More

    ಪೋಲಿಯೋ ಹನಿ ಹಾಕಿಸಲು ನಿರ್ಲಕ್ಷ್ಯ ಸಲ್ಲ

    ಶಿವಮೊಗ್ಗ: ಭಾರತ ಪೋಲಿಯೋ ಮುಕ್ತವಾದರೂ ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತಿತರ ನೆರೆಹೊರೆಯ ರಾಷ್ಟ್ರಗಳಲ್ಲಿ ಇನ್ನೂ ಭೀತಿ ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವುದು ಅನಿವಾರ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಲೋಖಂಡೆ ಹೇಳಿದರು.

    ನಗರದ ಮಿಳಘಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ ಇಲಾಖೆ, ರೋಟರಿ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    2011ರಿಂದ ಭಾರತದಲ್ಲಿ ಪೋಲಿಯೋ ಪ್ರಕರಣಗಳು ವರದಿಯಾಗಿಲ್ಲ. ಭಾರತ ಪೋಲಿಯೋಮುಕ್ತ ದೇಶವೆಂದು ಈಗಾಗಲೇ ಘೋಷಣೆಯಾಗಿದೆ. ಆದರೆ ನೆರೆಯ ಕೆಲ ದೇಶಗಳಲ್ಲಿ ಇನ್ನೂ ಭೀತಿ ಇದ್ದು ನಮ್ಮ ದೇಶದಲ್ಲೂ ಪೋಲಿಯೋ ಮರುಕಳಿಸಬಹುದು ಎಂಬ ಆತಂಕದಿಂದ ಅಭಿಯಾನ ನಡೆಸಲಾಗುತ್ತಿದೆ. ಐದು ವರ್ಷದೊಳಗಿನ ಮಕ್ಕಳಿಗೆ ಪ್ರತಿ ಬಾರಿ 2 ಹನಿ ಪೋಲಿಯೋ ಹಾಕಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.
    ಈ ಹಿಂದೆ ಎಷ್ಟೇ ಬಾರಿ ಪೋಲಿಯೋ ಹನಿ ಹಾಕಿಸಿದ್ದರೂ ಆರೋಗ್ಯ ಇಲಾಖೆ ನಿರ್ದೇಶನದ ಮೇರೆಗೆ ಮಕ್ಕಳಿಗೆ ಹನಿ ಹಾಕಿಸಲಾಗುತ್ತಿದೆ. ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿ ನಿಯೋಜಿತ ಅಧಿಕಾರಿ, ಸಿಬ್ಬಂದಿ ಅತ್ಯಂತ ಜವಾಬ್ದಾರಿಯಿಂದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಿದೆ ಎಂದು ತಿಳಿಸಿದರು.
    ಹಿರಿಯ ವೈದ್ಯ ಡಾ. ಪಿ.ನಾರಾಯಣ್ ಮಾತನಾಡಿ, ವಿಶ್ವದಲ್ಲಿ ಈ ಮೊದಲು ಪೋಲಿಯೋ ಭೀಕರತೆ ಹೆಚ್ಚಿತ್ತು. ವರ್ಷಕ್ಕೆ ಸುಮಾರು ಒಂದು ಸಾವಿರ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿತ್ತು. ಈಗ 10ರಿಂದ 12 ಮಕ್ಕಳು ಬಲಿಯಾಗುತ್ತಿದ್ದಾರೆ. ಭಾರತ ಪೋಲಿಯೋ ಮುಕ್ತವಾದರೂ ಕೆಲ ದೇಶಗಳಲ್ಲಿ ಇದು ಇರುವ ಕಾರಣಕ್ಕೆ ಮಕ್ಕಳಿಗೆ ಹನಿ ಹಾಕಿಸಬೇಕು ಎಂದು ಮನವಿ ಮಾಡಿದರು.
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ. ವಿವೇಕ್ ದೊರೈ, ಆರ್‌ಸಿಎಚ್ ಅಧಿಕಾರಿ ಡಾ. ನಾಗರಾಜ್‌ನಾಯ್ಕ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಒ.ಮಲ್ಲಪ್ಪ, ಟಿಎಚ್‌ಒ ಡಾ. ಚಂದ್ರಶೇಖರ್, ರೋಟರಿ ಸಂಸ್ಥೆಯ ರಾಜೇಂದ್ರಪ್ರಸಾದ್, ಕೋಟೊಜಿ ರವಿ, ವಿಜಯಕುಮಾರ್ ಇತರರಿದ್ದರು.

    1,037 ಬೂತ್‌ಗಳಲ್ಲಿ ಕಾರ್ಯಕ್ರಮ
    ಜಿಲ್ಲೆಯಲ್ಲಿ 1997ರಿಂದ ಪೋಲಿಯೋ ಪ್ರಕರಣಗಳು ಕಂಡುಬಂದಿಲ್ಲ. ಆದರೂ ಮುಂಜಾಗ್ರತೆ ವಹಿಸಲಾಗಿದೆ. ಭಾನುವಾರ 5 ವರ್ಷದೊಳಗಿನ 1,20,626 ಮಕ್ಕಳಿಗೆ 1,037 ಬೂತ್‌ಗಳಲ್ಲಿ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿತ್ತು ಎಂದು ಡಿಎಚ್‌ಒ ಡಾ. ರಾಜೇಶ್ ಸುರಗೀಹಳ್ಳಿ ಹೇಳಿದರು. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿ ರೋಟರಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಅಭಿಯಾನ ನಡೆಸಲಾಗುತ್ತಿದೆ. ಪೋಲಿಯೋ ಹಾಕಿಸಿದ ಪಾಲಕರು ತಮ್ಮ ಅಕ್ಕಪಕ್ಕದ ಮನೆಗಳಿಗೂ ಈ ಬಗ್ಗೆ ತಿಳಿಸಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts