

ಶಿವಮೊಗ್ಗ: ಭದ್ರಾ ಜಲಾಶಯದ ಸುರಕ್ಷತೆಗೆ ಧಕ್ಕೆ ತರುವ ಶುದ್ಧ ನೀರಿನ ಘಟಕದ ಕಾಮಗಾರಿಯನ್ನು ಜಲಾಶಯದ ಬುಡದಲ್ಲೇ ಮಾಡಲಾಗುತ್ತಿದೆ. ಕಾಮಗಾರಿ ನಿಲ್ಲಿಸದಿದ್ದರೆ ಭವಿಷ್ಯದಲ್ಲಿ ಅಪಾಯ ನಿಶ್ಚಿತ ಎಂದು ರೈತ ನಾಯಕ ಕೆ.ಟಿ.ಗಂಗಾಧರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನೀರಾವರಿ ಇಲಾಖೆ ಪ್ರಕೃತಿ ಮೇಲೆ ದಬ್ಬಾಳಿಕೆ ಮತ್ತು ವಿಕೃತಿ ಮೆರೆಯುತ್ತಿದೆ. ಜಲಾಶಯವು ಮಧ್ಯ ಕರ್ನಾಟಕದಲ್ಲೇ ಬಹುದೊಡ್ಡ ನೀರಾವರಿ ಮತ್ತು ಕುಡಿಯುವ ನೀರಿನ ಮೂಲ. 6 ಜಿಲ್ಲೆಗಳ 4.50 ಲಕ್ಷ ಎಕರೆ ಜಮೀನಿಗೆ ನೀರು ಒದಗಿಸುತ್ತದೆ. ಕುಡಿಯುವ ನೀರಿಗೆ 7.5 ಟಿಎಂಸಿ ನೀರು ಮೀಸಲಿಡಲಾಗಿದೆ. ಇದೀಗ ಶುದ್ಧ ನೀರಿನ ಘಟಕವನ್ನು ಜಲಾಶಯದ ಬಳಿ ಸ್ಥಾಪಿಸುತ್ತಿರುವುದು ಒಳ್ಳೆಯದಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಜಲಾಶಯದಿಂದ ಕುಡಿಯುವ ನೀರಿನ ಯೋಜನೆ ಮಾಡುವುದು ತಪ್ಪಲ್ಲ. ಆದರೆ ಜಲಜೀವನ್ ಮಿಷನ್ ಯೋಜನೆಯಡಿ ಶುದ್ಧ ನೀರಿನ ಘಟಕವನ್ನು ಜಲಾಶಯ ಬಳಿ ಆರಂಭಿಸಲು ಹೊರಟಿರುವುದು ಆತಂಕಕ್ಕೆ ಕಾರಣವಾಗಿದೆ. 500 ಕೋಟಿ ರೂ. ವೆಚ್ಚದ ಈ ಘಟಕಕ್ಕೆ 16 ಎಕರೆ ಪ್ರದೇಶವನ್ನು ಆಂಧ್ರ ಮೂಲದ ಗುತ್ತಿಗೆದಾರನಿಗೆ ನೀಡಲಾಗಿದೆ ಎಂದು ಕಿಡಿಕಾರಿದರು.
ಜಲಾಶಯವು ಈಗಾಗಲೇ ಅತ್ಯಂತ ಸೂಕ್ಷ್ಮ, ಸುರಕ್ಷಿತ ಪ್ರದೇಶ. ಇಲ್ಲಿ ಯಾವುದೆ ಯೋಜನೆಗಳು, ವಸತಿ ಗೃಹ, ಬೃಹತ್ ಕಟ್ಟಡಗಳನ್ನಾಗಲಿ ನಿರ್ಮಿಸುವಂತಿಲ್ಲ. ಆದರೂ ಜಲಾಶಯದಿಂದ ಕೇವಲ 500 ಮೀ. ಅಂತರದಲ್ಲಿ ತಳಭಾಗದಲ್ಲಿ ಘಟಕ ಸ್ಥಾಪನೆ ಆಗುತ್ತಿರುವುದು ಅವೈಜ್ಞಾನಿಕ. ಜಲಸಂಪನ್ಮೂಲ ಸಚಿವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ಯೋಜನೆಯ ಮಾಹಿತಿ ಇಲ್ಲವೇ ಎಂದು ಪ್ರಶ್ನಿಸಿದರು.
ಪ್ರಮುಖರಾದ ಯಶವಂತರಾವ್ ಘೋರ್ಪಡೆ, ಪುಟ್ಟಪ್ಪ, ಹಿರಣ್ಣಯ್ಯ, ಜಗದೀಶ್ ನಾಯ್ಕ, ಮೂಡಲಗಿರಿಯಪ್ಪ, ಕೃಷ್ಣಮೂರ್ತಿ, ಅಣ್ಣಪ್ಪ, ಮಂಜಪ್ಪ ಸುದ್ದಿಗೋಷ್ಠಿಯಲ್ಲಿದ್ದರು.