ವಿವಾಹದ ಭರವಸೆ ತಪ್ಪಿದ್ದಕ್ಕೆ: ಅತ್ಯಾಚಾರ ಕೇಸ್ ದಾಖಲು!

highcourt
Published on

ಬೆಂಗಳೂರು: ವಿವಾಹವಾಗುವುದಾಗಿ ಭರವಸೆ ನೀಡಿ ಬಳಿಕ ಮಾತು ತಪ್ಪಿದ್ದಕ್ಕೆ ಅತ್ಯಾಚಾರ ಆರೋಪದಲ್ಲಿ ವಿಚಾರಣೆಗೆ ಒಳಪಡಿಸುವುದು ಅವಿವೇಕತನವಾಗಲಿದೆ ಎಂದಿರುವ ಹೈಕೋರ್ಟ್, ಈ ಸಂಬಂಧ ವ್ಯಕ್ತಿಯೋರ್ವರ ಮೇಲೆ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಿ ಆದೇಶಿಸಿದೆ.

ಅಮೆರಿಕದಲ್ಲಿ ನೆಲೆಸಿರುವ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಸಂತೋಷ್ ಶೆಟ್ಟಿ ವಿರುದ್ಧ ಅತ್ಯಾಚಾರ ಮತ್ತು ಅವರ ಕುಟುಂಬದವರ ವಿರುದ್ಧ ವಂಚನೆ ಆರೋಪದಲ್ಲಿ ಕುಂದಾಪುರ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ದಾಖಲೆಗಳ ಪರಿಶೀಲಿಸಿದ ನ್ಯಾಯಪೀಠ, ಸಂತೋಷ್ ಶೆಟ್ಟಿ ವಿದೇಶಕ್ಕೆ ತೆರಳಿದ ಬಳಿಕ ದೂರುದಾರೆ ಮಹಿಳೆಯೊಂದಿಗೆ ಹಲವು ದಿನಗಳ ಕಾಲ ವಾಟ್ಸ್‌ಅಪ್ ಸಂಭಾಷಣೆ ನಡೆಸಿದ್ದಾರೆ. ಆದರೆ, ಎಲ್ಲಿಯೂ ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಚರ್ಚಿಸಿಲ್ಲ.

ಅಲ್ಲದೆ, ದೂರುದಾರರು ಮತ್ತು ಅರ್ಜಿದಾರರ ನಡುವೆ ಹಲವು ವ್ಯತ್ಯಾಸಗಳು ಕಂಡುಬಂದಿದ್ದು, ಇದೇ ಕಾರಣದಿಂದ ನಿಶ್ಚಿತಾರ್ಥವೂ ಮುರಿದು ಬಿದ್ದಿದೆ. ಅರ್ಜಿದಾರರು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿಲ್ಲ. ಮದುವೆಗೂ ಮುನ್ನ ಆಗಿರುವ ನಿಶ್ಚಿತಾರ್ಥವೂ ಮುರಿದು ಬಿದ್ದ ಪರಿಣಾಮ ವಿವಾಹ ರದ್ದಾಗಿದೆ. ಆದ್ದರಿಂದ ಈ ಪ್ರಕರಣ ವಂಚನೆ ಆರೋಪದಲ್ಲಿ ಬರುವುದಿಲ್ಲ. ಆದ್ದರಿಂದ ಪ್ರಕರಣದ ಮುಂದುವರೆಗೆಗೆ ಅವಕಾಶ ನೀಡಿದಲ್ಲಿ ಕಾನೂನಿನ ದುರುಪಯೋಗವಾಗಲಿದೆ ಎಂದು ತಿಳಿಸಿರುವ ನ್ಯಾಯಪೀಠ,ಅರ್ಜಿಯನ್ನು ಪುರಸ್ಕರಿಸಿ ಪ್ರಕರಣ ರದ್ದುಪಡಿಸುವ ಆದೇಶ ಮಾಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net