‘ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ’; ಜಾತ್ಯತೀತ ರಾಜ್ಯದಲ್ಲಿ ಕೇಸರಿ ಪಕ್ಷದ ಆಟ ನಡೆಯಲ್ಲ ಎಂದ ಸಿಎಂ ಸತೀಶನ್! | V.D. Satheesan on BJP

ಕೇರಳದಲ್ಲಿ ಬಿಜೆಪಿ ಅಧಿಕಾರ ಹಿಡಿಯೋದು ಸಾಧ್ಯವಿಲ್ಲ ಎಂದು ಸಿಎಂ ವಿ.ಡಿ. ಸತೀಶನ್ ಹೇಳಿದ್ದಾರೆ. ರಾಜ್ಯದ ಜಾತ್ಯತೀತ ಮನೋಭಾವ ಬಿಜೆಪಿಯ ಬೆಳವಣಿಗೆಗೆ ಅಡ್ಡಿಯಾಗಲಿದೆ ಎಂದ ಅವರು, ಪಕ್ಷದ ಗೆಲುವಿಗೆ ಸಿಪಿಐ(ಎಂ)ನ ವೈಫಲ್ಯವೇ ಕಾರಣ ಎಂದು ಆರೋಪಿಸಿದ್ದಾರೆ
 V.D. Satheesan on BJP
ಮುಖ್ಯಮಂತ್ರಿ ವಿ.ಡಿ.ಸತೀಶನ್
Published on: 
Summary

ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದು ಕಷ್ಟ ಎಂದ ಸಿಎಂ ವಿ.ಡಿ.ಸತೀಶನ್

ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಗೆ ಜಾತ್ಯತೀತ ಮನೋಭಾವವೇ ಅಡ್ಡಿ

ಕಾಂಗ್ರೆಸ್ ಜಾತ್ಯತೀತ ನಿಲುವಿನಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟನೆ

Kerala CM V.D.Satheesan: ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಕನಸು ನನಸಾಗಲ್ಲ. ರಾಜ್ಯದ ಜಾತ್ಯತೀತ ಮನೋಭಾವವೇ ಬಿಜೆಪಿಯ ಬೆಳವಣಿಗೆಗೆ ಅಡ್ಡಿಯಾಗಲಿದೆ ಎಂದು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕಾಂಗ್ರೆಸ್‌ಗೆ ದೊಡ್ಡ ರಾಜಕೀಯ ಸವಾಲಲ್ಲ ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಸತೀಶನ್, ಕೇರಳದಲ್ಲಿ ಬಿಜೆಪಿ ಮೂರು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿರುವುದು ಮತ್ತು ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಗಳಿಸಿರುವುದನ್ನು ಉಲ್ಲೇಖಿಸಿದ್ದಾರೆ. ಆದರೆ, ಈ ಬೆಳವಣಿಗೆಗೆ ಆಡಳಿತದಲ್ಲಿದ್ದ ಸಿಪಿಐ(ಎಂ)ನ ರಾಜಕೀಯ ವೈಫಲ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

‘ಕೇರಳ ಜಾತ್ಯತೀತ ರಾಜ್ಯ’

ಕೇರಳದಲ್ಲಿ ಬಿಜೆಪಿಗೆ ಶೇ.15ರಷ್ಟು ಮತ ಸಿಗಬಹುದು, ಹೆಚ್ಚೆಂದರೆ ಶೇ.20ರ ಗಡಿ ದಾಟೋದು ಕಷ್ಟ ಎಂದು ಸತೀಶನ್ ಹೇಳಿದ್ದಾರೆ. ರಾಜ್ಯದ ಜಾತ್ಯತೀತ ಮನೋಭಾವವೇ ಬಿಜೆಪಿಯ ಬೆಳವಣಿಗೆಗೆ ಅಡ್ಡಿಯಾಗಲಿದೆ ಎಂದಿದ್ದಾರೆ. ಬಿಜೆಪಿ ಮತ್ತು ಸಂಘ ಪರಿವಾರ ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿದ ಅವರು, ಇದರಿಂದ ಕೇರಳದ ರಾಜಕೀಯ ಮತ್ತು ಸಾಮಾಜಿಕ ಸ್ವರೂಪ ಬದಲಾಗಲ್ಲ ಎಂದು ಹೇಳಿದ್ದಾರೆ.

ಸಿಪಿಐ(ಎಂ) ವಿರುದ್ಧವೂ ಆರೋಪ

ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆ ಹಾಗೂ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವು ಆಡಳಿತದಲ್ಲಿದ್ದ ಸಿಪಿಐ(ಎಂ) ನೀಡಿದ ಉಡುಗೊರೆ ಇದ್ದಂತೆ ಎಂದು ಸತೀಶನ್ ಟೀಕಿಸಿದ್ದಾರೆ. ಚುನಾವಣೆಯಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳು ಮತ್ತು ಕ್ಷೇತ್ರಗಳ ಪುನರ್‌ವಿಂಗಡಣೆಗೆ ಸಂಬಂಧಿಸಿದ ವಿಚಾರಗಳೂ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿವೆ ಎಂದು ಆರೋಪಿಸಿದ್ದಾರೆ.

ಕ್ರೈಸ್ತ–ಮುಸ್ಲಿಂ ಸಮುದಾಯಗಳ ಒಡಕಿಗೆ ಯತ್ನ

ಕೇರಳದಲ್ಲಿ ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಬಿಜೆಪಿ ಕಳೆದ ಹತ್ತು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಆದರೆ ಈ ಪ್ರಯತ್ನ ಯಶಸ್ವಿಯಾಗಿಲ್ಲ. ಎರಡೂ ಸಮುದಾಯಗಳ ಜತೆ ಕಾಂಗ್ರೆಸ್ ಉತ್ತಮ ಸಂಬಂಧ ಹೊಂದಿದೆ ಎಂದ ಅವರು, ಕೇರಳದ ಹಿಂದೂ ಸಮುದಾಯದ ಜನರೂ ಜಾತ್ಯತೀತ ಮನೋಭಾವ ಹೊಂದಿದ್ದು, ಕಾಂಗ್ರೆಸ್ ಮತ್ತು ಸಿಪಿಐ(ಎಂ) ಎರಡಕ್ಕೂ ಮತ ಹಾಕುತ್ತಾರೆ ಎಂದು ಹೇಳಿದ್ದಾರೆ.

‘ದ್ವೇಷದ ರಾಜಕಾರಣಕ್ಕೆ ಕಾಂಗ್ರೆಸ್ ಮಣಿಯಲ್ಲ’

ಚುನಾವಣೆಯಲ್ಲಿ ಲಾಭ ಪಡೆಯಲು ಕಾಂಗ್ರೆಸ್ ತನ್ನ ಜಾತ್ಯತೀತ ನಿಲುವನ್ನು ಬದಲಿಸಿಕೊಳ್ಳುವುದಿಲ್ಲ ಎಂದು ಸತೀಶನ್ ಸ್ಪಷ್ಟಪಡಿಸಿದ್ದಾರೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಯಾರೂ ಬೆಂಬಲಿಸಬಾರದು ಎಂಬುದು ಕಾಂಗ್ರೆಸ್‌ನ ನಿಲುವು ಎಂದಿದ್ದಾರೆ.

ಇದನ್ನೂ ಓದಿ: ದುರ್ಗಾದೇವಿಯ ಕಥೆ ಅನಿಮೇಷನ್ ರೂಪದಲ್ಲಿ ಬೆಳ್ಳಿತೆರೆಗೆ; 2027ರ ಫೆಬ್ರವರಿಯಲ್ಲಿ ವಿಶ್ವಾದ್ಯಂತ ರಿಲೀಸ್! | Maha Devi Adishakti

ನರೇಂದ್ರ ಮೋದಿ ಸರ್ಕಾರದ 25 ವರ್ಷಗಳ ಆಡಳಿತದ ಕುರಿತು ಮಾತನಾಡಿದ ಸತೀಶನ್, ಮೋದಿಗೆ ಅಭಿನಂದನೆ ಸಲ್ಲಿಸಿದರೂ ಬಿಜೆಪಿಯ ರಾಜಕೀಯ ದಿಕ್ಕನ್ನು ಟೀಕಿಸಿದ್ದಾರೆ. ಬಿಜೆಪಿ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಆರ್‌ಎಸ್‌ಎಸ್‌ ಮತ್ತು ಸಂಘ ಪರಿವಾರವೇ ಬಿಜೆಪಿಯ ರಾಜಕೀಯ ಕಾರ್ಯತಂತ್ರವನ್ನು ನಿಯಂತ್ರಿಸುತ್ತಿವೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net