ಸಂಪಾದಕೀಯ: ಪಾಠ ಕಲಿಯದ ದುರುಳರು

ಹತ್ತನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಮತ್ತು ಬಾಲಕಿಯನ್ನು ರಸ್ತೆ ಬದಿ ತಡೆದ ದುರುಳರ ಗುಂಪೊಂದು ಲೈಂಗಿಕ ದೌರ್ಜನ್ಯ ಎಸಗಿದ ಪೈಶಾಚಿಕ ಘಟನೆ ಬಿಹಾರದ ಜಮುಯಿ ಪಟ್ಟಣದಲ್ಲಿ ಶನಿವಾರ ನಡೆದಿದೆ. ಸಂತ್ರಸ್ತ ಅಪ್ರಾಪ್ತರಿಬ್ಬರ ಮೇಲೆ ದುರುಳರ ಗುಂಪು ಲೈಂಗಿಕ ದೌರ್ಜನ್ಯ ಎಸಗಿದ ವಿಡಿಯೋ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವ್ಯಾಪಕ ಜನಾಗ್ರಹ ಕೇಳಿಬಂದಿದೆ.
Representative image
ಸಾಂದರ್ಭಿಕ ಚಿತ್ರ
Published on

ಹತ್ತನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಮತ್ತು ಬಾಲಕಿಯನ್ನು ರಸ್ತೆ ಬದಿ ತಡೆದ ದುರುಳರ ಗುಂಪೊಂದು ಲೈಂಗಿಕ ದೌರ್ಜನ್ಯ ಎಸಗಿದ ಪೈಶಾಚಿಕ ಘಟನೆ ಬಿಹಾರದ ಜಮುಯಿ ಪಟ್ಟಣದಲ್ಲಿ ಶನಿವಾರ ನಡೆದಿದೆ. ಸಂತ್ರಸ್ತ ಅಪ್ರಾಪ್ತರಿಬ್ಬರ ಮೇಲೆ ದುರುಳರ ಗುಂಪು ಲೈಂಗಿಕ ದೌರ್ಜನ್ಯ ಎಸಗಿದ ವಿಡಿಯೋ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವ್ಯಾಪಕ ಜನಾಗ್ರಹ ಕೇಳಿಬಂದಿದೆ. ಪೊಲೀಸರು ಮಂಗಳವಾರ ಎನ್​ಕೌಂಟರ್ ನಡೆಸಿ ಪ್ರಮುಖ ಆರೋಪಿ ಸೇರಿದಂತೆ ಒಟ್ಟು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.

ರಾಜಧಾನಿ ದೆಹಲಿಯ ಕಾಲ್ಕಾಜಿ ಮಂದಿರದ ಉದ್ಯಾನದಲ್ಲಿ ಮಂಗಳವಾರದಂದು ಪೊಲೀಸರೆಂದು ಬೆದರಿಸಿ 17 ವರ್ಷದ ತರುಣಿಯ ಮೇಲೆ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಎರಡೂ ಘಟನೆಗಳು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿವೆ. ಈ ಘಟನೆಗಳು, ಸಾರ್ವಜನಿಕ ತಾಣಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೂಲಭೂತ ಸಂಚಾರ ಸ್ವಾತಂತ್ರ್ಯ ಹಾಗೂ ಜೀವಿಸುವ ಹಕ್ಕಿನ ಮೇಲೆ ನಡೆದಿರುವ ಭೀಕರ ದಾಳಿಗಳಾಗಿವೆ.

ಪ್ರತಿ ಬಾರಿ ಇಂಥ ಘಟನೆ ನಡೆದಾಗಲೂ ಆಕ್ರೋಶ, ಪ್ರತಿಭಟನೆ, ಹೊಸ ಕಾನೂನುಗಳು ಹಾಗೂ ಕಠಿಣ ದಂಡನೆಗಳ ಮಾತುಗಳು ಕೇಳಿಬರುತ್ತವೆಯಾದರೂ, ವಾಸ್ತವದಲ್ಲಿ ದುರುಳರಿಗೆ ಯಾವುದೇ ಭಯವಿಲ್ಲದಿರುವುದು ತೀವ್ರ ಆತಂಕಕಾರಿ ಸಂಗತಿಯಾಗಿದ್ದು, ಸಾಮಾಜಿಕ ಸ್ವಾಸ್ಥ್ಯಕ್ಕೆ ದೊಡ್ಡ ಸವಾಲಾಗಿದೆ. ದೆಹಲಿಯ ನಿರ್ಭಯಾ ಪ್ರಕರಣದ ನಂತರ ದೇಶದ ಕಾನೂನುಗಳನ್ನು ಎಷ್ಟೇ ಬಿಗಿಗೊಳಿಸಿದರೂ, ಅಪರಾಧಿಗಳ ಮನಸ್ಥಿತಿಯಲ್ಲಿ ಬದಲಾವಣೆ ಬಂದಿಲ್ಲ ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿಯಾಗಿವೆ. ಸಾರ್ವಜನಿಕ ರಸ್ತೆಗಳು, ಪಾರ್ಕ್​ಗಳಂತಹ ತೆರೆದ ಜಾಗಗಳೇ ರಕ್ಕಸರ ತಾಣಗಳಾಗಿ ಮಾರ್ಪಟ್ಟರೆ, ಹೆಣ್ಣುಮಕ್ಕಳು ಸುರಕ್ಷತೆಯ ಭರವಸೆಯನ್ನು ಎಲ್ಲಿ ಹುಡುಕಬೇಕು? ಘಟನೆಯ ನಂತರ ಎನ್​ಕೌಂಟರ್ ನಡೆಸುವುದು ಅಥವಾ ಆರೋಪಿಗಳನ್ನು ಬಂಧಿಸುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದು.

ದೌರ್ಜನ್ಯ ತಡೆಯಲು ಸಮಗ್ರ ಮುನ್ನೆಚ್ಚರಿಕೆ ಕ್ರಮಗಳ ಅಗತ್ಯವಿದೆ. ಸಾರ್ವಜನಿಕ ಉದ್ಯಾನಗಳು, ಪ್ರಮುಖ ರಸ್ತೆಗಳು ಮತ್ತು ಅಷ್ಟಾಗಿ ಜನಸಂಚಾರವಿಲ್ಲದ ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ನಿರಂತರ ಕಣ್ಗಾವಲು ಹಾಗೂ ಪೊಲೀಸ್ ಸಿಬ್ಬಂದಿಯ ನಿಯಮಿತ ಗಸ್ತು ಹೆಚ್ಚಾಗಬೇಕು. ಖಾಕಿ ವೇಷಧಾರಿಗಳ ಸೋಗು ಹಾಕಿ ಕೃತ್ಯ ಎಸಗುವಷ್ಟು ವ್ಯವಸ್ಥೆ ಸಡಿಲವಾಗಿರಬಾರದು.

ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆ ಹಾಗೂ ವಿಚಾರಣೆಯು ವರ್ಷಗಟ್ಟಲೇ ಎಳೆಯದೆ, ಫಾಸ್ಟ್ ಟ್ರಾ್ಯಕ್ ಕೋರ್ಟ್​ಗಳ ಮೂಲಕ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳ್ಳಬೇಕು. ತಪ್ಪಿತಸ್ಥರಿಗೆ ವಿಳಂಬವಿಲ್ಲದೆ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಸಂಭಾವ್ಯ ಅಪರಾಧಿಗಳಲ್ಲಿ ಭಯ ಹುಟ್ಟಿಸಲು ಅನಿವಾರ್ಯ. ಸಾರ್ವಜನಿಕ ಸ್ಥಳಗಳಲ್ಲಿ ಅನ್ಯಾಯ ನಡೆಯುವಾಗ ಮೂಕಪ್ರೇಕ್ಷಕರಾಗದೆ ತಕ್ಷಣ ಸ್ಪಂದಿಸುವ ನಾಗರಿಕ ಜಾಗೃತಿ ಹಾಗೂ ಹೆಣ್ಣುಮಕ್ಕಳ ರಕ್ಷಣೆಯನ್ನು ಸಾಮೂಹಿಕ ಹೊಣೆಗಾರಿಕೆಯಾಗಿ ಕಾಣುವ ಮನೋಭಾವ ಬೆಳೆಯಬೇಕಿದೆ.

ಕಾನೂನುಗಳು ಕೇವಲ ಕಡತಗಳಲ್ಲಿ ಉಳಿದರೆ ಸಾಲದು; ಅವುಗಳ ಕಟ್ಟುನಿಟ್ಟಿನ ಅನುಷ್ಠಾನ ಹಾಗೂ ನ್ಯಾಯಾಂಗದ ತ್ವರಿತ ನಡೆ ಮಾತ್ರ ದುರುಳರಿಗೆ ನಿಜವಾದ ಎಚ್ಚರಿಕೆಯ ಸಂದೇಶ ರವಾನಿಸಬಲ್ಲದು. ವ್ಯವಸ್ಥೆಯು ಕೇವಲ ಪ್ರತಿಕ್ರಿಯಾತ್ಮಕವಾಗಿ ಉಳಿಯದೆ, ಹೆಣ್ಣುಮಕ್ಕಳು ಯಾವುದೇ ಭಯವಿಲ್ಲದೆ ಮುಕ್ತವಾಗಿ ಓಡಾಡುವ ಪರಿಸರವನ್ನು ನಿರ್ವಿುಸುವ ದೃಢ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net