ಕಾಮ್ಸ್‌ನ ಅಭಿವೃದ್ಧಿಗೆ ಅಗತ್ಯವಿರುವ ನೆರವು, ಸಹಕಾರವನ್ನು ಸರ್ಕಾರದಿಂದ ಒದಗಿಸಿಕೊಡಲಾಗುವುದು ಎಂದರು.

ಎಂಎಲ್‌ಸಿ ಡಾ. ಧನಂಜಯ ಸರ್ಜಿ ಮಾತನಾಡಿ, ಪ್ರತಿ ವ್ಯಕ್ತಿಯೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ದೈನಂದಿನ ಆಹಾರದಲ್ಲಿ ಪೌಷ್ಟಿಕಾಂಶಯುಕ್ತ ಹಣ್ಣು, ತರಕಾರಿಗಳನ್ನು ಬಳಸಬೇಕು ಎಂದರು. ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಬಲ್ಕಿಷ್ ಬಾನು, ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ, ಹಾಪ್‌ಕಾಮ್ಸ್ ರಾಜ್ಯಾಧ್ಯಕ್ಷ ಬಿ.ಡಿ.ಭೂಕಾಂತ್, ಜಿಲ್ಲಾಧ್ಯಕ್ಷ ವಿಜಯಕುಮಾರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಅಕ್ಷಯ್, ಪ್ರಸನ್ನಕುಮಾರ್ ಮತ್ತಿತರರಿದ್ದರು.

ಮೇಳದಲ್ಲಿ ಮಿಯಾಝಾಕಿ ಮಾವು

ಎರಡು ದಿನಗಳ ಮೇಳದಲ್ಲಿ ಮಿಯಾಝಾಕಿ ಮಾವು ಆಕರ್ಷಣೆ ಕೇಂದ್ರಬಿಂದುವಾಗಿತ್ತು. ಜತೆಗೆ ಕೆಂಪು ದಂತ ಮಾವು, ಬಾಳೆ ಮಾವು ಮತ್ತು ಬೀಜರಹಿತ ಹಲಸು ಸೇರಿ ವಿವಿಧ ತಳಿಯ ಮಾವಿನಹಣ್ಣು, ಬಗೆಬಗೆಯ ಹಲಸಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net