ಬೆಂಗಳೂರು: (convert to an EV auto at a low cost) ಚಾಲಕರೇ, ಹೊಸ ವಿದ್ಯುತ್‌ಚಾಲಿತ(ಇವಿ) ಆಟೋ ರಿಕ್ಷಾ ಖರೀದಿಸಲು ಪರದಾಡುತ್ತಿದ್ದೀರಾ.... ಹಾಗಿದ್ದರೆ, ಕೈಗೆಟುಕುವ ದರದಲ್ಲಿ ಹಾಲಿ ಆಟೋವನ್ನು ಎಲೆಕ್ಟ್ರಿಕ್ ವಾಹನವಾಗಿ ಬದಲಾಯಿಸುವ ಅವಕಾಶ ಇದೆ.
ಹಸಿರು ಸಂಚಾರ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ಕಾನ್ವರ್ಟ್ ಇಂಡಿಯಾ ಮೋಟಾರ್ಸ್ ಸಂಸ್ಥೆ, ಹಾಲಿ ಆಟೋ ರಿಕ್ಷಾಗಳನ್ನು ನವೀನ, ಪರಿಸರ ಸ್ನೇಹಿ ಸಹಿತವಾಗಿ ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಲು ನೂತನ ‘ರೆಟ್ರೋಫಿಟ್ಟಿಂಗ್ ತಂತ್ರಜ್ಞಾನ’ ಅಭಿವೃದ್ಧಿಪಡಿಸಿದೆ.
ಮಾರುಕಟ್ಟೆಗೆ ಪರಿಚಯಿಸಲಾದ ಕಾನ್ವರ್ಟ್ ಎಕ್ಸ್‌ಜೆಟ್ 180, ಹಾಲಿ ಇರುವ ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಮತ್ತು ಎಲ್‌ಪಿಜಿ ರಿಕ್ಷಾಗಳ ಮಾಲೀಕರಿಗೆ ಹೊಸ ವಾಹನ ಖರೀದಿಸುವ ದುಬಾರಿ ವೆಚ್ಚ ಇಲ್ಲದೆಯೆ ಎಲೆಕ್ಟ್ರಿಕ್ ಸಂಚಾರಕ್ಕೆ ಬದಲಾಗಬಹುದು. ಇದರಿಂದ ಚಾಲಕರಿಗೆ ನಿರ್ವಹಣಾ ವೆಚ್ಚವೂ ತಗ್ಗಲಿದೆ. ರಿಕ್ಷಾ ಮಾಲೀಕರಿಗೆ ಎಲೆಕ್ಟ್ರಿಕ್ ಸಂಚಾರವನ್ನು ಕೈಗೆಟುಕುವಂತೆ ಮಾಡುವುದು ಮತ್ತು ದೈನಂದಿನ ನಿರ್ವಹಣಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವುದು ತಂತ್ರಜ್ಞಾನದ ಪ್ರಮುಖ ಉದ್ದೇಶವಾಗಿದೆ.
ಕಾನ್ವರ್ಟ್ ಎಕ್ಸ್‌ಜೆಟ್ 180, ಪ್ರತಿ ಚಾರ್ಜ್‌ಗೆ 180 ಕಿ.ಮೀ ವರೆಗಿನ ಮೈಲೇಜ್ ನೀಡಲಿದೆ. ಒಂದು ಗಂಟೆಯಲ್ಲಿ ವೇಗದ ಚಾರ್ಜಿಂಗ್ ಮತ್ತು ಕೇವಲ 90 ನಿಮಿಷಗಳಲ್ಲಿ ವಾಹನ ಪರಿವರ್ತನೆಯ ಸೌಲಭ್ಯ ಹೊಂದಿದೆ. ಸಿಎನ್‌ಜಿ, ಎಲ್ಪಿಜಿ, ಪೆಟ್ರೋಲ್, ಡೀಸೆಲ್ ಚಾಲಿತ ರಿಕ್ಷಾಗಳ ಪ್ರತಿ ಕಿಲೋಮೀಟರ್‌ಗೆ 2.70 ರಿಂದ 4.50 ರೂ.ವೆಚ್ಚಕ್ಕೆ ಹೋಲಿಸಿದರೆ ಇದರ ಅಂದಾಜು ಚಾಲನಾ ವೆಚ್ಚ ಪ್ರತಿ ಕಿಲೋಮೀಟರ್‌ಗೆ 70 ಪೈಸೆ ಇದೆ.
ಇದೇ ಸಾಮರ್ಥ್ಯದ ಹೊಸ ಎಲೆಕ್ಟ್ರಿಕ್ ರಿಕ್ಷಾವನ್ನು ಖರೀದಿಸುವುದಕ್ಕಿಂತ ರೆಟ್ರೋಫಿಟ್ಟಿಂಗ್ ವೆಚ್ಚವು ಅಂದಾಜು ಶೇ. 50 ಕಡಿಮೆ ಇರುತ್ತದೆ. ಕಾನ್ವರ್ಟ್ ಇಂಡಿಯಾಗೆ ರಾಜಧಾನಿ ಬೆಂಗಳೂರು ಆರಂಭಿಕ ಮಾರುಕಟ್ಟೆಯಾಗಿದೆ. ಕಂಪನಿಯು ಪ್ರಾಯೋಗಿಕ ಹಂತದಲ್ಲೇ 100 ರೆಟ್ರೋಫಿಟ್ ಕಿಟ್ ಮಾರಾಟ ಮಾಡಿದೆ. ಕಾನ್ವರ್ಟ್ ಇಂಡಿಯಾ ತಂತ್ರಜ್ಞಾನ ಬಳಸಿಕೊಂಡು ಮೂರು ತಿಂಗಳೊಳಗೆ 15 ಸಾವಿರ ಕಿ.ಮೀ.ಕ್ಕಿಂತ ಅಧಿಕ ದೂರ ಕ್ರಮಿಸಿದ ಗ್ರಾಹಕರನ್ನು ಸನ್ಮಾನಿಸಲಾಯಿತು. ಸೋಮಶೇಖರ್, ನಿಶಾ ಯೋಗೇಶ್ವರ್ ಸೇರಿ ಮತ್ತಿತರರಿದ್ದರು.
ವಾಹನ ಪರಿವರ್ತನೆಯನ್ನು ಕೈಗೆಟುಕುವಂತೆ ಮಾಡಲು ಹಲವು ಬ್ಯಾಂಕೇತರ ಹಣಕಾಸು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಗ್ರಾಹಕರು ಶೇ.95 ರವರೆಗೆ ಸಾಲ ಸೌಲಭ್ಯ ಪಡೆಯಬಹುದು. ದೈನಂದಿನ, ಸಾಪ್ತಾಹಿಕ ಹಾಗೂ ಮಾಸಿಕ ಮರುಪಾವತಿ ಆಯ್ಕೆಗಳೂ ಲಭ್ಯವಿವೆ. ಎಲೆಕ್ಟ್ರಿಕ್ ವಾಹನ ಪರಿವರ್ತನೆಗಳಿಗೆ ಸಬ್ಸಿಡಿ ಪಡೆಯಲು ಸರ್ಕಾರದ ಜತೆ ಮಾತುಕತೆ ನಡೆಸುತ್ತಿದ್ದೇವೆ.
ನಿಕೇಂದ್ರ ಮಣಿಕಂದನ್, ಕಾನ್ವರ್ಟ್ ಇಂಡಿಯಾ ಮೋಟಾರ್ಸ್‌ನ ಸಂಸ್ಥಾಪಕ.