ಹೈಕಮಾಂಡ್ ಕಾಲ್ತುಳಿತಕ್ಕೆ ಒಳಗಾದ ಸಿಎಂ ಸಿದ್ದರಾಮಯ್ಯ ಸುನಿಲ್ ಕುಮಾರ್ ಟೀಕೆ | Don't need resurvey

sunil kumar new
Published on

ಬೆಂಗಳೂರು: ಕಾಲ್ತುಳಿತದಲ್ಲಿ 11 ಜನರು ಬಲಿಯಾದ ದುರಂತವು ಸರ್ಕಾರದ ವಿರುದ್ಧ ಜನರು ಕೆರಳುವಂತೆ ಮಾಡಿದೆ. ಗಮನ ಬೇರೆಡೆ ಸೆಳೆಯಲು ಜಾತಿ ಜನಗಣತಿ ವರದಿ ಪ್ರಸ್ತಾಪವಾಗಿ, ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕಾಲ್ತುಳಿತಕ್ಕೆ ಸಿಎಂ ಸಿದ್ದರಾಮಯ್ಯ ಒಳಗಾಗಿದ್ದಾರೆ ಎಂದು ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್ ಟೀಕಿಸಿದರು.

ಪಕ್ಷದ ರಾಜ್ಯ ಕಚೇರಿಯಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಒತ್ತಡಕ್ಕೆ ಮಣಿದು ಜಾತಿ ಜನಗಣತಿ ವರದಿಯನ್ನು ಕಸದಬುಟ್ಟಿಗೆ ಎಸೆದಿರುವುದು ಅಕ್ಷಮ್ಯ ಅಪರಾಧವೆಂದು ವಾಗ್ದಾಳಿ ಮಾಡಿದರು.

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿಯವರು ತೆಲಂಗಾಣ ಮಾದರಿಯಲ್ಲಿ ಸಮೀಕ್ಷೆ, ಜಾತಿ ಜನಗಣತಿ ಮಾಡಿ ಎನ್ನುತ್ತಿದ್ದಾರೆ. ಕರ್ನಾಟಕ ಸರ್ಕಾರ ಸಿದ್ಧಪಡಿಸಿದ ವರದಿ ಮೇಲೆ ವಿಶ್ವಾಸ ಕಳೆದುಕೊಂಡಿದ್ದನ್ನು ಎತ್ತಿತೋರಿಸುತ್ತದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ತಿವಿದರು.

ಹೈಕಮಾಂಡ್‌ನಿಂದ ಮುಖಭಂಗ

ದಶಕದ ಹಿಂದಿನ ಸಮೀಕ್ಷೆ, ಅಂಕಿ-ಅಂಶಗಳು ಹಳತಾಗಿವೆ. ಹಲವಾರು ಜಾತಿ-ಉಪಜಾತಿಗಳ ದತ್ತಾಂಶಗಳು ದೋಷಪೂರಿತವಾಗಿವೆ ಎಂದು ಬಿಜೆಪಿ ಹೇಳುತ್ತಲೇ ಇತ್ತು. ಆದರೆ ಸಿದ್ದರಾಮಯ್ಯ ಶೇ.95ರಷ್ಟು ಸಮರ್ಪಕವೆಂದು ಸಚಿವ ಸಂಪುಟ ಸಭೆ ಒಳಗೆ-ಹೊರಗೆ ಸಮರ್ಥಿಸಿಕೊಂಡಿದ್ದರು.

ಬಿಜೆಪಿ ಹೇಳಿದ್ದನ್ನೇ ಕಾಂಗ್ರೆಸ್ ಹೈಕಮಾಂಡ್ ಪ್ರಸ್ತಾಪಿಸಿ ಸಿದ್ದರಾಮಯ್ಯಗೆ ಮುಖಭಂಗ ಮಾಡಿದ್ದು, ವರದಿ ಕೈಬಿಟ್ಟು ಮರು ಸಮೀಕ್ಷೆಗೆ ಮುಂದಾಗಿರುವುದು ಇತರೆ ಹಿಂದುಳಿದ ವರ್ಗಗಳಿಗೆ ಮಾಡಿದ ಅಪಮಾನವೆಂದು ವಿ.ಸುನಿಲ್‌ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರದ ಅವಧಿಯುದ್ದಕ್ಕೂ ಸಿಎಂ ಕುರ್ಚಿಗೆ ಕಂಟಕ ಬಂದಾಗಲೆಲ್ಲ ಸಿಎಂ ಸಿದ್ದರಾಮಯ್ಯ ಹೆಲ್ಮೆಟ್ ರೀತಿಯಲ್ಲಿ ಈ ವರದಿ ಬಳಸಿದ್ದಾರೆ. ಇತರೆ ಹಿಂದುಳಿದ ವರ್ಗಗಳ ಬಗ್ಗೆ ನೈಜಕಾಳಜಿ, ಬದ್ಧತೆಯಿದ್ದಿಲ್ಲವೆಂಬುದು ಸಾಬೀತಾಗಿದೆ ಎಂದರು.

ಹೊಣೆ ಯಾರು ?

ಎಚ್.ಕಾಂತರಾಜುು ಆಯೋಗ ಸಿದ್ಧಪಡಿಸಿದ ವರದಿಯಲ್ಲಿನ ದತ್ತಾಂಶಗಳನ್ನು ಬಳಸಿಕೊಂಡು ಜಯಪ್ರಕಾಶ ಹೆಗ್ಡೆ ಪರಿಷ್ಕೃತ ವರದಿ ಸಲ್ಲಿಸಿದ್ದಾರೆ. ದತ್ತಾಂಶಗಳು ಸರಿಯಿಲ್ಲವೆಂದ ಮೇಲೆ ಹೊಸ ಪ್ರವರ್ಗ ಸೃಷ್ಟಿಸಿದ್ದು ಹೇಗೆ ? ಎಂದು ಸುನಿಲ್‌ಕುಮಾರ್ ಕೇಳಿದರು.

ಸಮೀಕ್ಷೆಗಾಗಿ ಜನರ ತೆರಿಗೆ ಹಣ 165 ಕೋಟಿ ರೂ. ಖರ್ಚಾಗಿದೆ. ಅದೇ ವರದಿ ಲೆಕ್ಕಕ್ಕಿಲ್ಲದ ಮೇಲೆ ಈ ವೆಚ್ಚಕ್ಕೆ ಹೊಣೆ ಯಾರು ?, ಮರು ಸಮೀಕ್ಷೆಗಾಗಿ ಮತ್ತೆ ಕೋಟ್ಯಂತರ ರೂ. ಖರ್ಚು ಮಾಡಲು ಮುಂದಾಗಿದ್ದು, ಜನರ ಕಟ್ಟಿದ ತೆರಿಗೆ ಸ್ವಯಂ ಖುಷಿಗೆ ಬಳಸುವುದಕ್ಕಲ್ಲ ಎಂದು ಆಕ್ಷೇಪಿಸಿದರು.

ಕೇಂದ್ರ ಸರ್ಕಾರವೇ ಜನಗಣತಿ ಜತೆಗೆ ಜಾತಿ ಗಣತಿ ನಡೆಸಲು ತೀರ್ಮಾನಿಸಿದೆ. ಹೀಗಾಗಿ ರಾಜ್ಯ ಸರ್ಕಾರದಿಂದ ಮರು ಸಮೀಕ್ಷೆಯೇ ಅನಗತ್ಯವೆಚ್ಚವೆಂದರು.

ಜಾತಿ ಗಣತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಇಷ್ಟು ಹಠ ಹಿಡಿದರು. ಗೊಂದಗಳಿಗೆ ಸ್ಪಷ್ಟವಾದ ಉತ್ತರ ನೀಡದೆ ಉಡಾೆ ಮಾತುಗಳನ್ನೇ ಆಡುತ್ತಾ ಬಂದಿದ್ದಾರೆ. ಎಸ್‌ಸಿ 1.16 ಕೋಟಿ ಜನಸಂಖ್ಯೆ ಸಮೀಕ್ಷೆ ಅವಧಿ ಮೂರು ಬಾರಿ ವಿಸ್ತರಿಸಲಾಗಿದೆ. ರಾಜ್ಯದ ಎಲ್ಲ ಜನರ ಮರುಗಣತಿ 90 ದಿನಗಳಲ್ಲಿ ಸಾಧ್ಯವಾಗದು ಎಂದು ವಿ.ಸುನಿಲ್‌ಕುಮಾರ್ ಅನುಮಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕ ಬೈರತಿ ಬಸವರಾಜ, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net