ಅಡುಗೆ ಸಿಲಿಂಡರ್ ಸ್ಫೋಟ ಪ್ರಕರಣ ತಾಯಿ-ಮಗು ಸಾವು

Cylinder Explosion
Cylinder Explosion
Published on: 

ಬೆಂಗಳೂರು: ನಾಯಂಡಹಳ್ಳಿಯಲ್ಲಿ ಸಂಭವಿಸಿದ್ದ ಭೀಕರ ಅಡುಗೆ ಅನಿಲ ಸಿಲಿಂಡರ್ ಸ್ಫೋಟದ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಮತ್ತು ಮೂರು ವರ್ಷದ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಸೆ.2 ರಂದು ನಡೆದ ಸಿಲಿಂಡರ್ ಸ್ಫೋಟದಿಂದ ಒಂದೇ ಕುಟುಂಬದ ಆರು ಮಂದಿ ಗಾಯಗೊಂಡಿದ್ದರು. ಇದೀಗ ಇಬ್ಬರು ಮೃತಪಟ್ಟಿದ್ದಾರೆ ಎಂದು ಚಂದ್ರಾಲೇಔಟ್ ಠಾಣೆ ಪೊಲೀಸರು ತಿಳಿಸಿದ್ದಾರೆ. ಲಕ್ಷ್ಮಮ್ಮ(43) ಹಾಗೂ ಅವರ ಅವಳಿ ಮಕ್ಕಳಲ್ಲಿ ಓರ್ವ ಮಗಳು ಗಿರಿಜಾ(3) ಮೃತಪಟ್ಟಿದ್ದಾರೆ. ಘಟನೆಯಲ್ಲಿ ಲಕ್ಷ್ಮಮ್ಮ ಅವರಿಗೆ ಶೇ.70ರಷ್ಟು ಗಾಯಗೊಂಡಿದ್ದರು. ಮಗು ಕೂಡ ಗಂಭೀರವಾಗಿ ಗಾಯಗೊಂಡಿತ್ತು. ಚಿಕಿತ್ಸೆ ಫಲಕಾರಿಯಾಗದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ.

ಬಾಡಿಗೆ ಮನೆಯಲ್ಲಿ ಕುಟುಂಬಸ್ಥರು ವಾಸವಾಗಿದ್ದರು. ಅಡುಗೆ ಕೋಣೆಯಲ್ಲಿದ್ದ ಸಿಲಿಂಡರ್ ಸೋರಿಕೆಯಾಗಿತ್ತು. ಅಂದು ಬೆಳಗ್ಗೆ ಸುಮಾರು 7 ಗಂಟೆಗೆ ಅಡುಗೆ ಮಾಡಲು ಸ್ಟವ್ ಹಚ್ಚಿದ ಸಂದರ್ಭದಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ಭಾರೀ ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಮನೆಯ ಒಂದು ಭಾಗಕ್ಕೆ ಹಾನಿಯಾಗಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಇಡೀ ಮನೆ ಆವರಿಸಿತ್ತು.

ಆ ವೇಳೆ ಮನೆಯಲ್ಲಿದ್ದ ಕುಟುಂಬದ ಆರು ಸದಸ್ಯರು ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿದ್ದರು. ಸ್ಫೋಟದ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ನೆರೆಹೊರೆಯವರು, ಬೆಂಕಿಯ ನಡುವೆ ಸಿಲುಕಿದ್ದವರನ್ನು ಹೊರಗೆ ಕರೆತಂದು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದರು.

ಘಟನೆಯಲ್ಲಿ ಕುಟುಂಬದ ಯಜಮಾನ ಕರಿಲಿಂಗಪ್ಪ ಅವರಿಗೂ ಗಂಭೀರ ಸುಟ್ಟಗಾಯಗಳಾಗಿದ್ದು, ದೇಹದ ಶೇ.45ರಷ್ಟು ಭಾಗ ಸುಟ್ಟುಹೋಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು,ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇನ್ನು 11 ವರ್ಷದ ಚೈತ್ರಾ, 9 ವರ್ಷದ ಬಸವನಗೌಡ ಹಾಗೂ ಮೂರು ವರ್ಷದ ಮತ್ತೊಬ್ಬ ಅವಳಿ ಮಗು ಗೀತಾ ಕೂಡ ಸ್ಫೋಟದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆ ಗಂಭೀರ ಸ್ಥಿತಿಯಲ್ಲಿದ್ದಾರೆ. ಘಟನೆಯ ಕುರಿತು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net