ಕೊಂಕಣಿ ಭಾಷಿಕರ ಸಂಘಟನೆಗೆ ಬದ್ಧ

ಸನ್ಮಾನ ಕಾರ್ಯಕ್ರಮ
Felicitation Program
ಕೊಂಕಣಿ ಸಾಹಿತ್ಯ ಪರಿಷತ್ ಸದಸ್ಯೆಯಾಗಿ ನೇಮಕಗೊಂಡ ಮರಿಯಾ ಲೀಮಾ ಅವರನ್ನು ಸಾಗರದಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಸನ್ಮಾನಿಸಲಾಯಿತು. ರೊಮೇಲ್ ಮೆನೇಜಸ್, ವಿಲ್ಸನ್ ಗೋನ್ಸಾಲ್ವಿಸ್ ಇತರರಿದ್ದರು.
Published on: 

ಸಾಗರ: ದೇಶಾದ್ಯಂತ ಇರುವ ಕೊಂಕಣಿ ಭಾಷಿಕರು ಒಂದೇ ಧ್ವಜದಡಿ ತರುವ ಉದ್ದೇಶದಿಂದ ಸಂಘಟಿಸುವ ಕೆಲಸ ನಡೆಯುತ್ತಿದೆ ಎಂದು ಅಖಿಲ ಭಾರತ ಕೊಂಕಣಿ ಸಾಹಿತ್ಯ ಪರಿಷತ್ ಸದಸ್ಯೆ ಮರಿಯಾ ಲೀಮಾ ಹೇಳಿದರು.

ಕೊಂಕಣಿ ಸಾಹಿತ್ಯ ಪರಿಷತ್ ಸದಸ್ಯೆಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕೊಂಕಣಿ ಭಾಷೆ ಉಳಿಸಿ ಬೆಳೆಸಲು ಬದ್ಧತೆ ಅಗತ್ಯ. ನಮ್ಮ ಪರಿಷತ್ ಭಾಷೆಯನ್ನು ಜನಮಾನಸದಲ್ಲಿ ಉಳಿಸಲು ಪ್ರತಿವರ್ಷ ಸಾಗರದಲ್ಲಿ ಅಗತ್ಯ ಕಾರ್ಯಕ್ರಮ ಆಯೋಜಿಸುತ್ತಿದೆ. ಮುಂದಿನ ದಿನಗಳಲ್ಲಿ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ನಗರಸಭೆ ಮಾಜಿ ಸದಸ್ಯೆ ನಾದಿರಾ ಪರ್ವಿನ್ ಮಾತನಾಡಿ, ಭಾಷಾ ಬೆಳವಣಿಗೆ ಜತೆಗೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಮರಿಯಾ ಲೀಮಾ ಸಕ್ರಿಯವಾಗಿದ್ದಾರೆ. ನಮ್ಮ ಭಾಷೆಯನ್ನು ಬೆಳೆಸುವ ಕೆಲಸವಾಗಬೇಕು. ವ್ಯಾವಹಾರಿಕವಾಗಿ ನಾವು ಯಾವುದೇ ಭಾಷೆ ಮಾತನಾಡಿದರೂ ಮಾತೃಭಾಷೆಯನ್ನು ಮರೆಯಬಾರದು ಎಂದು ತಿಳಿಸಿದರು.

ರೊಮೇಲ್ ಮೆನೇಜಸ್, ವಿಲ್ಸನ್ ಗೋನ್ಸಾಲ್ವಿಸ್, ಸುರೇಶ್ ಬಾಬು, ಡಿ.ದಿನೇಶ್, ಲಲಿತಮ್ಮ, ಅರ್ಥರ್ ಗೋಮ್ಸ್, ಫ್ರಾನ್ಸಿಸ್, ನವೀನ್, ಮನ್ಸೂರಾಲಿ ಖಾನ್, ಡೆನಿಯಲ್ ಇತರರಿದ್ದರು.