Blackbuck: 'ಹುಲ್ಲುಗಾವಲು ಪಾಳುಭೂಮಿಯಲ್ಲ, ಜೀವಕವಚ!': ಕೃಷ್ಣಮೃಗಗಳ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ

ಕೃಷ್ಣಮೃಗಗಳು ಮತ್ತು ಹುಲ್ಲುಗಾವಲುಗಳ ಸಂರಕ್ಷಣೆ ಕುರಿತು ಕರ್ನಾಟಕ ಅರಣ್ಯ ಇಲಾಖೆ ಇನ್‌ಸ್ಟಾಗ್ರಾಮ್ ಮೂಲಕ ವಿಶೇಷ ಜಾಗೃತಿ ಮೂಡಿಸುತ್ತಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
Conservation of Blackbucks, Forest Department
ಕೃಷ್ಣಮೃಗಗಳ ಸಂರಕ್ಷಣೆ ಮತ್ತು ಹುಲ್ಲುಗಾವಲುಗಳ ಬಗ್ಗೆ ಅರಣ್ಯ ಇಲಾಖೆ ಜಾಗೃತಿ
Published on: 

Karnataka Blackbuck: ಭಾರತೀಯ ಉಪಖಂಡದ ಅತ್ಯಂತ ಆಕರ್ಷಕ ಹುಲ್ಲೆ ಜಾತಿಯ ಪ್ರಾಣಿಯಾದ ಕೃಷ್ಣಮೃಗಗಳ (Blackbuck - Antilope cervicapra) ಸಂರಕ್ಷಣೆ ಹಾಗೂ ಹುಲ್ಲುಗಾವಲುಗಳ ಮಹತ್ವದ ಕುರಿತು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಹುಲ್ಲುಗಾವಲುಗಳ ರಕ್ಷಣೆ: ಸಾಮಾನ್ಯವಾಗಿ ಪಾಳುಭೂಮಿ ಎಂದು ಕಡೆಗಣಿಸುವ ಒಣ ಹುಲ್ಲುಗಾವಲುಗಳು ನಮ್ಮ ಪರಿಸರ ವ್ಯವಸ್ಥೆಗೆ ಎಷ್ಟು ಮುಖ್ಯ ಎಂಬುದನ್ನು ತಿಳಿಸಲು "ಹುಲ್ಲುಗಾವಲುಗಳು ಪಾಳುಭೂಮಿಯಲ್ಲ, ನಮ್ಮ ನಾಡಿನ ಜೀವಕವಚ" ಎಂಬ ಸಂದೇಶ ನೀಡಲಾಗಿದೆ.

ಬಳ್ಳಾರಿ ವನ್ಯಜೀವಿ ಧಾಮ: ಬಳ್ಳಾರಿಯ ಒಣ ಅರಣ್ಯ ಪ್ರದೇಶಗಳು ಕೃಷ್ಣಮೃಗಗಳು ಹಾಗೂ ಅಪರೂಪದ ಹಕ್ಕಿಗಳಾದ (ಎರೆಹಕ್ಕಿ/ಕರಡವ ಹಕ್ಕಿಗಳು) ಪ್ರಮುಖ ಆವಾಸಸ್ಥಾನವಾಗಿವೆ ಎಂದು ವಿವರಿಸಲಾಗಿದೆ.

ಒತ್ತುವರಿ ತಡೆ: ಈ ವಿಶಿಷ್ಟ ವನ್ಯಸಂಪತ್ತನ್ನು ಕಾಪಾಡಲು ಹುಲ್ಲುಗಾವಲುಗಳ ಒತ್ತುವರಿಯನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಕರೆಯಿಡಲಾಗಿದೆ.

Blackbucks in the Grassland
ಹುಲ್ಲುಗಾವಲಿನ ಕೃಷ್ಣಮೃಗಗಳು

ಕೃಷ್ಣಮೃಗಗಳ ವಿಶೇಷತೆಗಳೇನು?

ಅಪಾರ ವೇಗ: ಚೀತಾವನ್ನು ಹೊರತುಪಡಿಸಿದರೆ, ಭೂಮಿ ಮೇಲಿನ ಅತ್ಯಂತ ವೇಗವಾಗಿ ಓಡುವ ಪ್ರಾಣಿಗಳಲ್ಲಿ ಕೃಷ್ಣಮೃಗಗಳೂ ಪ್ರಮುಖ ಸ್ಥಾನ ಪಡೆದಿವೆ.

ದೇಹ ರಚನೆ: ಗಂಡು ಕೃಷ್ಣಮೃಗಗಳು ಸುರುಳಿಯಾಕಾರದ ಉದ್ದನೆಯ ಕೊಂಬುಗಳನ್ನು ಹೊಂದಿದ್ದು, ವಯಸ್ಸಾಗುತ್ತಿದ್ದಂತೆ ಬೆನ್ನಿನ ಬಣ್ಣ ಕಪ್ಪಾಗುತ್ತದೆ. ಹೆಣ್ಣು ಮೃಗಗಳಿಗೆ ಸಾಮಾನ್ಯವಾಗಿ ಕೊಂಬುಗಳಿರುವುದಿಲ್ಲ ಮತ್ತು ಅವು ಕಂದು ಬಣ್ಣದಲ್ಲಿರುತ್ತವೆ

ಆವಾಸಸ್ಥಾನ: ಇವು ಪ್ರಮುಖವಾಗಿ ಒಣ ಹುಲ್ಲುಗಾವಲುಗಳು, ಮುಳ್ಳಿನ ಪೊದೆಕಾಡುಗಳು ಹಾಗೂ ಅರೆ-ಬರಡು ಪ್ರದೇಶಗಳಲ್ಲಿ ವಾಸಿಸಲು ಇಷ್ಟಪಡುತ್ತವೆ.

ಕರ್ನಾಟಕದಲ್ಲಿ ಕೃಷ್ಣಮೃಗಗಳ ಪ್ರಮುಖ ತಾಣಗಳು

ರಾಜ್ಯದಲ್ಲಿ ಕೃಷ್ಣಮೃಗಗಳ ಸಂರಕ್ಷಣೆಗಾಗಿಯೇ ವಿಶೇಷ ವನ್ಯಜೀವಿ ವಲಯಗಳನ್ನು ಗುರುತಿಸಲಾಗಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಕೃಷ್ಣಮೃಗ ಅಭಯಾರಣ್ಯವು 1974ರಲ್ಲೇ ಸ್ಥಾಪನೆಯಾದ ಪ್ರಮುಖ ತಾಣವಾಗಿದ್ದರೆ, ತುಮಕೂರು ಜಿಲ್ಲೆಯ ಮೈದನಹಳ್ಳಿಯಲ್ಲಿರುವ 'ಜಯಮಂಗಲಿ ಕೃಷ್ಣಮೃಗ ಸಂರಕ್ಷಣಾ ಮೀಸಲು ಪ್ರದೇಶ'ದಲ್ಲಿ 800ಕ್ಕೂ ಹೆಚ್ಚು ಕೃಷ್ಣಮೃಗಗಳು ಮುಕ್ತವಾಗಿ ಓಡಾಡುತ್ತಿದ್ದು, ಇದು ರಾಜ್ಯದ ಮತ್ತೊಂದು ಪ್ರಮುಖ ಹುಲ್ಲುಗಾವಲು ವಲಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net