ಶೆಡ್‌ನಲ್ಲಿ ರೇಣುಕಸ್ವಾಮಿ ಮರ್ಮಾಂಗಕ್ಕೆ ದರ್ಶನ್ ಒದ್ದಿದ್ದ...!

ಕೋರ್ಟ್‌ನಲ್ಲಿ ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆ ದಾಖಲು ಮೂರು ತಾಸಿಗೂ ಹೆಚ್ಚು ಸಮಯ ಘಟನೆ ವಿವರಣೆ
Actor Darshan
ರೇಣುಕಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿ ಪ್ರದೋಶ್​ ಹೇಳಿದ್ದೇನು | Actor Darshan
Published on: 

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು, ಹತ್ಯೆಯ ಕರಾಳತೆಯನ್ನು ಮಾಫಿ ಸಾಕ್ಷಿ ಪ್ರದೋಷ್, ಎಳೆ-ಎಳೆಯಾಗಿ ನ್ಯಾಯಾಧೀಶರ ಮುಂದೆ ವಿವರಿಸಿದ್ದಾನೆ.

ಪೊಲೀಸ್ ಭದ್ರತೆಯಲ್ಲಿ 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಸೋಮವಾರ ಹಾಜರಾದ ಪ್ರದೋಷ್, ದೇವರ ಹೆಸರಲ್ಲಿ ಪ್ರಮಾಣ ಮಾಡಿ 3 ತಾಸಿಗೂ ಹೆಚ್ಚು ಸಮಯ ದರ್ಶನ್ ಗ್ಯಾಂಗ್ ವಿರುದ್ಧ ಸಾಕ್ಷಿ ನುಡಿದಿದ್ದಾನೆ.

2024ರ ಜೂನ್ 8ರ ಶನಿವಾರದಂದು ದರ್ಶನ್ ಮನೆಗೆ ಹೋಗಿದ್ದೆ. ಆ ವೇಳೆ ಅವರು ಜಿಮ್‌ನಲ್ಲಿದ್ದರು. ಅವರು ಮಧ್ಯಾಹ್ನ ಪಾರ್ಟಿಗೆ ಹೋಗೋಣ ಎಂದಿದ್ದರು. ನನಗೆ ಸುಸ್ತಾಗಿದೆ ಬರುವುದಿಲ್ಲ ಎಂದಿದ್ದೆ. ಆದರೂ ಒತ್ತಾಯಕ್ಕೆ ಮಣಿದು ನನ್ನ ಕಾರಿನಲ್ಲೇ ಅಂದು ಮಧ್ಯಾಹ್ನ 1 ಗಂಟೆಗೆ ನಗರದ ಸ್ಟೋನಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಹೋದೆವು. ಅಲ್ಲಿ ‘ಡಿ-ಸಾರಿ’ ಎಂಬ ಪಾರ್ಟಿ ಜಾಗದಲ್ಲಿ ನಟ ಚಿಕ್ಕಣ್ಣ, ಯಶಸ್ ಸೂರ್ಯ ಸೇರಿ ಕೆಲವರು ಕೂತಿದ್ದೆವು. ಆಗ 3ನೇ ಆರೋಪಿ ಪವನ್ ಬಂದು, ದರ್ಶನ್‌ಗೆ ೆನ್ ತೋರಿಸಿ ಅವರ ಕಿವಿಯಲ್ಲಿ ಏನೋ ಹೇಳಿದ. ಕೂಡಲೇ 1ನೇ ಆರೋಪಿ ಪವಿತ್ರಾ ಗೌಡಗೆ ದರ್ಶನ್ ವಿಡಿಯೋ ಕರೆ ಮಾಡಿ ‘ಅಳಬೇಡ, ಇದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡ. ನನಗೆ ಏನು ಮಾಡಬೇಕು ಗೊತ್ತಿದೆ’ ಎಂದು ಮಾತನಾಡುತ್ತಿದ್ದರು ಎಂದು ವಿವರಿಸಿದ್ದಾನೆ.

ಎಂಜಲು ನೆಕ್ಕಿಸಿದ್ದರು:

ಪಾರ್ಟಿ ಮುಗಿಯುತ್ತಿದ್ದಂತೆ ಪವಿತ್ರಾ ಮನೆಗೆ ಹೋದೆವು. ಅಲ್ಲಿಂದ ಅವರನ್ನು ನನ್ನದೇ ಕಾರಿನಲ್ಲಿ ಕೂರಿಸಿಕೊಂಡು ಆರ್.ಆರ್.ನಗರ ಸಮೀಪದಲ್ಲಿರುವ ಶೆಡ್‌ಗೆ ಹೋದೆವು. ಅಲ್ಲಿ ಬಹಳಷ್ಟು ಜನರಿದ್ದರು. ಅವರ ಮಧ್ಯೆ ರೇಣುಕಸ್ವಾಮಿ ಇದ್ದ. ಅವನ ತಲೆಯಿಂದ ರಕ್ತ ಸೋರುತ್ತಿತ್ತು. ಶೆಡ್ಡಿನ ಸಮೀಪ ಹೋಗುತ್ತಿದ್ದಂತೆ ಎ-10 ವಿನಯ್ ರೇಣುಕಸ್ವಾಮಿಗೆ ಕಾಲಿನಿಂದ ಒದ್ದ. ದರ್ಶನ್ ಸಹ ಕಾರಿನಿಂದ ಇಳಿದು ಬಂದು ಒದ್ದರು. ಪವಿತ್ರಾ ಕಡೆಯಿಂದಲೂ ಚಪ್ಪಲಿಯಲ್ಲಿ ಕೆನ್ನೆಗೆ ಹೊಡಿಸಿದರು. ಈ ವೇಳೆ ದರ್ಶನ್, ಅವನ ಮೇಲೆ ಎಂಜಲು ಉಗುಳಿ, ಅವಾಚ್ಯ ಪದಗಳಿಂದ ನಿಂದಿಸಿದ. ಮತ್ತೊಮ್ಮೆ ನೆಲಕ್ಕೆ ಎಂಜಲು ಉಗಿದು ಅದನ್ನು ನೆಕ್ಕುವಂತೆ ಹೇಳಿದ. ಭಯದಲ್ಲಿ ರೇಣುಕಸ್ವಾಮಿ ಎಂಜಲನ್ನು ನೆಕ್ಕಿದ. ಈ ವೇಳೆ ರೇಣುಕಸ್ವಾಮಿಯನ್ನು ಬನಿಯನ್ ಸಮೇತ ಒಂದು ಹುಕ್ಕಿಗೆ ನೇತು ಹಾಕಲು ಯತ್ನಿಸಿದರು. ಆತನ ಬನಿಯನ್ ಹರಿದು ನೆಲಕ್ಕೆ ಬಿದ್ದ ಎಂದು ಪ್ರದೋಷ್ ಹೇಳಿದ್ದಾನೆ.

ಪವಿತ್ರಾಗೌಡ ನನ್ನ ಹೆಂಡ್ತಿ!

ರೇಣುಕಸ್ವಾಮಿಗೆ ದರ್ಶನ್ ಬೆದರಿಕೆ ಹಾಕುವಾಗ ‘ನಾನು ಯಾರು ಗೊತ್ತಾ?’ ಎಂದು ಕೇಳುತ್ತಾ, ಪವಿತ್ರಾಳನ್ನು ತೋರಿಸಿ ‘ಇವರು ಯಾರು ಗೊತ್ತಾ?’ ಎಂದು ಆಕೆಯ ಹೆಗಲ ಮೇಲೆ ಕೈ ಹಾಕಿ ‘ಇವಳು ನನ್ನ ಹೆಂಡತಿ, ಇವಳಿಗೆ ಅಶ್ಲೀಲ ಸಂದೇಶ ಕಳಿಸುವಷ್ಟು ಧೈರ್ಯನಾ ನಿಂಗೆ’ ಎಂದು ಕಾಲಿನಿಂದ ಒದ್ದ. ಕಾಲಿಗೆ ಬಿದ್ದು ಕ್ಷಮೆ ಕೇಳು ಎಂದ. ಆಗ ಅವನು ಕಾಲಿಗೆ ಬೀಳಲು ಹೋಗಿದ್ದ. ‘ಏ... ಬೇಡ ತಡಿ, ನೆಲ ಮುಟ್ಟಿ ಕ್ಷಮೆ ಕೇಳು, ಪವಿತ್ರಾ ಕಾಲು ಮುಟ್ಟಿದ್ದೇನೆ ಎಂದು ಊರು ತುಂಬಾ ಹೇಳ್ಕೊಂಡು ತಿರಗಾಡ್ತಿರು’ ಎಂದು ಅಶ್ಲೀಲ ಪದಗಳಿಂದ ದರ್ಶನ್ ಬೈದ. ಈ ವೇಳೆ ಆತನಿಗೆ ನೈಲಾನ್ ಹಗ್ಗದಿಂದ ಪವನ್ ಮತ್ತು ಇತರರು ಹಲ್ಲೆ ಮಾಡುತ್ತಿದ್ದರು ಎಂದು ಪ್ರದೋಷ್ ವಿವರಿಸಿದ್ದಾನೆ.

ಬೆತ್ತಲೆ ಮಾಡಿ ಹಲ್ಲೆ

ಪವಿತ್ರಾಗೆ ರೇಣುಕಸ್ವಾಮಿ ಕಳುಹಿಸಿದ್ದ ಸಂದೇಶವನ್ನು ಪವನ್ ಓದಿ ದರ್ಶನ್‌ಗೆ ತಿಳಿಸಿದಾಗ, ರೇಣುಕಸ್ವಾಮಿಯನ್ನು ಬೆತ್ತಲೆಗೊಳಿಸಿ ಎ-3 ಪವನ್, ಎ-5 ನಂದೀಶ್ ಮತ್ತು ಎ-2 ದರ್ಶನ್ ಎಡಬಿಡದೆ ಹೊಡೆಯುತ್ತಿದ್ದರು. ಈ ವೇಳೆ ಆತನ ಮರ್ಮಾಂಗಕ್ಕೆ ದರ್ಶನ್ ಒದ್ದರು ಎಂದು ಪ್ರದೋಷ್ ಕೋರ್ಟಿಗೆ ತಿಳಿಸಿದ್ದಾನೆ.

ಬೆರಳಿಗೂ ಗಾಯ

‘ಪವನ್ ಹೇಳಿದ್ದಕ್ಕೆ ರೇಣುಕಸ್ವಾಮಿಯನ್ನು ಚಿತ್ರದುರ್ಗದಿಂದ ಇಲ್ಲಿಗೆ ಕರೆದುಕೊಂಡು ಬಂದಿದ್ದೇವೆ’ ಎಂದು ಎ-4 ರಾಘವೇಂದ್ರ ನನಗೆ ಹೇಳಿದ. ದರ್ಶನ್ ಬರುವುದಕ್ಕೂ ಮೊದಲು ಪವನ್, ನಾನು ಹಾಗೂ ನನ್ನ ಸ್ನೇಹಿತ ಸೇರಿ ಹೊಡೆದಿದ್ದೇವೆ. ಕರೆಂಟ್ ಶಾಕ್ ಕೂಡ ಕೊಟ್ಟಿದ್ದೇವೆ. ಪವಿತ್ರಕ್ಕಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಕೈಬೆರಳುಗಳನ್ನು ರಕ್ತ ಬರುವಂತೆ ಗಾಯ ಮಾಡಿದ್ದಾಗಿ ವಿವರಿಸಿದ್ದ ರಾಘವೇಂದ್ರನೇ ನನ್ನ ಬಳಿ ತಿಳಿಸಿದ ಎಂದು ಪ್ರದೋಷ್ ಹೇಳಿದ್ದಾನೆ.

ಕಣ್ಣೀರು ಸುರಿಸಿದ ಪವಿತ್ರಾಗೌಡ

ನ್ಯಾಯಾಲಯದಲ್ಲಿ ಮಾಫಿ ಸಾಕ್ಷಿ ಪ್ರದೋಷ್, ಡಿ-ಗ್ಯಾಂಗ್ ವಿರುದ್ಧ ಸಾಕ್ಷಿ ನುಡಿಯುತ್ತಿದ್ದ ಸಮಯದಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ವಿಚಾರಣೆ ಆಲಿಸುತ್ತಿದ್ದ ಪವಿತ್ರಾ ಗೌಡ ಕಣ್ಣೀರು ಸುರಿಸುತ್ತಿದ್ದಳು. ಇತ್ತ ದರ್ಶನ್ ಮೌನದಿಂದ ಕುಳಿತಿದ್ದ. ಇಬ್ಬರಲ್ಲೂ ಮುಂದೆ ಏನು ಆಗುತ್ತದೆ ಎಂಬ ಭಯ, ಆತಂಕ ಕಾಡುತ್ತಿರುವುದು ಕಾಣಿಸುತ್ತಿತ್ತು.

ಕೋರ್ಟ್ ಆವರಣದಲ್ಲಿ ಭದ್ರತೆ

ದರ್ಶನ್‌ಗೆ ಹೆಚ್ಚಿನ ಅಭಿಮಾನಿಗಳು ಇರುವುದರಿಂದ, ಪ್ರದೋಷ್‌ಗೆ ಕೇಂದ್ರ ವಿಭಾಗದ 45ಕ್ಕೂ ಹೆಚ್ಚಿನ ಪೊಲೀಸರು ಭದ್ರತೆ ಕಲ್ಪಿಸಿದ್ದರು. ಕಾಮಾಕ್ಷಿಪಾಳ್ಯ ಪೊಲೀಸರು ಸಹ ಹೈಸೆಕ್ಯೂರಿಟಿಯಲ್ಲಿ ಪ್ರದೋಷ್‌ನನ್ನು ಕೋರ್ಟಿಗೆ ಕರೆ ತಂದು ಜೈಲಿಗೆ ಮರಳಿ ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net