

ಬಾಳೆಹೊನ್ನೂರು: ಅಯೋಧ್ಯೆಯ ರಾಮಲಲ್ಲಾ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಅರ್ಪಣೆ ಮಾಡಲು ಸ್ಥಳೀಯ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಶನಿವಾರ ಪಟ್ಟಣದಿಂದ ಅಡಕೆ ಹಿಂಗಾರದ ಜತೆಗೂಡಿ ಅಯೋಧ್ಯೆ ಯಾತ್ರೆ ಕೈಗೊಂಡರು.
ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ವಿಎಚ್‌ಪಿ ಕಾರ್ಯಕರ್ತರು ಐದು ಅಡಕೆ ಹಿಂಗಾರವನ್ನು ಅರ್ಚಕರಿಂದ ಪಡೆದುಕೊಂಡರು.
ವಿಎಚ್‌ಪಿ ಹಾಸನ ವಿಭಾಗ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಈ ಕುರಿತು ಮಾಹಿತಿ ನೀಡಿ, ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆಯಾದ ನಂತರ ತೀರ್ಥಕ್ಷೇತ್ರ ಟ್ರಸ್ಟ್‌ಯಿಂದ ಕರಸೇವಕರು, ವಿಹಿಂಪ ಕಾರ್ಯಕರ್ತರಿಗೆ ಆಯೋಧ್ಯೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಚಿಕ್ಕಮಗಳೂರು ಜಿಲ್ಲೆಯಿಂದ 75 ಜನ ಕಾರ್ಯಕರ್ತರಿಗೆ ಪಾಸ್ ವ್ಯವಸ್ಥೆ ಲಭ್ಯವಾಗಿದ್ದು ರೈಲು ಮೂಲಕ ಎಲ್ಲರೂ ಒಗ್ಗೂಡಿ ತೆರಳಿ ಬಾಲರಾಮನ ದರ್ಶನ ಮಾಡಲಿದ್ದೇವೆ. ದರ್ಶನದ ಸಂದರ್ಭದಲ್ಲಿ ಲೋಕಕಲ್ಯಾಣದ ಚಿಂತನೆಯನ್ನು ಹೊಂದಿ, ಪ್ರಾರ್ಥನೆ ಸಲ್ಲಿಸುವ ನಿರ್ಧಾರವನ್ನು ಸ್ಥಳೀಯ ಕಾರ್ಯಕರ್ತರು ಕೈಗೊಂಡಿದ್ದಾರೆ.
ಈ ನಿಟ್ಟಿನಲ್ಲಿ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆ, ರೈತರ ಜೀವನಾಡಿಯಾದ ಅಡಕೆ ಬೆಳೆಗೆ ಹಳದಿ ಎಲೆರೋಗ, ಎಲೆಚುಕ್ಕೆ ರೋಗ ತಗುಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರೊಂದಿಗೆ ಮಲೆನಾಡು ಭಾಗದಲ್ಲಿ ಬರ್ ಜೋನ್, ಕಸ್ತೂರಿ ರಂಗನ್ ಯೋಜನೆ, ಮೀಸಲು ಅರಣ್ಯದ ಸಮಸ್ಯೆಗಳು ರೈತರ ನೆತ್ತಿಯ ಮೇಲೆ ತೂಗುಗತ್ತಿಯಾಗಿದೆ.
ಈ ಸಮಸ್ಯೆಗಳನ್ನು ಬಾಲರಾಮನು ನಿವಾರಿಸುವನು ಎಂಬುದು ನಮ್ಮ ಬಲವಾದ ನಂಬಿಕೆಯಾಗಿದ್ದು ಈ ಹಿನ್ನೆಲೆಯಲ್ಲಿ ಅಯೋಧ್ಯೆ ಯಾತ್ರೆಗೆ ತೆರಳುತ್ತಿರುವ ಸ್ಥಳೀಯ ಕಾರ್ಯಕರ್ತರು ರೈತರಿಂದ ಅಡಕೆ ಹಿಂಗಾರವನ್ನು ಸಂಗ್ರಹ ಮಾಡಿ ಕೊಂಡೊಯ್ಯುತ್ತಿದ್ದೇವೆ. ಇದರೊಂದಿಗೆ ಮಲೆನಾಡಿನ ಅಡಕೆ, ಕಾಫಿ, ಭತ್ತವನ್ನು ಸಹ ತೆಗೆದುಕೊಂಡು ಹೋಗಲಾಗುತ್ತಿದೆ.
ಹಿಂಗಾರ, ಅಡಕೆ, ಕಾಫಿ, ಭತ್ತವನ್ನು ಬಾಲರಾಮನ ಪಾದಗಳಿಗೆ ಸಮರ್ಪಣೆ ಮಾಡಿ ಮಲೆನಾಡಿನ ಸಮಸ್ಯೆಗಳ ನಿವಾರಣೆಯಾಗಿ, ರೈತರಿಗೆ ಸುಖ ಜೀವನ ಪ್ರಾಪ್ತವಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಿದ್ದೇವೆ. ಮಲೆನಾಡಿನ ಎಲ್ಲ ರೈತರ ಬದುಕು ಉತ್ತಮವಾಗಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು. ಸಂಘಟನೆಯ ಪ್ರಮುಖರಾದ ಮಹೇಶ್ಚಂದ್ರ, ಬಿ.ವೆಂಕಟೇಶ್, ರತ್ನಾಕರ ಗಡಿಗೇಶ್ವರ, ಗುರುಪ್ರಸಾದ್, ಉಮೇಶ್, ಅರುಣ್‌ಕುಮಾರ್, ರವೀಂದ್ರ ಆಚಾರ್ಯ, ಅಜಿತ್ ಕಳಸ, ಪ್ರೇಮಲತಾ, ಮಂಜು ಹಲಸೂರು, ಸಂದೀಪ್‌ಶೆಟ್ಟಿ, ಶರತ್‌ಪೂಜಾರಿ, ಭೂಮಿಕಾ ಆರ್.ಆಚಾರ್ಯ, ಸಾಮ್ರಾಟ್, ನಾರಾಯಣ್, ಅಶೋಕ್ ಇತರರಿದ್ದರು.