ಹುಣಸೂರು ತಾಲೂಕಿಗೆ ಸಮಗ್ರ ಪ್ರಶಸ್ತಿ

HUN-OCT-14-1(MAKKALA DASARA)
ಮಕ್ಕಳ ದಸರಾ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಗಳಿಸಿದ ಮಾದರಿಗಳ ಜತೆ ಎಸ್.ಪಿ.ಮಹದೇವ್, ಹೇಮಲತಾ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಜರಿದ್ದರು.
Published on

ಹುಣಸೂರು : ಮೈಸೂರು ದಸರಾ ಉತ್ಸವದ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮವಾಗಿ ಭಾಗವಹಿಸುವ ಮೂಲಕ ಹುಣಸೂರು ತಾಲೂಕು ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ.

ಮೈಸೂರಿನ ಕಲಾಮಂದಿರದಲ್ಲಿ ಮಕ್ಕಳ ದಸರಾ 2024ರಲ್ಲಿ ತಾಲೂಕಿನ ತಂಡದ ಥೀಮ್ ಆಗಿದ್ದ ಇಲಾಖಾ ಪ್ರೋತ್ಸಾಹದಾಯಕ ಯೋಜನೆಗಳ ಕುರಿತು ತಾಲೂಕಿನ ದೇವಗಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸ್ಟಾಲ್ ಸ್ಥಾಪಿಸಿ ಪ್ರೋತ್ಸಾಹದಾಯಕ ಯೋಜನೆಗಳಾದ ಪಿಎಂ ಪೋಷಣ್ ಅಭಿಯಾನ, ಉಚಿತ ಪಠ್ಯ ಪುಸ್ತಕ, ಉಚಿತ ಶೂ ಸಾಕ್ಸ್ ಉಚಿತ ಸಮವಸ್ತ್ರ ಹಾಗೂ ಆರು ದಿನದ ಮೊಟ್ಟೆ, ಚಿಕ್ಕಿ ಬಾಳೆಹಣ್ಣು ಇತರ ಯೋಜನೆಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದರು.

ಶಾಲೆಯ ಕಟ್ಟಡದ ಮಾದರಿಗಳನ್ನು ಇಡಲಾಗಿತ್ತು. ಪಿಎಂ ಪೋಷಣ್ ಅಭಿಯಾನದ ಎಲ್ಲ ಪದಾರ್ಥಗಳನ್ನು ವೈವಿಧ್ಯಮಯವಾಗಿ ಬಿಂಬಿಸಲಾಗಿತ್ತು. ದೇವಗಳ್ಳಿ ಶಾಲೆಯ ವಿದ್ಯಾರ್ಥಿಗಳಾದ ಲಿಖಿತ್, ರಾಜು, ಕೀರ್ತನಾ, ಅನುಷಾ ಮತ್ತು ಜೀವನ್ ಯೋಜನೆಗಳ ಕುರಿತು ವೀಕ್ಷಕರಿಗೆ ಮಾಹಿತಿ ಒದಗಿಸಿದ್ದು ವಿಶೇಷವಾಗಿತ್ತು. ಮುಖ್ಯವಾಗಿ ಪ್ರೋತ್ಸಾಹದಾಯಕ ಯೋಜನೆಗಳ ಸೆಲ್ಫಿ ಫ್ರೇಮ್ ಎಲ್ಲರ ಗಮನ ಸೆಳೆದಿತ್ತು. ಐಇಡಿ ವಿಭಾಗದಲ್ಲಿ ಇಲಾಖೆ ಅಂಗವಿಕಲರಿಗೆ ಒದಗಿಸುವ ವಿವಿಧ ಸಾಧನ ಸಲಕರಣೆ ಮತ್ತು ಸೌಲಭ್ಯಗಳ ಕುರಿತು ಪ್ರದರ್ಶನ ನೀಡಲಾಗಿತ್ತು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹದೇವ್ ಮತ್ತು ಕ್ಷೇತ್ರ ಸಮನ್ವಯಾದಿಕಾರಿ ಹೇಮಲತಾ ಮಕ್ಕಳಿಗೆ, ಶಿಕ್ಷಕರಿಗೆ ಪ್ರೋತ್ಸಾಹ ನೀಡಿ ಮುನ್ನಡೆಸಿದ್ದರು. ಶಿಕ್ಷಣ ಸಚಿವ ಹಾಗೂ ಉಸ್ತುವಾರಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ನೀಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಶಸ್ತಿಗಳ ವಿವರ: ದೇವಗಳ್ಳಿ ಶಾಲೆಯ ವಿದ್ಯಾರ್ಥಿಗಳು ಸ್ಥಾಪಿಸಿದ್ದ ವಸ್ತು ಪ್ರದರ್ಶನದಲ್ಲಿ ದ್ವಿತೀಯಸ್ಥಾನ, ಜಾನಪದ ನೃತ್ಯ ವಿಭಾಗದಲ್ಲಿ ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆ (ಪ್ರ), ಫೇಸ್ ಪೇಂಟಿಂಗ್ ವಿಭಾಗದಲ್ಲಿ ಶಾಸ್ತ್ರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು (ತೃ), ಕರಕುಶಲತೆ ವಸ್ತು ಪ್ರದರ್ಶನ ವಿಭಾಗದಲ್ಲಿ ಕೆಜಿಬಿವಿ ರತ್ನಪುರಿ (ತೃ), ದೇಸೀಯ ಆಟದಲ್ಲಿ ದ್ವಿತೀಯಸ್ಥಾನ ಹಾಗೂ ಚಿತ್ರಕಲೆಯಲ್ಲಿ (ಪ್ರ)ಸ್ಥಾನ ಗಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net