More

    ಪ್ರಧಾನಿ ಮೋದಿಯಿಂದ ರೈತರ ನಿರ್ಲಕ್ಷ್ಯ

    ಎಚ್.ಡಿ.ಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹತ್ತು ವರ್ಷದಲ್ಲಿ ರೈತರು, ದುಡಿಯುವ ಜನರ ನಿರ್ಲಕ್ಷ್ಯ ಮಾಡಿ ಆಡಳಿತ ನಡೆಸಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿದರು.


    ಪಟ್ಟಣದ ಹಳೇ ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ರಾಜ್ಯ ರೈತ ಸಂಘದ ವತಿಯಿಂದ ಆಯೋಜಿಸಿದ್ದ ಲೋಕಸಭಾ ಚುನಾವಣೆಯಲ್ಲಿ ರೈತರಾದ ನಾವು ಏನೂ ಮಾಡೋಣ ಎಂಬ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು. ಹತ್ತು ವರ್ಷಗಳ ಕಾಲ ಸುಳ್ಳು ಹೇಳಿ ದೇಶದ ಜನರಿಗೆ ವಂಚನೆ ಮಾಡಿದ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬಾರದು. ಮತ ನೀಡುವಾಗ ಆಲೋಚನೆ ಮಾಡಬೇಕಾದ ಕರ್ತವ್ಯ ಜನರ ಮೇಲಿದೆ ಎಂದರು.


    ದೇಶದ ಶೇ.60ಭಾಗದ ಜನರು ಒಗ್ಗಟ್ಟಾದರೆ ದೇಶದ ಆಡಳಿತ ನಮ್ಮದೆ. ಆದರೆ ಜಾತಿ-ಜಾತಿಗಳು ಒಡೆದು ಹೋಗಿರುವ ಕಾರಣ ಆಡಳಿತ ನಡೆಸಲು ಸಾಧ್ಯವಿಲ್ಲ. ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ರೈತ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರತಿ ಹಳ್ಳಿಗಳಿಗೆ ತೆರಳಿ ಬಿಜೆಪಿಗೆ ಯಾಕೆ ಮತ ನೀಡಬಾರದು ಎಂಬುದನ್ನು ಅರ್ಥ ಮಾಡಿಸಬೇಕು ಎಂದರು.


    ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಸ್ವಾಮಿನಾಥನ್ ವರದಿ ಅನ್ವಯ ಕೃಷಿ ಉತ್ಪನ್ನಗಳಿಗೆ ಬೆಲೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮುಂದೆ ಪ್ರಮಾಣ ಪತ್ರ ಸಲ್ಲಿಸುವುದರ ಮೂಲಕ ಮಾತಿಗೆ ತಪ್ಪಿ ರೈತ ಸಮುದಾಯಕ್ಕೆ ಮೋಸ ಮಾಡಿದರು. ರೈತರ ಆದಾಯ ದುಪ್ಪಟ್ಟುಗೊಳಿಸುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಕೃಷಿ ವೆಚ್ಚವನ್ನು ದುಪ್ಪಟ್ಟುಗೊಳಿಸಿ ರೈತರಿಗೆ ವಂಚನೆ ಮಾಡಿದರು ಎಂದು ದೂರಿದರು.
    ಇದೇ ಸಂದರ್ಭದಲ್ಲಿ ರಾಜ್ಯ ಗೌರವ ಅಧ್ಯಕ್ಷ ಚಾಮರಸ ಪಾಟೀಲ್, ದಸಂಸ ರಾಜ್ಯ ಸಂಚಾಲಕರಾದ ವಿ.ನಾಗರಾಜು, ಗುರುಪ್ರಸಾದ್ ಕೆರೆಗೋಡು, ಇಂದೂಧರ ಹೊನ್ನಾಪುರ ಮಾತನಾಡಿದರು.


    ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ, ಜಿಲ್ಲಾ ಅಧ್ಯಕ್ಷ ಹೊಸೂರು ಕುಮಾರ್, ತಾಲೂಕು ಅಧ್ಯಕ್ಷ ಮಹಾದೇವನಾಯಕ, ಟೌನ್ ಅಧ್ಯಕ್ಷ ಹೋಟೆಲ್ ಪ್ರಸಾದ್, ದಸಂಸ ಮುಖಂಡರಾದ ಆಲಗೂಡು ಶಿವಕುಮಾರ್, ಸಣ್ಣಕುಮಾರ್, ಕಾಳಪ್ಪಾಜಿ, ಆನಂದ, ಸಣ್ಣಸ್ವಾಮಿ, ಗೋವಿಂದ, ಮಹೇಶ್, ರೈತ ಸಂಘದ ಪಳನಿಸ್ವಾಮಿ, ಚನ್ನನಾಯಕ, ಶಿವಲಿಂಗಪ್ಪ, ದೇವಮ್ಮ, ರಾಜಕುಮಾರ, ಚಿಕ್ಕಬೋರೆಗೌಡ, ಶಿವಲಿಂಗಪ್ಪ, ನಂದೀಶ್, ಗೋವಿಂದೇಗೌಡ, ಚೌಡನಾಯಕ, ಮಾದಪುರ ಕುಮಾರಸ್ವಾಮಿ, ಅಂತರಸಂತೆ ಪುಟ್ಟಣ್ಣಯ್ಯ, ಚಿಕ್ಕೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts