ವಿದ್ಯುತ್ ಸ್ಪರ್ಶದಿಂದ ವಿದ್ಯಾರ್ಥಿ ಸಾವು

KDR STUDENT
ಮೃತ ಬಾಲಕನ ಪಾಲಕರಿಗೆ 5 ಲಕ್ಷ ರೂ. ಪರಿಹಾರದ ಚೆಕ್‌ನ್ನು ಕುಪ್ಪಾಳು ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ಧನರಾಜ್ ಹಸ್ತಾಂತರಿಸಿದರು. ಬಸವರಾಜಪ್ಪ, ವೈ.ಎಸ್.ವಿ. ದತ್ತ, ಜಿಗಣೇಹಳ್ಳಿ ನೀಲಕಂಠಪ್ಪ, ಆನಂದ್ ಮತ್ತಿತರರಿದ್ದರು.
Published on

ಕಡೂರು: ತಾಲೂಕಿನ ಅಂಚೆಚೋಮನಹಳ್ಳಿ ಸಮೀಪದ ಕುಪ್ಪಾಳು ಮುರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿದ್ದ ನೇರಳೆ ಹಣ್ಣು ಕೀಳಲು ಮರ ಹತ್ತಿದ್ದ ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಶನಿವಾರ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾನೆ.
ಹುಲ್ಲೇಹಳ್ಳಿ ಗ್ರಾಮದ ವಿದ್ಯಾರ್ಥಿ ಆಕಾಶ್(13) ವಿದ್ಯುತ್ ಅವಘಡದಿಂದ ಮೃತಪಟ್ಟ ದುರ್ದೈವಿ. ನೇರಳೆ ಹಣ್ಣು ಕೀಳಲು ಆಕಾಶ್ ಸೇರಿದಂತೆ ಮೂವರು ವಿದ್ಯಾರ್ಥಿಗಳು ಮರ ಹತ್ತಿದ್ದಾರೆ. ಈ ಸಂದರ್ಭದಲ್ಲಿ ಮರದಲ್ಲಿದ್ದ ಆಕಾಶ್ ಜಾರಿದ್ದು ಆಗ ಪಕ್ಕದಲ್ಲೇ ಹಾದುಹೋಗಿರುವ ವಿದ್ಯುತ್‌ಲೈನ್ ಹಿಡಿದಾಗ ಕರೆಂಟ್ ಹೊಡೆದು ಸಿಲುಕಿಕೊಂಡಿದ್ದು ಕೂಡಲೆ ಶಾಲೆ ಶಿಕ್ಷಕರೊಬ್ಬರು ಮರದಿಂದ ಕೆಳಗಿಳಿಸಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆತಂದರೂ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.
ನೇರಳೆ ಮರದಲ್ಲಿ ಹಣ್ಣು ಕೀಳಲು ಮರ ಹತ್ತಿದ್ದ ಮೂವರು ವಿದ್ಯಾರ್ಥಿಗಳ ಪೈಕಿ ಸಹಪಾಠಿ ಆಕಾಶ್ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದನ್ನು ಕಣ್ಣಾರೆ ಕಂಡ ಮರದ ಬಳಿ ಹತ್ತಿ ಕೂದಲೆಳೆ ಅಂತರದಿಂದ ಪಾರಾದ ಇಬ್ಬರು ವಿದ್ಯಾರ್ಥಿಗಳು ದಿಗ್ಭ್ರಾಂತರಾಗಿದ್ದರು. ಬಳಿಕ ಶಾಲೆಯ ಶಿಕ್ಷಕರು ಹಾಗೂ ಪಾಲಕರು ಸಮಾಧಾನಪಡಿಸಿದ ನಂತರ ಊರುಗಳಿಗೆ ಪಾಲಕರ ಜತೆ ಕಳುಹಿಸುವ ವ್ಯವಸ್ಥೆಗೆ ಶಿಕ್ಷಕರು ಮುಂದಾದರು. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net