Flying car: ಅಸಾಧ್ಯವನ್ನು ಸಾಧ್ಯವಾಗಿಸಿದ ಬಿ.ಎ ಗ್ರಾಜುಯೇಟ್: ಸ್ವಂತ ಪ್ರಯತ್ನದಿಂದ 'ಹಾರುವ ಕಾರು' ತಯಾರಿಸಿದ ಯುವಕ

ಯಾವುದೇ ಎಂಜಿನಿಯರಿಂಗ್ ಡಿಗ್ರಿ ಇಲ್ಲದಿದ್ದರೂ ಪರವಾಗಿಲ್ಲ, ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು. ಉತ್ತರಾಖಂಡದ ಬಿ.ಎ ಗ್ರಾಜುಯೇಟ್ ರವಿ ತಮ್ತಾ, ಬರೋಬ್ಬರಿ 13 ವರ್ಷಗಳ ಕಷ್ಟಪಟ್ಟು 'ಹ್ಯಾಪಿಡಾ ಸ್ಕೈನೆಕ್ಸ್' ಹೆಸರಿನ ಎಲೆಕ್ಟ್ರಿಕ್ ಹಾರುವ ಕಾರನ್ನು ತಯಾರಿಸಿದ್ದಾರೆ. ಈ ಕುರಿತ ರೋಚಕ ಮಾಹಿತಿ ಇಲ್ಲಿದೆ.
Uttarakhand flying car
ಬಿ.ಎ ಓದಿದ ಯುವಕನಿಂದ ಯಾವುದೇ ತರಬೇತಿ ಇಲ್ಲದೆ 'ಹಾರುವ ಕಾರು' ಆವಿಷ್ಕಾರ
Published on: 

Electric flying car: ಯಾವುದೇ ದೊಡ್ಡ ಎಂಜಿನಿಯರಿಂಗ್ ಡಿಗ್ರಿ ಇಲ್ಲ.. ವಿಜ್ಞಾನದ ಹಿನ್ನೆಲೆಯೂ ಇಲ್ಲ.. ಆದರೂ ಉತ್ತರಾಖಂಡದ ಕಲಾ ಪದವೀಧರರೊಬ್ಬರು 13 ವರ್ಷಗಳ ಸುದೀರ್ಘ ಪರಿಶ್ರಮದ ಬಳಿಕ ಸ್ವಂತವಾಗಿ ಎಲೆಕ್ಟ್ರಿಕ್ ಹಾರುವ ಕಾರೊಂದನ್ನು ರೆಡಿ ಮಾಡಿದ್ದಾರೆ. ಅಲ್ಮೋರಾ ಜಿಲ್ಲೆಯ ರವಿ ತಮ್ತಾ ರೂಪಿಸಿರುವ 'ಹ್ಯಾಪಿಡಾ ಸ್ಕೈನೆಕ್ಸ್' (HAPIDA SKYNeX) ಸಿಂಗಲ್-ಸೀಟರ್ ವಾಹನವು ಈಗಾಗಲೇ ಯಶಸ್ವಿಯಾಗಿ ಟೆಸ್ಟ್ ಫ್ಲೈಟ್ ಮುಗಿಸಿದ್ದು, ವೈಯಕ್ತಿಕ ವಿಮಾನ ಪ್ರಯಾಣದ ಕನಸಿಗೆ ದೊಡ್ಡ ಬಲ ತುಂಬಿದೆ.

ಮಲೆನಾಡಿನಂತಹ ದುರ್ಗಮ ಬೆಟ್ಟದ ಹಾದಿಗಳಲ್ಲಿ ಸಂಚರಿಸುವುದು ಸಣ್ಣ ಮಾತಲ್ಲ. ಉತ್ತರಾಖಂಡದ ಕಾಫ್ಲಿಕಾನ್‌ನಲ್ಲಿ ಬೆಳೆದ ರವಿ ತಮ್ತಾ ಅವರಿಗೆ ಈ ಕಷ್ಟದ ಅರಿವಿತ್ತು. ಮುಖ್ಯವಾಗಿ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆ ತಲುಪಲು ಗಂಟೆಗಟ್ಟಲೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇರುತ್ತಿತ್ತು. ಈ ಕಷ್ಟಗಳೇ ಮುಂದೆ ಅವರನ್ನು ಹಾರುವ ಕಾರಿನ ಆವಿಷ್ಕಾರಕ್ಕೆ ಪ್ರೇರೇಪಿಸಿದವು.

ಕಷ್ಟದ ಹಾದಿಯಿಂದ ಹುಟ್ಟಿಕೊಂಡ ಹಾರುವ ಕಾರಿನ ಕನಸು

ಮಲೆನಾಡಿನ ಹಳ್ಳಿಗರ ಪ್ರಯಾಣದ ಸಂಕಟವನ್ನು ನೀಗಿಸಲು ರವಿ ತಮ್ತಾ ಕಂಡುಕೊಂಡ ಮಾರ್ಗವೇ ಈ ಹಾರುವ ಕಾರು. 2015ರಲ್ಲಿ 'ಹ್ಯಾಪಿಡಾ ಸ್ಕೈ ಪ್ರೈವೇಟ್ ಲಿಮಿಟೆಡ್' ಸ್ಥಾಪಿಸಿದ ಅವರು, ಎಂಜಿನಿಯರಿಂಗ್ ಡಿಗ್ರಿ ಇಲ್ಲದಿದ್ದರೂ ಹಿಂಜರಿಯಲಿಲ್ಲ. ಇಂಟರ್ನೆಟ್ ಸಂಪನ್ಮೂಲಗಳು, ನಿರಂತರ ಪ್ರಯೋಗಗಳು ಮತ್ತು ಕುಟುಂಬ ನೀಡಿದ ಧೈರ್ಯದಿಂದಲೇ ತಾವಂದುಕೊಂಡ ವಾಹನವನ್ನು ತಯಾರಿಸಿದರು.

'ಹ್ಯಾಪಿಡಾ ಸ್ಕೈನೆಕ್ಸ್' ಕಾರಿನ ವಿಶೇಷತೆ ಏನು?

ಈ ಹಾರುವ ಕಾರಿನ ಮುಖ್ಯ ಪ್ಲಸ್ ಪಾಯಿಂಟ್ ಅಂದರೆ, ಇದರ 'ವರ್ಟಿಕಲ್ ಟೇಕ್-ಆಫ್ ಅಂಡ್ ಲ್ಯಾಂಡಿಂಗ್' ತಂತ್ರಜ್ಞಾನ. ಅಂದರೆ ಇದು ಯಾವುದೇ ರನ್‌ವೇ ಇಲ್ಲದೆ ನೇರವಾಗಿ ಗಾಳಿಯಲ್ಲಿ ಮೇಲೇರಬಲ್ಲದು. ಮಲ್ಟಿರೋಟರ್ ಡ್ರೋನ್‌ಗಳ ತಂತ್ರಜ್ಞಾನ ಆಧರಿಸಿರುವ ಈ ವಾಹನ ಸಂಪೂರ್ಣವಾಗಿ ಬ್ಯಾಟರಿ ಚಾಲಿತವಾಗಿದೆ. ಆಗಸ್ಟ್ ತಿಂಗಳಲ್ಲಿ ನಡೆದ ಇದರ ಮೊದಲ ಹಾರಾಟ ಯಶಸ್ವಿಯಾಗಿದ್ದು, ಬ್ಯಾಟರಿ ಪವರ್ ಹಾಗೂ ಹಾರಾಟದ ನಿಯಂತ್ರಣದ ಬಗ್ಗೆ ಮುಂದಿನ ಪರೀಕ್ಷೆಗಳು ಮುಂದುವರಿಯಲಿವೆ.

ಇದನ್ನೂ ಓದಿ: Bird Facts: ಜಪಾನ್ ಬುಲೆಟ್ ಟ್ರೈನ್ ಶಬ್ದವಿಲ್ಲದೆ ಓಡಲು ಈ ಸಣ್ಣ ಹಕ್ಕಿಯೇ ಕಾರಣ! ಮಿಂಚುಳ್ಳಿಯ ಅಸಲಿ ರಹಸ್ಯ ಗೊತ್ತಾ?

ಮೆಕ್ಯಾನಿಕ್ ಆಗಿ ಕೆಲಸ ಮಾಡುವ ಬಡ ತಂದೆಯ ಮಗನಾದ ರವಿ ತಮ್ತಾ, ಕೇವಲ ಹಾರುವ ಕಾರು ಅಷ್ಟೇ ಅಲ್ಲ, ಈ ಹಿಂದೆ ಮೊಬೈಲ್ ಫೋನ್ ಚಾರ್ಜಿಂಗ್ ಶೂಗಳು, ದೃಷ್ಟಿಹೀನರಿಗಾಗಿ ಸ್ಮಾರ್ಟ್ ವಾಕಿಂಗ್ ಸ್ಟಿಕ್, ಬಿದಿರು ಸೀಳುವ ಯಂತ್ರ ಹಾಗೂ ಅಗ್ನಿಶಾಮಕ ಉಪಕರಣಗಳಂತಹ ಹತ್ತಾರು ವಿನೂತನ ಆವಿಷ್ಕಾರಗಳನ್ನೂ ಮಾಡಿದ್ದಾರೆ. ಈಗ ಹಾರುವ ಕಾರು ತಯಾರಿಸುವ ಮೂಲಕ ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net