ಫೆಬ್ರವರಿಯಲ್ಲಿ ಮದುವೆಗೆ ಸಜ್ಜಾದ ಬಿಗ್‌ಬಾಸ್ ಜೋಡಿ! ಹೇಗಿರಲಿದೆ ಐಶ್ವರ್ಯಾ-ಶಿಶಿರ್ ಕಲ್ಯಾಣ? | Aishwarya-Shishir wedding

Aishwarya-Shishir wedding
ಫೆಬ್ರವರಿಯಲ್ಲಿ ಹಸೆಮಣೆ ಏರಲಿದ್ದಾರೆ ಬಿಗ್‌ಬಾಸ್ ಐಶ್ವರ್ಯಾ-ಶಿಶಿರ್
Published on: 

Aishwarya-Shishir wedding: ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಫೇಮಸ್ ಆಗಿದ್ದ ಐಶ್ವರ್ಯಾ ಶಿಂದೋಗಿ ಮತ್ತು ಶಿಶಿರ್ ಶಾಸ್ತ್ರಿ ಈಗ ಮದುವೆಯಾಗಲು ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಆಪ್ತರ ಸಮ್ಮುಖದಲ್ಲಿ ಇಬ್ಬರ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿತ್ತು. ಇದೀಗ ತಮ್ಮ ಮದುವೆ ಯಾವಾಗ, ಹೇಗೆ ನಡೆಯಲಿದೆ ಅನ್ನೋದರ ಬಗ್ಗೆ ಶಿಶಿರ್ ಶಾಸ್ತ್ರಿ ಮಾಹಿತಿ ಹಂಚಿಕೊಂಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಶಿಶಿರ್, ಮುಂದಿನ ವರ್ಷದ ಫೆಬ್ರವರಿಯಲ್ಲಿ ಮದುವೆಯಾಗಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಮದುವೆಯ ಸಿದ್ಧತೆಗಳು ಆರಂಭವಾಗಿದ್ದು, ನಿಖರ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ.

ಶಿವನ ದೇವಸ್ಥಾನದಲ್ಲಿ ಮದುವೆ

ಸೆಲೆಬ್ರಿಟಿಗಳ ಮದುವೆ ಎಂದರೆ ಅದ್ಧೂರಿ ಕಲ್ಯಾಣ ಮಂಟಪ, ದೊಡ್ಡ ವೇದಿಕೆ ಮತ್ತು ಸಂಭ್ರಮದ ಕಾರ್ಯಕ್ರಮಗಳು ನೆನಪಾಗುತ್ತವೆ. ಆದರೆ ಐಶ್ವರ್ಯಾ ಮತ್ತು ಶಿಶಿರ್ ವಿಭಿನ್ನವಾಗಿ ಮದುವೆಯಾಗಲು ನಿರ್ಧರಿಸಿದ್ದಾರೆ. ಉಮಾಮಹೇಶ್ವರನ ಸನ್ನಿಧಿಯಲ್ಲಿ, ಶಿವನ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗುವುದು ಈ ಜೋಡಿಯ ಆಸೆ. ದೇವರ ಆಶೀರ್ವಾದದೊಂದಿಗೆ ಹೊಸ ಜೀವನ ಆರಂಭಿಸಲು ಬಯಸಿದ್ದಾರೆ ಎಂದು ಶಿಶಿರ್ ತಿಳಿಸಿದ್ದಾರೆ.

ರಿಸೆಪ್ಷನ್, ಸಂಗೀತ್ ಬದಲು ವಿಶೇಷ ಕಾರ್ಯಕ್ರಮ

ಮದುವೆಗೂ ಮುನ್ನ ಸಾಮಾನ್ಯವಾಗಿ ನಡೆಯುವ ಸಂಗೀತ್ ಅಥವಾ ರಿಸೆಪ್ಷನ್ ಬದಲು ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲು ಜೋಡಿ ಪ್ಲ್ಯಾನ್ ಮಾಡಿದೆ. ಈ ಕಾರ್ಯಕ್ರಮಕ್ಕೆ ಅರ್ಥಪೂರ್ಣವಾದ ಹೆಸರಿಡುವ ಬಗ್ಗೆಯೂ ಚರ್ಚೆ ನಡೆಸುತ್ತಿದ್ದಾರೆ. ಮದುವೆಯ ಹಿಂದಿನ ದಿನ ಈ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಕುಟುಂಬಸ್ಥರು, ಸ್ನೇಹಿತರು ಮತ್ತು ಆಪ್ತರೊಂದಿಗೆ ಸಂಭ್ರಮ ಹಂಚಿಕೊಳ್ಳಲಿದ್ದಾರೆ. ಮರುದಿನ ಶಿವನ ದೇವಸ್ಥಾನದಲ್ಲಿ ಮದುವೆ ನಡೆಯಲಿದೆ.

ಬಿಗ್‌ಬಾಸ್ ಮನೆಯಿಂದ ಮದುವೆ ವರೆಗೆ

ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಐಶ್ವರ್ಯಾ ಮತ್ತು ಶಿಶಿರ್ ನಡುವಿನ ಆತ್ಮೀಯತೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಶೋ ಮುಗಿದ ಬಳಿಕವೂ ಇವರ ಸಂಬಂಧದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮುಂದುವರಿದಿತ್ತು. ಇದೀಗ ನಿಶ್ಚಿತಾರ್ಥದ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿರುವ ಜೋಡಿ, ಫೆಬ್ರವರಿಯಲ್ಲಿ ಹಸೆಮಣೆ ಏರಲು ಸಿದ್ಧವಾಗಿದೆ.

ಇದನ್ನೂ ಓದಿ: ಈಜುಕೊಳಕ್ಕೆ ಬಿದ್ದ ಪುಟ್ಟ ಕಂದಮ್ಮನನ್ನು ಕಾಪಾಡಿದ ಶ್ವಾನ; ಹೀರೋ ಡಾಗ್ ಸಾಹಸಕ್ಕೆ ನೆಟ್ಟಿಗರ ಮೆಚ್ಚುಗೆ | Hero Dog

ಮದುವೆಯ ನಿಖರ ದಿನಾಂಕ, ದೇವಸ್ಥಾನದ ಸ್ಥಳ ಮತ್ತು ವಿಶೇಷ ಕಾರ್ಯಕ್ರಮದ ಹೆಸರು ಯಾವಾಗ ಬಹಿರಂಗವಾಗಲಿದೆ ಎಂಬುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.