

ಸೋಮವಾರಪೇಟೆ : ತಾಯಿ ಹಾಲು ಪೌಷ್ಟಿಕ ಆಹಾರವಷ್ಟೇ ಅಲ್ಲ. ಆದು ತಾಯಿ ಮತ್ತು ಮಗುವಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಇನ್ನರ್‌ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಹೇಳಿದರು.
ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಬಾಣಂತಿಯರಿಗೆ ಆಯೋಜಿಸಿದ್ದ ಸ್ತನ್ಯಪಾನ ಮಹತ್ವ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾಯ್ತನದ ಸಂಭ್ರಮವನ್ನು ಪ್ರತಿಯೊಬ್ಬರೂ ಆಚರಿಸಬೇಕು. ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಆರೋಗ್ಯವಂತ ಮಗುವನ್ನು ಈ ಸಮಾಜಕ್ಕೆ ನೀಡುವುದು ತಾಯಿಯ ಜವಾಬ್ದಾರಿಯೂ ಆಗಿದೆ. ಆರೋಗ್ಯವಂತ ವ್ಯಕ್ತಿ ಸಮಾಜದ ಆಸ್ತಿಯಾಗುತ್ತಾರೆ. ಪುಟ್ಟ ಮಗುವಿಗೆ ಹಾಲುಣಿಸುವ ಬಗ್ಗೆ ವೈದ್ಯರು ಬಾಣಂತಿಯರಿಗೆ ಸಲಹೆ ನೀಡುತ್ತಾರೆ. ಯಾರು ಕೂಡ ಸಲಹೆಯನ್ನು ಮೀರಬಾರದು ಎಂದು ಕಿವಿಮಾತು ಹೇಳಿದರು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಪರ್ಣಾ ಕೃಷ್ಣನಂದ ಮಾತನಾಡಿ, ನವಜಾತ ಶಿಶುಗಳಿಗೆ ತಾಯಿ ಹಾಲೇ ಆಹಾರ ಮತ್ತು ಅಮೃತವಾಗಿದೆ. ದೈಹಿಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲ ಪೌಷ್ಟಿಕಾಂಶಗಳು ತಾಯಿ ಹಾಲಿನಿಂದಲೇ ಸಿಗುತ್ತದೆ ಎಂದು ಹೇಳಿದರು.
ತಾಯಿ ಹಾಲಿನಲ್ಲಿ ಪ್ರೊಟೀನ್, ಖನಿಜಾಂಶಗಳು, ಜೀವಸತ್ವಗಳು ಸಿಗುತ್ತದೆ. ನವಜಾತ ಶಿಶುಗಳನ್ನು ಸೋಂಕಿನಿಂದ ರಕ್ಷಣೆ ಮಾಡುತ್ತದೆ. ಹಾಲು ಉಳಿಸುವ ಸಂದರ್ಭದಲ್ಲಿ ತಾಯಿ ಎಚ್ಚರ ವಹಿಸಬೇಕು. ಮಗುವಿಗೆ ಹಾಲು ಸಿಗುವಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ 25 ಬಾಣಂತಿಯರು ಭಾಗವಹಿಸಿದ್ದರು. ಎಲ್ಲರಿಗೂ ಬೆಡ್‌ಶಿಟ್‌ಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ಸುವಿನಾ ಕೃಪಾಲ್, ಉಪಾಧ್ಯಕ್ಷೆ ಲತಾ ಮಂಜು, ಮಾಜಿ ಅಧ್ಯಕ್ಷೆ ಸಂಗೀತಾ ದಿನೇಶ್, ಖಜಾಂಚಿ ಆಶಾ ಮೋಹನ್ ಪದಾಧಿಕಾರಿಗಳಾದ ನಂದಿನಿ ಗೋಪಾಲ್, ಸ್ಮಿತಾ ನವೀನ್, ಲತಾ ನಾಗೇಶ್, ಸುವಲತಾ ಪುರುಷೋತ್ತಮ್ ಇದ್ದರು.