ಉದ್ಯೋಗದ ಆಸೆ ತೋರಿಸಿ 5.90 ಲಕ್ಷ ರೂ. ವಂಚನೆ

cen police station
Published on

ಶಿವಮೊಗ್ಗ: ಪಾರ್ಟ್‌ಟೈಮ್ ಉದ್ಯೋಗ ಮಾಡಿ ಪ್ರತಿದಿನ ಒಂದರಿಂದ ಎರಡು ಸಾವಿರ ರೂ.ವರೆಗೆ ಆದಾಯ ಗಳಿಸಬಹುದೆಂದು ನಂಬಿಸಿ ಶಿವಮೊಗ್ಗದ ಮಹಿಳೆಗೆ 5.90 ಲಕ್ಷ ರೂ. ವಂಚಿಸಲಾಗಿದೆ.

ಶಿವಮೊಗ್ಗದ ಮಹಿಳೆ ಇನ್‌ಸ್ಟಾಗ್ರಾಂ ನೋಡುತ್ತಿದ್ದಾಗ ಪಾರ್ಟ್‌ಟೈಮ್ ಜಾಬ್ ಜಾಹೀರಾತು ಗಮನಿಸಿದ್ದರು. ಅದರ ಲಿಂಕ್ ಕ್ಲಿಕ್ ಮಾಡಿದಾಗ ವಾಟ್ಸ್‌ಆ್ಯಪ್ ಓಪನ್ ಆಗಿತ್ತು. ನಂತರ ವಿಡಿಯೋ ವೀಕ್ಷಿಸಿ ಆದಾಯ ಗಳಿಸಿ ಎಂದು ತಿಳಿಸಿ ಮಹಿಳೆಯನ್ನು ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಲಾಗಿತ್ತು. ಟಾಸ್ಕ್ ಪೂರೈಸಿ ಹಣ ಸಂಪಾದಿಸಬಹುದೆಂದು ತಿಳಿಸಲಾಗಿತ್ತು. ಮೊದಲ ದಿನ ಮಹಿಳೆಗೆ ವಿವಿಧ ಟಾಸ್ಕ್ ನೀಡಿಲಾಗಿತ್ತು. ಟಾಸ್ಕ್ ಪೂರೈಸಿದ ನಂತರ 1,200 ರೂ. ಅನ್ನು ಮಹಿಳೆಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿತ್ತು.

ಮರುದಿನ ವಿವಿಧ ಟಾಸ್ಕ್‌ಗಳನ್ನು ನೀಡಿ ಹೆಚ್ಚಿನ ಆದಾಯ ಗಳಿಸಬಹುದೆಂದು ಆಸೆ ಹುಟ್ಟಿಸಲಾಗಿದೆ. ಈ ಟಾಸ್ಕ್ ಪೂರೈಸಲು ಹಣ ಹೂಡಿಕೆ ಮಾಡಬೇಕು. ಟಾಸ್ಕ್ ಮುಗಿದ ಮೇಲೆ ಲಾಭಾಂಶದ ಜತೆಗೆ ಈ ಹಣವನ್ನೂ ಹಿಂದಿರುಗಿಸಲಾಗುತ್ತದೆ ಎಂದು ಟೆಲಿಗ್ರಾಂ ಮೂಲಕವೇ ನಂಬಿಸಲಾಯಿತು. ಹಾಗಾಗಿ ಮಹಿಳೆ ಹಂತ ಹಂತವಾಗಿ 2.93 ಲಕ್ಷ ರೂ. ಹೂಡಿಕೆ ಮಾಡಿದ್ದರು. ಸ್ವಲ್ಪ ಸಮಯದ ಬಳಿಕ ತಮ್ಮ ಹಣ ಹಿಂದಿರುಗಿಸುವಂತೆ ಮಹಿಳೆ ಮನವಿ ಮಾಡಿದಾಗ, ನಿಮ್ಮ ಅಕೌಂಟ್ ಫ್ರೀಜ್ ಆಗಿದೆ ಎಂದು ಟೆಲಿಗ್ರಾಂನಲ್ಲಿ ತಿಳಿಸಲಾಗಿತ್ತು.

ಪುನಃ ಎರಡು ಲಕ್ಷ ರೂ. ಹೂಡಿಕೆ ಮಾಡಿದರೆ ಫ್ರೀಜ್ ಆಗಿರುವ ಅಕೌಂಟ್‌ನಿಂದ ಹಣ ಬಿಡಿಸಿ ಕೊಡುತ್ತೇವೆ ಎಂದು ಮಹಿಳೆಗೆ ನಂಬಿಸಲಾಯಿತು. ಆದ್ದರಿಂದ ಮಹಿಳೆ 2 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದರು. ಆ ಬಳಿಕ ನಿಮ್ಮ ಹಣಕ್ಕೆ ಶೇ.30ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ ಎಂದು ಟೆಲಿಗ್ರಾಂನಲ್ಲಿ ಹೊಸ ಸಬೂಬು ಹೇಳಲು ಆರಂಭಿಸಿದರು. ಆಗ ಅನುಮಾನಗೊಂಡ ಮಹಿಳೆ ಪರಿಚಿತರಲ್ಲಿ ವಿಷಯ ತಿಳಿಸಿದ್ದಾರೆ. ವಂಚನೆಗೊಳಗಾದ ವಿಷಯ ತಿಳಿಯುತ್ತಲೇ ಶಿವಮೊಗ್ಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net