ಕೆಎಸ್​ಆರ್​ಟಿಸಿ ವೋಲ್ವೋ ಬಸ್​ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಕೆಳಗಿಳಿಸಿ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಪ್ರಯಾಣಿಕರು

channapatna 21 mar 20
Published on

ರಾಮನಗರ: ಅಮೆರಿಕಾದಿಂದ ಬೆಂಗಳೂರಿಗೆ ಆಗಮಿಸಿ ಕೆಎಸ್​ಆರ್​ಟಿಸಿ ವೋಲ್ವೋ ಬಸ್​ನಲ್ಲಿ ಮೈಸೂರಿಗೆ ಪ್ರಯಾಣಿಸುತ್ತಿದ್ದ ಕರೊನಾ ವೈರಸ್​ ಶಂಕಿತ ವ್ಯಕ್ತಿಯನ್ನು ಬಸ್​ನಿಂದ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.

ಅಮೆರಿಕಾದಿಂದ ಬಂದ ವ್ಯಕ್ತಿಗೆ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಿ ಆತನ ಬಲಗೈಗೆ ಮುದ್ರೆ ಹಾಕಿ ಪ್ರತ್ಯೇಕ ವಾಹನದಲ್ಲಿ ಮನೆಗೆ ತೆರಳುವಂತೆ ವಿಮಾನ ನಿಲ್ದಾಣದಲ್ಲಿದ್ದ ಆರೋಗ್ಯ ಅಧಿಕಾರಿಗಳು ಸೂಚಿಸಿದ್ದರು.

ಪ್ರಯಾಣಿಕ ಸೂಚನೆ ಧಿಕ್ಕರಿಸಿ ವೋಲ್ವೋ ಬಸ್​ನಲ್ಲಿ ಸಂಚರಿಸುತ್ತಿದ್ದ. ಚನ್ನಪಟ್ಟಣ ಬಳಿ ವ್ಯಕ್ತಿಗೆ ಮುದ್ರೆ ಹಾಕಿರುವುದನ್ನು ಗಮನಿಸಿದ ಇತರ ಪ್ರಯಾಣಿಕರು ಜಗಳ ಆರಂಭಿಸಿದರು. ಕೂಡಲೇ ಬಸ್​ ಚನ್ನಪಟ್ಟಣ ನಿಲ್ದಾಣಕ್ಕೆ ತೆರಳಿ ಅಲ್ಲಿಯೇ ನಿಂತಿತು. ಪ್ರಯಾಣಿಕನನ್ನು ಕೆಳಗಿಳಿಸಿ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವ್ಯಕ್ತಿಗೆ ಕರೊನಾ ವೈರಸ್​ ಸೋಂಕು ಹರಡಿದೆಯೇ ಎಂಬುದರ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಳಿ ಮಾಹಿತಿ ಇಲ್ಲ. ಹೀಗಾಗಿ ಸಾರ್ವಜನಿಕರಿಗೆ ಭೀತಿ ಆರಂಭವಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net