

ಚನ್ನರಾಯಪಟ್ಟಣ: ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯಲಿರುವ ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಫೆ.11 ರಂದು ಆಯೋಜಿಸಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಫೆ.11ರಂದು ಪಟ್ಟಣದ ನವೋದಯ ವಿದ್ಯಾಸಂಘದ ಆವರಣದಲ್ಲಿ ಅಳ್ವಾಸ್ ನುಡಿಸಿರಿ ವಿರಾಸತ್ ಕಾರ್ಯಕ್ರಮ ನಡೆಯಲಿದೆ. ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮೋಹನ್‌ಆಳ್ವ ಅವರು ಶಿಕ್ಷಣದ ಜತೆಗೆ ಸಂಗೀತ, ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಯ ವೈಭವವನ್ನು ವಿದ್ಯಾರ್ಥಿಗಳ ಮೂಲಕ ಅನಾವರಣಗೊಳಿಸುವ ಕೆಲಸ ಮಾಡುತ್ತಿದ್ದಾರೆ. ದೇಸಿ ಸೊಗಡಿನ ಕಲೆಯನ್ನು ಉಳಿಸುವ ಕೆಲಸವನ್ನು ಹಲವಾರು ವರ್ಷಗಳಿಂದ ನಿರ್ವಹಿಸುತ್ತಿದ್ದಾರೆ. ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ 350 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಸಂಜೆ 5.45ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗುವುದರಿಂದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಸಕಾಲಕ್ಕೆ ಆಗಮಿಸಬೇಕು. ಈಗಾಗಲೇ ಚನ್ನರಾಯಪಟ್ಟಣದಲ್ಲಿ ಎರಡು ಸಲ ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ್ದಾರೆ. ಈಗ ಮೂರನೇ ಬಾರಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಪಟ್ಟಣದ ಮಾಧ್ಯಮಿಕ ಶಾಲಾ ಆವರಣ ಮತ್ತು ನವೋದಯ ಕಾಲೇಜು ಪಕ್ಕದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ಸಾಂಸ್ಕೃತಿಕ ವೈಭವದಲ್ಲಿ ಶಾಸ್ತ್ರೀಯ ನೃತ್ಯ, ಆಂಧ್ರದ ಜನಪದಬಂಜಾರ, ಬಡಗತಿಟ್ಟು ಯಕ್ಷಗಾನ, ಮಣಿಪುರಿ ಸ್ಟಿಕ್ ಡಾನ್ಸ್, ಶಾಸ್ತ್ರಿಯ ನೃತ್ಯ, ಗುಜರಾತಿನ ಗಾರ್ಭ ಮತ್ತು ದಾಂಡಿಯಾನೃತ್ಯ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಡೊಳ್ಳುಕುಣಿತ, ಕಥಕ್‌ನೃತ್ಯ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಪುರಲಿಯಾ ಸೇರಿ ಒಟ್ಟು 12 ನೃತ್ಯಪ್ರಕಾರಗಳ ಪ್ರದರ್ಶನ ಇದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಗೌರವಾದ್ಯಕ್ಷ ಸಿ.ಎನ್.ವೆಂಕಟೇಶ್, ಘಟಕದ ಅಧ್ಯಕ್ಷ ಎಂ.ಆರ್.ಅನಿಲ್‌ಕುಮಾರ್, ಸಂಚಾಲಕ ಎಚ್.ಎನ್.ಲೋಕೇಶ್, ಸಂಘಟನಾ ಕಾರ್ಯದರ್ಶಿ ಸಿ.ವೈ.ಸತ್ಯನಾರಾಯಣ್, ವೇದಿಕೆ ಹೊಣೆ ನಿರ್ವಹಿಸುವ ಮೋಹನ್ ಭಾಗವಹಿಸಿದ್ದರು.