

ಬ್ಯಾಕೋಡು: ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಜತೆಗೆ ಹಲವು ವರ್ಷಗಳಿಂದ ಭೂಮಿ ಸಮಸ್ಯೆ ಎದುರಿಸುತ್ತಿರುವ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೂ ನ್ಯಾಯ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಅಂದಿನಿಂದಲೂ ಇದೆ. ಮುಳುಗಡೆ ಸಂತ್ರಸ್ತರ ರೈತರಿಗೆ ನಮ್ಮ ಅವಧಿಯಲ್ಲಿ ನಾನು ಅಧಿಕಾರವಹಿಸಿಕೊಂಡ ಬಳಿಕ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಶಾಲೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸಂದೇಶ ನೀಡಿದ್ದರು. ಇಂದು ಅವರ ಆಶಯದಂತೆ ಸಿಗಂದೂರು ಕ್ಷೇತ್ರದ ಧರ್ಮಾಧಿಕಾರಿಗಳು ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ರಾಜ್ಯಾದ್ಯಂತ ಸರ್ಕಾರಿ ಶಾಲೆಗಳ ಉಳಿವಿಗೆ ದೇವಾಲಯದ ಈ ಕಾರ್ಯ ಮಾದರಿ ಎಂದು ತಿಳಿಸಿದರು.
ಸಿಗಂದೂರು ದೇವಾಲಯದ ಧರ್ಮಾಧಿಕಾರಿ ಎಸ್.ರಾಮಪ್ಪ ಮಾತನಾಡಿ, ಭೂ ಮಂಜೂರಾತಿಗೆ ರೈತರ 70ವರ್ಷಗಳ ದಾಖಲೆ ಕೇಳುತ್ತಿರುವುದು ಸರಿಯಲ್ಲ. ಈ ನಿಯಮವನ್ನು ಸಡಿಲಿಸಿ ವಿಶೇಷ ಪ್ಯಾಕೇಜ್ ಮೂಲಕ ಅನುಭವದ ಮಿತಿಯನ್ನು ಕನಿಷ್ಠ 25 ವರ್ಷಗಳಿಗೆ ಇಳಿಕೆ ಮಾಡಬೇಕು ಎಂದು ಮನವಿ ಮಾಡಿದರು.
ಕೆಡಿಪಿ ಸದಸ್ಯ ಜಿ.ಟಿ.ಸತ್ಯನಾರಾಯಣ ಮಾತನಾಡಿ, ಶಿಕ್ಷಕರ ನೇಮಕಾತಿ ಸಂದರ್ಭ ಮುಳುಗಡೆ ದ್ವೀಪಭಾಗಕ್ಕೆ ಮೊದಲ ಆದ್ಯತೆ ನೀಡಬೇಕು. ಬಾರಂಗಿ ಹೋಬಳಿಯ ಉರುಳುಗಲ್ಲು ಗ್ರಾಮಕ್ಕೆ ಈವರೆಗೂ ವಿದ್ಯುತ್, ರಸ್ತೆ, ಶಾಲೆ, ಅಂಗನವಾಡಿ ಇಲ್ಲ ಎನ್ನುವುದು ನೋವಿನ ಸಂಗತಿ. ಸರ್ಕಾರ ನ್ಯಾಯ ಒದಗಿಸಬೇಕು. ದ್ವೀಪದ ಒಂದೇ ಗ್ರಾಮದ ಮೂವತ್ತು ಕುಟುಂಬಗಳಿಗೆ ಅರಣ್ಯ ಒತ್ತುವರಿ ತೆರವು ಆದೇಶ ಹೊರಡಿಸಲಾಗಿದೆ ಎಂದು ಗಮನಕ್ಕೆ ತಂದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಡೋಲು ಬಾರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ರತ್ನಾಕರ ಹೊನಗೋಡು, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ, ಶ್ರೀದೇವಿ ರಾಮಚಂದ್ರ, ಸರಸ್ವತಿ ಗಣಪತಿ, ಮಂಜಪ್ಪ ಮರಸ, ಅರುಣ್‌ಪ್ರಸಾದ್, ಯೋಗರಾಜ ಇತರರಿದ್ದರು.