ಫೇಸ್​ಬುಕ್​ನಲ್ಲಿ ಜಾಹೀರಾತು ಹಾಕಿ ವಂಚನೆ; ಸೈಬರ್ ಕಳ್ಳರ ಕೃತ್ಯ ಹೆಚ್ಚಳ, ನಗರದಲ್ಲಿ ಮೂರು ಪ್ರತ್ಯೇಕ ಪ್ರಕರಣ

facebook
Published on

ಬೆಂಗಳೂರು: ನಗರದಲ್ಲಿ ಪ್ರತ್ಯೇಕ 3 ಸೈಬರ್ ಅಪರಾಧ ಪ್ರಕರಣಗಳಲ್ಲಿ ಸೈಬರ್ ಕಳ್ಳರು ಸಾವಿರಾರು ರೂ. ದೋಚಿದ್ದಾರೆ. ಮಾಸ್ಕ್, ಐಆರ್ ಥರ್ವಮೀಟರ್ಸ್, ಪಿಪಿಇ ಕಿಟ್ಸ್, ಗ್ಲೌಸ್, ಸ್ಯಾನಿಟೈಸರ್ ಮಾರಾಟ ಮಾಡುವುದಾಗಿ ಫೇಸ್​ಬುಕ್​ನಲ್ಲಿ ಕಂಡುಬಂದ ಜಾಹೀರಾತಿಗೆ ಮರುಳಾಗಿ ಕಿರಣ್ ಎಂಬವವರು 30 ಸಾವಿರ ರೂ. ಕಳೆದುಕೊಂಡರೆ, ಮತ್ತೊಂದು ಪ್ರಕರಣದಲ್ಲಿ ಬ್ರೆಡ್, ಹಾಲು ಖರೀದಿಸಿ ಗೂಗಲ್-ಪೇ ಮೂಲಕ ಹಣ ಪಾವತಿಸಲು ಮುಂದಾದ ರಾಮು ಎಂಬುವರ ಖಾತೆಯಿಂದ 6,597 ರೂ. ಕಡಿತಗೊಂಡಿದೆ. ಅಶೋಕನಗರದ ವಿದ್ಯಾರ್ಥಿ ಎಬೆನ್ಸರ್ ಕಸ್ಟಮರ್ ಕೇರ್ ಸಿಬ್ಬಂದಿಗೆ ಕರೆ ಮಾಡಲು ಹೋಗಿ 11,700 ರೂ. ಕಳೆದುಕೊಂಡಿದ್ದಾರೆ.

ಚಾಮರಾಜಪೇಟೆಯ ಚರಿತಾ ಪ್ರಸಾದ್ ಎಂಬುವವರು ಔಷಧ ಕಂಪನಿ ನಡೆಸುತ್ತಿದ್ದು, ಅಪರಿಚಿತರು ಫೇಸ್​ಬುಕ್​ನಲ್ಲಿ ಚರಿತಾ ಪ್ರಸಾದ್ ಅವರ ಔಷಧ ಕಂಪನಿ ಹೆಸರಿನ ನಕಲಿ ಖಾತೆ ತೆರೆದು ಮಾಸ್ಕ್, ಐಆರ್ ಥರ್ವಮೀಟರ್​ಗಳು, ಪಿಪಿಇ ಕಿಟ್​ಗಳು, ಗ್ಲೌಸ್, ಸ್ಯಾನಿಟೈಸರ್​ಗಳನ್ನು ಮಾರಾಟ ಮಾಡುವುದಾಗಿ ಜಾಹೀರಾತು ಹಾಕಿದ್ದರು. ಅದನ್ನು ಗಮನಿಸಿದ ಗುಜರಾತ್ ಮೂಲದ ಕರಣ್ ಎಂಬಾತ ಜಾಹೀರಾತಿನಲ್ಲಿದ್ದ ಫೋನ್ ನಂಬರ್​ಗೆ ಕರೆ ಮಾಡಿ ಅಪರಿಚಿತರನ್ನು ಸಂರ್ಪಸಿ ಮಾಸ್ಕ್ ಖರೀದಿಸಲು ಮುಂದಾಗಿದ್ದರು. ಅಪರಿಚಿತರು ಹೇಳಿದ ಖಾತೆಗೆ 30 ಸಾವಿರ ರೂ. ಜಮೆ ಮಾಡಿದ್ದರು. ಆದರೆ, ಇದಾದ ಬಳಿಕ ಅಪರಿಚಿತರು ಫೋನ್ ಸಂಪರ್ಕಕ್ಕೆ ಸಿಗಲಿಲ್ಲ. ಈ ವಿಚಾರ ಚರಿತಾ ಪ್ರಸಾದ್ ಗಮನಕ್ಕೆ ಬಂದು ಪಶ್ಚಿಮ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

6,597 ರೂ. ವಂಚನೆ: ಮಾಗಡಿ ರಸ್ತೆ ನಿವಾಸಿ ರಾಮು ಮೇ 7ರಂದು ರಾತ್ರಿ ಮನೆ ಸಮೀಪದ ಅಂಗಡಿಗೆ ತೆರಳಿ ಬ್ರೆಡ್, ಹಾಲು ಖರೀದಿಸಿದ್ದರು. ಗೂಗಲ್-ಪೇ ಮೂಲಕ ಅಂಗಡಿ ಮಾಲೀಕನಿಗೆ ಹಣ ಪಾವತಿಸಿದ್ದರು. ರಾಮು ಖಾತೆಯಿಂದ ಹಣ ಕಡಿತವಾದರೂ, ಮಾಲೀಕನ ಖಾತೆಗೆ ಹಣ ಜಮೆ ಆಗಿರಲಿಲ್ಲ. ಈ ಬಗ್ಗೆ ಗೂಗಲ್-ಪೇ ಕಸ್ಟಮರ್ ಕೇರ್​ಗೆ ಕರೆ ಮಾಡಿ ವಿಚಾರಿಸಿ ಅವರು ನೀಡಿದ ಸಲಹೆಯಂತೆ ಮಾಡಿದ್ದರು. ಆದರೆ, ಇದಾದ ಕೆಲ ಹೊತ್ತಿನಲ್ಲಿ ರಾಮು ಖಾತೆಯಿಂದ 6,597 ರೂ. ಕಡಿತಗೊಂಡಿದೆ.

ಕಸ್ಟಮರ್ ಕೇರ್​ಗೆ ಕರೆ ಮಾಡಿ ವಂಚನೆಗೊಳಗಾದ: ಅಶೋಕನಗರದ ನಿವಾಸಿ ಎಬೆನ್ಸರ್ ವಿದ್ಯಾರ್ಥಿಯಾಗಿದ್ದು, ಗೂಗಲ್ ಪೇ ಮೂಲಕ ತನ್ನ ಸ್ನೇಹಿತರ ಖಾತೆಗೆ 3 ಸಾವಿರ ರೂ. ವರ್ಗಾಯಿಸಿದ್ದ. ಗೂಗಲ್ ಪೇ ಆಪ್​ನಲ್ಲಿ ಹಣ ಸ್ವೀಕೃತವಾದ ದೃಢೀಕರಣ ನೀಡಿರದ ಕಾರಣ, ಅಂತರ್ಜಾಲದಲ್ಲಿದ್ದ ಗೂಗಲ್ ಪೇ ಕಸ್ಟಮರ್​ಕೇರ್ ನಂಬರ್​ಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದ್ದ. ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ ಸಮಸ್ಯೆ ಪರಿಹರಿಸುವುದಾಗಿ ಎಬೆನ್ಸರ್​ನಿಂದ ತನ್ನ ಖಾತೆಗೆ ಅನಧಿಕೃತವಾಗಿ 11,700 ರೂ. ಹಾಕಿಸಿಕೊಂಡು, ನಂತರ ಸಂಪರ್ಕಕ್ಕೂ ಸಿಗದೇ, ಹಣವನ್ನೂ ಹಿಂದಿರುಗಿಸದೇ ವಂಚಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net