ಶ್ರೀಮಂತರ ಪಟ್ಟಿಯಲ್ಲಿ ಮತ್ತೆ ಅದಾನಿ ನಂ.1: ನಟರಲ್ಲಿ ಶಾರುಖ್​ ಪ್ರಥಮ; 391ಕ್ಕೆ ಏರಿಕೆಯಾದ ಭಾರತೀಯ ಬಿಲಿಯನೇರ್​ಗಳ ಸಂಖ್ಯೆ

ಗೌತಮ್ ಅದಾನಿ ಹಾಗೂ ಕುಟುಂಬ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. ಮುಕೇಶ್ ಅಂಬಾನಿ ಹಾಗೂ ಕುಟುಂಬವನ್ನು ಹಿಂದಿಕ್ಕಿರುವ ಅದಾನಿ ಕುಟುಂಬದ ಸಂಪತ್ತು ಶೇ. 13ರಷ್ಟು ಏರಿಕೆಯಾಗಿ 9.23 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಎಂ3ಎಂ ಹುರೂನ್ ಇಂಡಿಯಾ ಶ್ರೀಮಂತರ ಪಟ್ಟಿ-2026 ತಿಳಿಸಿದೆ.
Gautam Adani and Shah Rukh Khan
ಗೌತಮ್​ ಅದಾನಿ ಮತ್ತು ಶಾರುಖ್​ ಖಾನ್​
Published on

ನವದೆಹಲಿ: ಗೌತಮ್ ಅದಾನಿ ಹಾಗೂ ಕುಟುಂಬ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. ಮುಕೇಶ್ ಅಂಬಾನಿ ಹಾಗೂ ಕುಟುಂಬವನ್ನು ಹಿಂದಿಕ್ಕಿರುವ ಅದಾನಿ ಕುಟುಂಬದ ಸಂಪತ್ತು ಶೇ. 13ರಷ್ಟು ಏರಿಕೆಯಾಗಿ 9.23 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಎಂ3ಎಂ ಹುರೂನ್ ಇಂಡಿಯಾ ಶ್ರೀಮಂತರ ಪಟ್ಟಿ-2026 ತಿಳಿಸಿದೆ. ಅಂಬಾನಿ ಕುಟುಂಬದ ಸಂಪತ್ತು ಶೇ. 10ರಷ್ಟು ಇಳಿಕೆಯಾಗಿ 8.63 ಲಕ್ಷ ಕೋಟಿ ರೂ. ಆಗಿದೆ. ಇಬ್ಬರ ಸಂಪತ್ತಿನ ಅಂತರ 59,400 ಕೋಟಿ ರೂ. ಆಗಿದೆ.

ಲಕ್ಷ್ಮಿ ನಿವಾಸ್ ಮಿತ್ತಲ್ ಹಾಗೂ ಕುಟುಂಬ ಶೇ. 93ರಷ್ಟು ಏರಿಕೆಯೊಂದಿಗೆ 3.39 ಲಕ್ಷ ಕೋಟಿ ರೂ. ಸಂಪತ್ತಿನೊಂದಿಗೆ ಮೂರನೇ ಸ್ಥಾನಕ್ಕೇರಿದೆ. ಸೀರಂ ಇನ್​ಸ್ಟಿಟ್ಯೂಟ್​ನ ಸೈರಸ್ ಪೂನಾವಾಲಾ ಹಾಗೂ ಕುಟುಂಬ 3.03 ಲಕ್ಷ ಕೋಟಿ ರೂ. ಸಂಪತ್ತಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಎಚ್​ಸಿಎಲ್​ನ ರೋಶ್ನಿ ನಾಡಾರ್ ಮಲ್ಹೋತ್ರಾ 2.79 ಲಕ್ಷ ಕೋಟಿ ರೂ. ಸಂಪತ್ತಿನೊಂದಿಗೆ ಐದನೇ ಸ್ಥಾನದಲ್ಲಿದ್ದು, ಭಾರತದ ಶ್ರೀಮಂತ ಮಹಿಳೆ ಎಂಬ ಸ್ಥಾನ ಉಳಿಸಿಕೊಂಡಿದ್ದಾರೆ. ಕುಮಾರ ಮಂಗಳಂ ಬಿರ್ಲಾ, ದಿಲೀಪ್ ಸಾಂಘಿ, ಅಜೀಂ ಪ್ರೇಮ್, ಅನಿಲ್ ಅಗರ್ವಾಲ್ ಹಾಗೂ ಸಮೀರ್ ಮೆಹ್ತಾ ನಂತರದ ಸ್ಥಾನಗಳಲ್ಲಿದ್ದಾರೆ. ದೇಶದಲ್ಲಿನ ಕನಿಷ್ಠ 1,000 ಕೋಟಿ ರೂ. ಸಂಪತ್ತಿನ ವ್ಯಕ್ತಿಗಳ ಸಂಖ್ಯೆ 1,810ಕ್ಕೆ ಏರಿದೆ. ಅವರ ಒಟ್ಟು ಸಂಪತ್ತು ಶೇ. 12.8ರಷ್ಟು ಹೆಚ್ಚಾಗಿ 187.5 ಲಕ್ಷ ಕೋಟಿ ರೂ. ಆಗಿದೆ. ದೇಶದ ಡಾಲರ್ ಬಿಲಿಯನೇರ್​ಗಳ ಸಂಖ್ಯೆ 27ರಷ್ಟು ಹೆಚ್ಚಾಗಿ ದಾಖಲೆಯ 391ಕ್ಕೆ ತಲುಪಿದೆ. ಐದು ವರ್ಷಗಳ ಹಿಂದೆ ಈ ಸಂಖ್ಯೆ 237 ಇತ್ತು.

ನಟರಲ್ಲಿ ಶಾರುಖ್ ಶ್ರೀಮಂತ

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರು ಭಾರತದ ಶ್ರೀಮಂತ ನಟರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ ಎಂದು ಹುರುನ್ ಇಂಡಿಯಾ ಪಟ್ಟಿಯಲ್ಲಿ ತಿಳಿಸಲಾಗಿದೆ. ಅವರ ಒಟ್ಟು ಆಸ್ತಿ ಮೌಲ್ಯ 10,000 ಕೋಟಿ ರೂ. ಆಗಿದೆ. ರೆಡ್ ಚಿಲ್ಲೀಸ್ ಎಂಟರ್​ಟೈನ್​ವೆುಂಟ್ ಹಾಗೂ ನೈಟ್ ರೈಡರ್ಸ್ ಸ್ಪೋರ್ಟ್ಸ್ ಸೇರಿದಂತೆ ಹಲವು ವ್ಯವಹಾರಗಳಲ್ಲಿ ಅವರು ಪಾಲು ಹೊಂದಿದ್ದಾರೆ. ಕಳೆದ ವರ್ಷದ ಪಟ್ಟಿಯಲ್ಲಿ ಮೊದಲ ಬಾರಿಗೆ ಬಿಲಿಯನೇರ್ ಸ್ಥಾನ ಪಡೆದಿದ್ದ ಶಾರುಖ್ ಖಾನ್ ಅವರ ಆಸ್ತಿ ಈ ಬಾರಿ 2,490 ಕೋಟಿ ರೂ. ಇಳಿಕೆಯಾಗಿದೆ.

ಬೆಂಗಳೂರಿಗೆ ತೃತೀಯ ಸ್ಥಾನ

ಕೃತಕ ಬುದ್ಧಿಮತ್ತೆ ಮೊದಲ ಬಾರಿಗೆ ಪ್ರತ್ಯೇಕ ವಲಯವಾಗಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಈ ಕ್ಷೇತ್ರದ 19 ಮಂದಿಯ ಒಟ್ಟು ಸಂಪತ್ತು 3.07 ಲಕ್ಷ ಕೋಟಿ ರೂ. ಆಗಿದೆ. ಮುಂಬೈ 465 ಶ್ರೀಮಂತರೊಂದಿಗೆ ಅಗ್ರಸ್ಥಾನದಲ್ಲಿದ್ದು, ನವದೆಹಲಿ 236 ಹಾಗೂ ಬೆಂಗಳೂರು 129 ಮಂದಿಯೊಂದಿಗೆ ನಂತರದ ಸ್ಥಾನಗಳಲ್ಲಿವೆ. ಮಹಿಳೆಯರ ಸಂಖ್ಯೆ 131ಕ್ಕೆ ಏರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net