

ಶಿಕಾರಿಪುರ: ವಡ್ಡನಕಟ್ಟೆ ಕೆರೆ ಒತ್ತುವರಿ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಸಂಸ್ಥೆ ಸದಸ್ಯರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಲ್ಲೇಶ್ ಪೂಜಾರ್‌ಗೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಯುವರಾಜ್ ಮಾತನಾಡಿ, ಕಾನೂರು ಗ್ರಾಮದ ಸ.ನಂ.145 ರಲ್ಲಿ ವಡ್ಡನಕಟ್ಟೆ ಕೆರೆಯ ವಿಸ್ತೀರ್ಣ 12 ಎಕರೆ 20 ಗುಂಟೆ ಇದೆ. ಇದರಲ್ಲಿ ಸಾಕಷ್ಟು ಪ್ರಮಾಣ ಒತ್ತುವರಿಯಾಗಿದೆ. ಹಲವರು ಕೆರೆಯನ್ನು ಒತ್ತುವರಿ ಮಾಡಿ ನಂತರ ಆ ಜಾಗವನ್ನು ಸಮತಟ್ಟು ಮಾಡಿ ಕಟ್ಟಡಗಳನ್ನು ಕಟ್ಟಿದ್ದಾರೆ ಮತ್ತು ಪಾರ್ಕ್‌ಗೆ ನೀಡಲಾಗಿದೆ. ಕೆಲವು ವರ್ಷಗಳ ಹಿಂದೆ ಈ ಬಗ್ಗೆ ಕೆಲವು ಪ್ರಗತಿಪರ ಸಂಘಟನೆಗಳು ದನಿ ಎತ್ತಿದಾಗ ಕಾಟಾಚಾರಕ್ಕೆ ಬಡವರ ಮನೆಗಳನ್ನು ತೆರವುಗೊಳಿಸಲಾಗಿತ್ತು. ಆದರೆ ಪ್ರಭಾವಿಗಳ ಮಾಡಿದ ಒತ್ತುವರಿ ತೆರವುಗೊಳಿಸಲಿಲ್ಲ. ಇದಕ್ಕೆ ಸಂಬಂಧಿಸಿ ಪುರಸಭೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಕೆರೆಯನ್ನು ಒತ್ತುವರಿಯಿಂದ ಸಂಪೂರ್ಣ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂಬಂಧ ಮುಖ್ಯಮಂತ್ರಿಗಳಿಗೆ, ಕಂದಾಯ ಸಚಿವರಿಗೆ, ಉಸ್ತುವಾರಿ ಸಚಿವರಿಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೂ ಒತ್ತುವರಿ ತೆರವುಗೊಳಿಸಲು ಪತ್ರ ಬರೆಯಲಾಗುತ್ತಿದೆ. ತಕ್ಷಣ ಪುರಸಭೆ ಅಧಿಕಾರಿಗಳು ಕೆರೆ ಒತ್ತುವರಿ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು
ಮಾನವ ಹಕ್ಕುಗಳ ಅಪರಾಧ ನಿಯಂತ್ರಣ ಸಂಸ್ಥೆ ತಾಲೂಕು ಅಧ್ಯಕ್ಷೆ ಆಯಿಷಾ, ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಮಂಜುನಾಥ್, ಗೆಳೆಯರ ಬಳಗದ ಅಬ್ದುಲ್ ಗಫಾರ್, ಚಂದ್ರಶೇಖರ್, ಇಂತಿಯಾಜ್, ಗುರು, ಫಕ್ಕೀರಪ್ಪ, ರುದ್ರಪ್ಪ, ನಾಗರಾಜ್, ಸುರೇಶ್ ನಾಯಕ್, ಲಿಂಗರಾಜು ಇತರರಿದ್ದರು.