

ನವದೆಹಲಿ: ಮನಿ ಲಾಂಡ್ರಿಂಗ್ ಪ್ರಕರಣದ ಆರೋಪ ಎದುರಿಸುತ್ತಿದ್ದ ಸಿಬಿಐ ವಿಶೇಷ ಮಾಜಿ ನಿರ್ದೇಶಕ ರಾಕೇಶ್ ಅಸ್ತಾನ ಆರೋಪ ಮುಕ್ತರಾಗಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ಸಿಬಿಐ ಅಸ್ತಾನ ಹಾಗೂ ಸಿಬಿಐ ಉಪ ಪೊಲೀಸ್ ವರಿಷ್ಟಾಧಿಕಾರಿಯಾಗಿದ್ದ ದೇವೇಂದರ್ ಕುಮಾರ್ ಅವರನ್ನು ಆರೋಪ ಮುಕ್ತಗೊಳಿಸಿದೆ.
ಅಸ್ತಾನ ಅವರು ಸಿಬಿಐ ವಿಶೇಷ ನಿರ್ದೇಶಕರಾಗಿದ್ದ ವೇಳೆ ಸಿಬಿಐ ಮುಖ್ಯಸ್ಥರಾಗಿದ್ದ ಅಲೋಕ್ ವರ್ಮಾ ಅವರು 2018ರಲ್ಲಿ ಮನಿಲಾಂಡ್ರಿಂಗ್ ಕೇಸು ದಾಖಲಿಸಿ ತನಿಖೆಗೆ ಸೂಚಿಸಿದ್ದರು.
ಹೈದರಾಬಾದ್ ಮೂಲದ ಉದ್ಯಮಿ ಸತೀಶ್ ಬಾಬು ಸನಾ ಎಂಬುವವರು ನೀಡಿದ ದೂರಿನ ಮೇರೆಗೆ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ರಾಕೇಶ್ ಅಸ್ತಾನ ಹಾಗೂ ಉಪ ಪೊಲೀಸ್ ವರಿಷ್ಠಾಧಿಕಾರಿ ದೇವೇಂದರ್ ಕುಮಾರ್ ವಿರುದ್ಧ ಕ್ರಿಮಿನಲ್ ಪಿತೂರಿ, ಭ್ರಷ್ಟಾಚಾರ ಮತ್ತು ದುಷ್ಕೃತ್ಯದ ಆರೋಪ ಹೊರಿಸಿ ಕೇಸು ದಾಖಲಿಸಲಾಗಿತ್ತು.
ಮಾಂಸ ರಫ್ತುದಾರ ಮೊಯಿನ್ ಖುರೇಷಿಗೆ ಸಂಬಂಧಿಸಿದ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ದೂರುದಾರ ಸತೀಶ್ ಸನಾ ಬಾಬು ಅವರನ್ನು ಉಳಿಸಲು ಕೇಸು ದಾಖಲಾಗಿತ್ತು. ಅಸ್ತಾನ ಹಾಗೂ ದೇವೇಂದರ್ ಕುಮಾರ್ ಲಂಚ ಸ್ವೀಕರಿಸಿದ್ದರು ಎನ್ನಲಾಗಿತ್ತು. ವಿಚಾರಣೆ ವೇಳೆ ಇಬ್ಬರ ವಿರುದ್ಧ ಇದ್ದ ಆರೋಪಗಳು ಸಾಬೀತಾಗಿಲ್ಲ. ಅಲ್ಲದೆ ಇದಕ್ಕೆ ಯಾವುದೇ ಪುರಾವೆಗಳು ಇಲ್ಲದ ಹಿನ್ನೆಲೆಯಲ್ಲಿ ಇಬ್ಬರನ್ನು ಆರೋಪ ಮುಕ್ತಗೊಳಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)