

ನವದೆಹಲಿ: ಸಂಸದ ರಾಹುಲ್ ಗಾಂಧಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕೈಕುಲುಕುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿ ಹೀನಾಯವಾಗಿ ಸೋತಿರುವ ಸಂದರ್ಭದಲ್ಲೂ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಗಾಂಧಿ ಸೋಲು ಮರೆತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕಿರುನಗೆ ಬೀರಿ ಅಭಿನಂದಿಸುತ್ತಿದ್ದಾರೆ. ಇದನ್ನು ಸೋದರತ್ವ ಎಂದು ಕರೆಯಲಾಗುತ್ತದೆ ಎಂದು ಶೀರ್ಷಿಕೆ ಬರೆದು ಫೋಟೋವನ್ನು ಹಂಚಿಕೆ ಮಾಡಲಾಗಿದೆ.
ಫೇಸ್ಬುಕ್ ಬಳಕೆದಾರ ಅಜೀಮ್ ಶೇಖ್ ಎಂಬುವವರು ಹಿಂದಿ ಭಾಷೆಯಲ್ಲಿ ಶೀರ್ಷಿಕೆ ಬರೆದು ಫೋಟೋ ಅಪ್ಲೋಡ್ ಮಾಡಿದ್ದಾರೆ. ಇದನ್ನು ಸಾವಿರಕ್ಕೂ ಅಧಿಕ ಮಂದಿ ಫೇಸ್ಬುಕ್ ಬಳಕೆದಾರರು ಹಂಚಿಕೆ ಮಾಡಿದ್ದಾರೆ. ಆದರೆ ಈ ಫೋಟೋ ತುಂಬಾ ಹಳೆಯದು. ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರದ ಚಿತ್ರ ಅಲ್ಲ ಎಂಬುದು ಫ್ಯಾಕ್ಟ್ಚೆಕ್ನಿಂದ ಪತ್ತೆಯಾಗಿದೆ.
ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಈ ಪೋಟೋ ತುಂಬಾ ಹಳೆಯದು ಎಂದು ಕಂಡು ಹಿಡಿದಿದೆ. 2018ರ ಜನವರಿ 26ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ತೆಗೆದ ಚಿತ್ರ ಎಂಬುದನ್ನು ಖಚಿತಪಡಿಸಿದೆ.
2018 ರ ಜನವರಿ 26 ರಂದು ರಾಷ್ಟ್ರಪತಿ ಭವನದ ಮೊಘಲ್ ಗಾರ್ಡನ್‌ನಲ್ಲಿ ನಡೆದ 'ಅಟ್ ಹೋಮ್' ಕಾರ್ಯಕ್ರಮದ ಸ್ವಾಗತದ ಸಂದರ್ಭದಲ್ಲಿ ಅಂದು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರು ಕೇಜ್ರಿವಾಲ್ ಅವರನ್ನು ಭೇಟಿಯಾದರು. ಆ ವೇಳೆ ಕ್ಲಿಕ್ಕಿಸಿದ ಚಿತ್ರ ಅದು.
2020ರ ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ನಂತರ ಭೇಟಿಯಾದ ಸಂದರ್ಭದ ಚಿತ್ರ ಅಲ್ಲ. ಹೀಗಾಗಿ ವೈರಲ್ ಆದ ಫೋಟೋ ತುಂಬಾ ಹಳೆಯದು ಎಂದು ಪತ್ತೆಯಾಗಿದೆ. (ಏಜೆನ್ಸೀಸ್)