More

    ಕಡಲ ತೀರಗಳಲ್ಲಿ ಪ್ರವಾಸಿಗರ ದಂಡು

    ಕಾರವಾರ: 2020 ಸ್ವಾಗತಕ್ಕೆ ಉತ್ತರ ಕನ್ನಡ ಕರಾವಳಿ ಸಜ್ಜಾಗುತ್ತಿದೆ. ಜಿಲ್ಲೆಯ ಕಡಲ ತೀರಗಳಲ್ಲಿ ಈಗಾಗಲೇ ಪ್ರವಾಸಿಗರು ಬೀಡು ಬಿಟ್ಟಿದ್ದಾರೆ. ಕಾರವಾರ, ಗೋಕರ್ಣ, ಮುರ್ಡೆಶ್ವರ ಸೇರಿ ವಿವಿಧ ಕಡಲ ತೀರಗಳಲ್ಲಿ ಪ್ರವಾಸಿಗರ ದಂಡು ಕಂಡುಬರುತ್ತಿದೆ.

    ಇಲ್ಲಿನ ರೆಸಾರ್ಟ್​ಗಳು, ಹೋಟೆಲ್​ಗಳ ರೂಂಗಳು ಈಗಾಗಲೇ ಬುಕ್ ಆಗಿವೆ. ಗೋವಾದಲ್ಲಿ ವಸತಿ, ಆಹಾರದ ಬೆಲೆ ದುಪ್ಪಟ್ಟು, ರ್ಪಾಂಗ್ ತೊಂದರೆ ಮುಂತಾದ ಕಾರಣಗಳಿಂದ ಕೆಲವರು ಜಿಲ್ಲೆಯ ಕಡಲ ತೀರಗಳತ್ತಲೂ ಮುಖ ಮಾಡಿದ್ದಾರೆ. ಜಲ ಸಾಹಸ ಕ್ರೀಡೆಗಳ ಮೋಜು ಅನುಭವಿಸುತ್ತಿದ್ದಾರೆ. ಕಾರವಾರ ಸೇರಿ ವಿವಿಧೆಡೆ ರೆಸಾರ್ಟ್ ಹಾಗೂ ಹೋಟೆಲ್​ಗಳಲ್ಲಿ ಡಿ. 31ರಂದು ಹೊಸ ವರ್ಷ ಸ್ವಾಗತಕ್ಕೆ ವಿಶೇಷ ಪಾರ್ಟಿಗಳನ್ನು ಏರ್ಪಡಿಸಲಾಗಿದೆ. ಜ. 2ರವರೆಗೂ ಜಂಗಲ್ ರೆಸಾರ್ಟ್​ನಲ್ಲಿ ಸಾಕಷ್ಟು ಪ್ರವಾಸಿಗರು ಮುಂಗಡ ಬುಕ್ ಮಾಡಿಕೊಂಡಿದ್ದಾರೆ ಎಂದು ಅಲ್ಲಿನ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

    ಪಾರ್ಟಿಗಳನ್ನು ತಡೆಯುವಂತೆ ಮನವಿ: ಹೊಸ ವರ್ಷ ಆಚರಣೆಯ ಹೆಸರಿನಲ್ಲಿ ನಡೆಯುವ ಮದ್ಯಪಾನದ ಪಾರ್ಟಿಗಳನ್ನು ನಿಷೇಧಿಸುವಂತೆ ಹಿಂದು ಜನಜಾಗೃತಿ ಸಮಿತಿ ಮುಖಂಡರು ಅಪರ ಜಿಲ್ಲಾಧಿಕಾರಿ ಹಾಗೂ ಎಸ್​ಪಿ ಕಚೇರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.

    ಯುಗಾದಿ ನಮಗೆ ಹೊಸ ವರ್ಷವಾಗಿದೆ. ಆದರೆ, ಪಾಶ್ಚಿಮಾತ್ಯ ರಾಷ್ಟ್ರದ ಕೆಟ್ಟ ರೂಢಿಗಳನ್ನು ಇಲ್ಲಿ ಆಚರಿಸುವುದು ಹೆಚ್ಚುತ್ತಿದೆ. ಹೊಸ ವರ್ಷ ಸ್ವಾಗತದ ನೆಪದಲ್ಲಿ ಮದ್ಯ, ಮಾದಕ ಪದಾರ್ಥ, ಧೂಮ್ರಪಾನ ಮಾಡಲಾಗುತ್ತಿದೆ. ಇಂಥ ಸಂದರ್ಭದಲ್ಲಿ ವಾಹನ ಚಲಾವಣೆ ಮಾಡಿ, ಅಪಘಾತಗಳು ಉಂಟಾಗುತ್ತಿವೆ. ಕೋಟೆಗಳು, ಐತಿಹಾಸಿಕ ಸ್ಥಳಗಳು, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಹೊಲಸು ಮಾಡಿ ಪಾವಿತ್ರ್ಯಾಳು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂಥ ಪಾರ್ಟಿಗಳನ್ನು ನಿಷೇಧಿಸಬೇಕು ಎಂದು ವಿನಂತಿಸಿದರು.

    ಬಾಬು ಜೆ. ಅಂಬಿ, ಸಾಗರ ಕುರ್ಡೆಕರ್, ಉಲ್ಲಾಸ ಮೂಂಜ್, ಪರೇಶ ಗೋವೇಕರ್, ರೋಶನ್ ಶೇಟಿಯಾ, ಸೋಮೇಶ ಗುರವ್, ಅಶೋಕ ಚೌಹಾಣ್, ಸುರೇಖಾ ಗುರವ್, ಸೃಷ್ಟಿ ಕುರ್ಡೆಕರ್ ಮನವಿ ಸಲ್ಲಿಕೆ ಸಂದರ್ಭದಲ್ಲಿ ಇದ್ದರು.

    ಡಿಜೆ ಶಬ್ದಕ್ಕೆ ತಡೆ: ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಯಲ್ಲಿ ರೆಸಾರ್ಟ್, ಹೋಂ ಸ್ಟೇಗಳ ನಿಯಮ ಮೀರಿದ ವರ್ತನೆಗೆ ಕಡಿವಾಣ ಹಾಕಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

    ಕಳೆದ ವಾರ ಇಲಾಖೆಯ ಒಂದು ತಂಡ ಜೊಯಿಡಾ, ದಾಂಡೇಲಿ, ಹಳಿಯಾಳ ಭಾಗದಲ್ಲಿ ಸಂಚರಿಸಿ ಪ್ರವಾಸೋದ್ಯಮ ನೀತಿಯಂತೆ ನೋಂದಣಿ ಮಾಡಿಕೊಳ್ಳದ ಎರಡು ಹೋಂ ಸ್ಟೇಗಳನ್ನು ಗುರುತಿಸಿ ಅವುಗಳಿಗೆ ನೋಟಿಸ್ ನೀಡಿದೆ. ಅಲ್ಲದೆ, ನಿಯಮ ಉಲ್ಲಂಘಿಸುವ ಹೋಂ ಸ್ಟೇ ಹಾಗೂ ರೆಸಾರ್ಟ್​ಗಳನ್ನು ಗಮನಿಸಿ ವರದಿ ನೀಡುವಂತೆ ಸಂಬಂಧಪಟ್ಟ ತಹಸೀಲ್ದಾರ್​ಗಳಿಗೆ ಸೂಚಿಸಲಾಗಿದೆ.

    ದಾಂಡೇಲಿ ಹಾಗೂ ಹಳಿಯಾಳದಲ್ಲಿ 10 ರೆಸಾರ್ಟ್​ಗಳಿವೆ, 19 ಹೋಂ ಸ್ಟೇಗಳಿವೆ. ಜೊಯಿಡಾದಲ್ಲಿ 60 ಹೋಂ ಸ್ಟೇಗಳು ಕಾರ್ಯನಿರ್ವಹಿಸುತ್ತಿವೆ. ರಾತ್ರಿ 1 ಗಂಟೆಯವರೆಗೂ ಡಿಜೆ ಹಾಕಿ ವನ್ಯಜೀವಿಗಳಿಗೆ ತೊಂದರೆಯಾಗುವಂತೆ ಮಾಡುತ್ತಿವೆ ಎಂಬ ದೂರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸೂಚನೆ ನೀಡಲಾಗಿದೆ. ಈಗ ಹೊಸ ವರ್ಷದ ಸಂದರ್ಭದಲ್ಲಿ ಇವು ನಿಯಮ ಮಿರಿದಲ್ಲಿ ಕ್ರಮ ವಹಿಸುವ ಎಚ್ಚರಿಕೆ ನೀಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಪ್ರಭಾರಿ ಉಪ ನಿರ್ದೇಶಕ ಪುರುಷೋತ್ತಮ ತಿಳಿಸಿದ್ದಾರೆ.

    108ಕ್ಕೆ ಕರೆ ಮಾಡಿ: ಅಪಘಾತಗಳು ಸಂಭವಿಸಿದಲ್ಲಿ ಕರೆ ಮಾಡಿ ಎಂದು ಆರೋಗ್ಯ ಕವಚ ತುರ್ತು ಆಂಬುಲೆನ್ಸ್ ಸೇವಾ ವ್ಯವಸ್ಥೆ 108 ಪ್ರಕಟಣೆ ತಿಳಿಸಿದೆ. ಅಪಘಾತಗಳು ಸಂಭವಿಸದಂತೆ ಎಚ್ಚರ ವಹಿಸಿ. ಹಾಗೊಮ್ಮೆ ಸಂಭವಿಸಿದಲ್ಲಿ ಕರೆ ಮಾಡಿ ಎಂದು ಆಂಬುಲೆನ್ಸ್ ಜಿಲ್ಲಾ ವ್ಯವಸ್ಥಾಪಕ ಗುರುರಾಜ ನಾಯಕ ತಿಳಿಸಿದ್ದಾರೆ.

    ವಿಜಯವಾಣಿ ಕಳಕಳಿ: ಹೊಸ ವರ್ಷ ಸ್ವಾಗತ ಮಾಡಬೇಕು ಎಂಬುದು ನಿಜ ಆದರೆ, ಅದರಿಂದ ಮತ್ತೊಬ್ಬರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ * ಕುಡಿದು, ಮಾದಕ ವಸ್ತುಗಳನ್ನು ಸೇವಿಸಿ ವಾಹನ ಚಲಾಯಿಸಬೇಡಿ * ಪಟಾಕಿಗಳನ್ನು ಸಿಡಿಸುವಾಗ ಎಚ್ಚರದಿಂದಿರಿ * ಜನವಸತಿ, ಸಾರ್ವಜನಿಕ ಹಾಗೂ ನಿರ್ಬಂಧಿತ ಪ್ರದೇಶಗಳಲ್ಲಿ ಡಿಜೆ ಹಾಕಿ ನೃತ್ಯ ಬೇಡ. *ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್, ಗಾಜಿನ ಬಾಟಲಿ ಹಾಗೂ ಇತರ ಕಸ ಎಸೆಯಬೇಡಿ

    ಹೊಸ ವರ್ಷ ಆಚರಣೆಗೆ ಯಾವುದೇ ಅಡ್ಡಿ ಇಲ್ಲ. ಆದರೆ, ಆಚರಣೆಯಿಂದ ಮತ್ತೊಬ್ಬರಿಗೆ ತೊಂದರೆ ಉಂಟುಮಾಡಿದಲ್ಲಿ ಕ್ರಮ ವಹಿಸಲಾಗುವುದು. ಎಲ್ಲೆಡೆ ಭದ್ರತೆ ಕೈಗೊಳ್ಳಲಾಗಿದ್ದು, ಕುಡಿದು ವಾಹನ ಚಲಾಯಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು. | ಶಿವ ಪ್ರಕಾಶ ದೇವರಾಜು, ಎಸ್​ಪಿ ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts