

ಹೊಳೆಹೊನ್ನೂರು: ಪ್ರತಿ ಊರಿನಲ್ಲಿ ಪರಿಸರದ ನೈರ್ಮಲ್ಯ ಕಾಪಾಡುವ ಪೌರ ಕಾರ್ಮಿಕರ ಶ್ರಮಕ್ಕೆ ಪ್ರತಿಯೊಬ್ಬರೂ ಗೌರವ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿ.ಉನ್ನೀಕುಮಾರ್ ಹೇಳಿದರು.
ಪಟ್ಟಣ ಪಂಚಾಯಿತಿಯಿಂದ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿದಿನ ಬೆಳಗ್ಗೆ ಜನರು ಎಚ್ಚರವಾಗುವ ಮುನ್ನವೇ ರಸ್ತೆ, ಬಡಾವಣೆ ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಿ ಉತ್ತಮ ವಾತಾವರಣ ನಿರ್ಮಿಸುವ ನಿಜವಾದ ಪರಿಸರ ಸೃಷ್ಟಿಕರ್ತರಾಗಿದ್ದಾರೆ ಎಂದರು.
ಪೌರ ಕಾರ್ಮಿಕರ ನಿಸ್ವಾರ್ಥ ಸೇವೆಯಿಂದ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದೆ. ಪೌರ ಕಾರ್ಮಿಕರು ನಮ್ಮ ಆರೋಗ್ಯ ರಕ್ಷಕರೂ ಹೌದು. ಅವರ ಶ್ರಮಕ್ಕೆ ಗೌರವ, ಸುರಕ್ಷತೆ ಹಾಗೂ ಮೂಲ ಸೌಲಭ್ಯ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ವಿವಿಧ ಕ್ರೀಡೆ ಹಾಗೂ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಜಾಥಾ ನಡೆಸಲಾಯಿತು. ಪೌರ ಕಾರ್ಮಿಕರ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಕೆ.ರಂಗಪ್ಪ, ಪಪಂ ರಾಜಸ್ವ ನಿರೀಕ್ಷಕ ಹೇಮಂತ್‌ಕುಮಾರ್, ಆರೋಗ್ಯ ನಿರೀಕ್ಷಕ ಎನ್.ಅಣ್ಣಪ್ಪಾಚಾರಿ, ಲೆಕ್ಕಿಗ ಎಸ್.ಪ್ರದೀಪ್, ಎನ್.ರಂಗನಾಥ್, ಎಂ.ಕೆ.ಭರತ್, ಬಿ.ಹಾಲೇಶ್, ತನುಜಾ, ಜಯಶ್ರೀ ಇತರರಿದ್ದರು.