

ರಾಯಚೂರು: ಜಿಲ್ಲೆಯಲ್ಲಿ ಮತ್ತೆ 39 ಮಂದಿಗೆ ಕರೊನಾ ಪಾಸಿಟಿವ್ ಬಂದಿದ್ದು, ಇದರಲ್ಲಿ ಎರಡು ಮತ್ತು ಮೂರು ವರ್ಷ ವಯಸ್ಸಿನ ಹೆಣ್ಣು ಮಗು ಕೂಡ ಸೇರಿವೆ. ಶನಿವಾರ ಬೆಳಗ್ಗೆ ಸರ್ಕಾರ ಬಿಡುಗಡೆ ಮಾಡಿದ ಕರೊನಾ ಬುಲೆಟಿನ್ನಲ್ಲಿ 39 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದೆ. ಇನ್ನು ಸಂಜೆಯ ಬುಲೆಟಿನ್ನಲ್ಲಿ ಇನ್ನೆಷ್ಟು ಸೋಂಕಿತರ ಸಂಖ್ಯೆ ಹೊರಬೀಳಲಿದೆಯೋ ಎಂಬ ಆತಂಕ ದಟ್ಟವಾಗಿದೆ.
ಇದನ್ನೂ ಓದಿರಿ ರಾಮತೀರ್ಥ ಹೊಂಡದಲ್ಲಿ ಸಾವಿರಾರು ಮೀನುಗಳ ಮಾರಣಹೋಮ!
ಇಲ್ಲಿಯವರೆಗೆ ಒಟ್ಟು 66 ಮಂದಿಗೆ ಸೋಂಕು ದೃಢಪಟ್ಟಿದೆ. ಶನಿವಾರ ಒಂದೇ ದಿನ ಪತ್ತೆಯಾದ 39 ಸೋಂಕಿತರ ಪೈಕಿ ಒಬ್ಬರು ಆಂಧ್ರಪ್ರದೇಶದಿಂದ ಬಂದ ಕಾರ್ಮಿಕ. ಇನ್ನೊಬ್ಬರಿಗೆ ಸೋಂಕಿತರ ಸಂಪರ್ಕದಿಂದ ಕರೊನಾ ಬಂದಿದೆ. ಉಳಿದ 37 ಜನ ಮಹಾರಾಷ್ಟ್ರದಿಂದ ಬಂದು ಜಿಲ್ಲೆಯ ವಿವಿಧೆಡೆ ಕ್ವಾರಂಟೈನಲ್ಲಿದ್ದವರು. ಇಂದು ಕರೊನಾ ಪಾಸಿಟಿವ್ ಬಂದ ಪುಟ್ಟ ಕಂದಮ್ಮಗಳು ಕೂಡ ಮಹಾರಾಷ್ಟ್ರದಿಂದ ಬಂದವರ ಮಕ್ಕಳು. ಶನಿವಾರ ಬೆಳಗಿನ ಜಾವದಿಂದಲೇ ಮೌಖಿಕ ಮಾಹಿತಿ ಪಡೆದ ಜಿಲ್ಲಾಡಳಿತ ಎಲ್ಲರನ್ನೂ ರಾಯಚೂರಿನ ಸರ್ಕಾರಿ ಆಸ್ಪತ್ರೆಯ ಕರೊನಾ ವಿಭಾಗಕ್ಕೆ ರವಾನಿಸುತ್ತಿತ್ತು.