More

    ನೀ ಕೊಡೆ ನಾ ಬಿಡೆ..! ಲಲಿತಾ ಕಲಾ ಅಕಾಡೆಮಿ, ಸೌಟ್ಸ್ , ಗೈಡ್ಸ್ ಮಧ್ಯೆ ಜಟಾಪಟಿ

    ಡಿ.ವಿ. ಕಮ್ಮಾರ, ಧಾರವಾಡ

    ಧಾರವಾಡದಲ್ಲಿರುವ ಬ್ರಿಟಿಷ್ ಕಾಲದ ಐತಿಹಾಸಿಕ ಕಟ್ಟಡವೊಂದನ್ನು ಪಡೆಯಲು ಕೇಂದ್ರ ಲಲಿತಾ ಕಲಾ ಅಕಾಡೆಮಿ ಹಾಗೂ ರಾಜ್ಯ ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮಧ್ಯೆ ಸ್ಪರ್ಧೆ ಶುರುವಾಗಿದೆ.

    ಸ್ಕೌಟ್ಸ್ ಸಂಸ್ಥೆಯವರು ಇದು ನಮ್ಮದೇ ಕಟ್ಟಡ, ನಾವು ನಿರ್ವಿುಸಿದ್ದು ನಮಗೆ ಇರಬೇಕು ಎಂದು ಹಠ ಹಿಡಿದಿದ್ದರೆ ಈಗಾಗಲೇ ಕಟ್ಟಡದ ಎದುರಿನ ಜಮೀನು ನಮಗೆ ಸಿಕ್ಕಿದೆ.

    ಈ ಕಟ್ಟಡವನ್ನೂ ಕೊಟ್ಟು ಬಿಡಿ ಎಂದು ಅಕಾಡೆಮಿಯು ಸರ್ಕಾರದ ಮುಂದೆ ಪ್ರಸ್ತಾಪ ಇಟ್ಟಿದೆ. ಹೀಗಾಗಿ ಇದೀಗ ಈ ಸಂಸ್ಥೆಗಳ ಮಧ್ಯೆ ‘ನೀ ಕೊಡೆ ನಾ ಬಿಡೆ’ ಸ್ಪರ್ಧೆಗೆ ಕಾರಣವಾಗಿದೆ.

    ಧಾರವಾಡದ ಕೋರ್ಟ್ ವೃತ್ತ ಬಳಿಯ ಸರ್ಕಾರದ ಜಾಗದಲ್ಲಿ (ಮೊದಲು ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಗುತ್ತಿಗೆಯಲ್ಲಿತ್ತು) ಕೇಂದ್ರ ಲಲಿತಾ ಕಲಾ ಅಕಾಡೆಮಿಯ ಪ್ರಾದೇಶಿಕ ಕಚೇರಿ ಬರುತ್ತಿದ್ದು, ಕಳೆದ ಫೆಬ್ರವರಿ 20ರಂದು ಶಂಕುಸ್ಥಾಪನೆಯೂ ಆಗಿದೆ.

    ಕಟ್ಟಡ ನಿರ್ವಣಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಇನ್ನಷ್ಟೇ ಆರಂಭವಾಗಬೇಕು. ಈ ಮಧ್ಯೆ ಇಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಸೇರಿದ ಐತಿಹಾಸಿಕ ಕಟ್ಟಡವನ್ನೂ ನಮಗೆ ಕೊಡಿ ಎಂದು ಅಕಾಡೆಮಿ ಹೊಸ ಪ್ರಸ್ತಾವನೆ ಮುಂದಿಟ್ಟಿದೆ. ಆದರೆ, ಈ ಕಟ್ಟಡವನ್ನು ನಮಗೆ ಬಿಟ್ಟು ಬಿಡಿ ಎಂದು ಸ್ಕೌಟ್ಸ್ ಸಂಸ್ಥೆ ಕೇಳಿಕೊಂಡಿದೆ.

    ಒಟ್ಟು 1 ಎಕರೆ 25 ಗುಂಟೆ ಸರ್ಕಾರಿ ಜಾಗ ಇದೆ. ಇದರಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಮೊದಲಿನಿಂದಲೂ ಗುತ್ತಿಗೆ ಆಧಾರದಲ್ಲಿ ನಡೆದುಕೊಂಡು ಬರುತ್ತಿತ್ತು. ಧಾರವಾಡಕ್ಕೆ ಲಲಿತ ಕಲಾ ಅಕಾಡೆಮಿ ಪ್ರಾದೇಶಿಕ ಕಚೇರಿ ಮಂಜೂರಿಯಾದಾಗ, ಜಾಗದ ಹುಡುಕಾಟ ನಡೆದಿತ್ತು. ಅದೇ ವೇಳೆಗೆ ಸ್ಕೌಟ್ಸ್ ಸಂಸ್ಥೆಯ ಈ ಜಾಗದ ಗುತ್ತಿಗೆ ಅವಧಿ ಮುಗಿದ ವಿಷಯ ಗೊತ್ತಾಗಿತ್ತು. ಹೀಗಾಗಿ, ಇಲ್ಲಿರುವ ಸ್ಕೌಟ್ಸ್ ಕಚೇರಿಯ ಬ್ರಿಟಿಷ್ ಕಾಲದ ಕಟ್ಟಡ ಎದುರಿನ 1 ಎಕರೆ 16 ಗುಂಟೆ ಜಾಗವನ್ನು ಸರ್ಕಾರ ಅಕಾಡೆಮಿಗೆ ನೀಡಿದೆ. ಜಾಗ ಹಸ್ತಾಂತರವಾದ ಬಳಿಕ ಶಂಕುಸ್ಥಾಪನೆಯೂ ನೆರವೇರಿತ್ತು.

    ಈಗ ಅಕಾಡೆಮಿಯೂ ತಮಗೆ ನೀಡಿರುವ ಜಾಗದ ಆಚೆಗೆ ಇರುವ ಬ್ರಿಟಿಷ್ ಕಾಲದ ಕಟ್ಟಡವನ್ನೂ ನೀಡುವಂತೆ ಕೇಳುತ್ತಿದೆ. ಸುಮಾರು 6 ಗುಂಟೆ ಜಾಗ ಸಹಿತ ಈ ಕಟ್ಟಡವನ್ನೂ ನಮಗೆ ಕೊಟ್ಟರೆ ಅದ್ಭುತವಾದ ಕಲಾ ಗ್ಯಾಲರಿ ಮಾಡುತ್ತೇವೆ. ಇದು ಧಾರವಾಡಕ್ಕೆ ಒಂದು ಹಿರಿಮೆ ಆಗುತ್ತದೆ. ಸಂಸ್ಥೆಯ ಗುತ್ತಿಗೆ ಅವಧಿ ಮುಗಿದಿರುವುದರಿಂದ ಅವರಿಂದ ಕಟ್ಟಡ ಬಿಡಿಸಿಕೊಂಡು ನಮಗೆ ಕೊಡಿ ಎಂದು ಅಕಾಡೆಮಿ ಹೇಳಿದೆ. ಆದರೆ, ಈ ಕಟ್ಟಡವನ್ನು ಉಳಿಸಿಕೊಳ್ಳುವುದಕ್ಕೆ ಸ್ಕೌಟ್ಸ್ ಸಂಸ್ಥೆಯೂ ಹೋರಾಟ ಆರಂಭಿಸಿದೆ. ಇತ್ತೀಚೆಗೆ ಧಾರವಾಡಕ್ಕೆ ಬಂದಿದ್ದ ಸ್ಕೌಟ್ಸ್ ಆಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ಅವರು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಈ ಕಟ್ಟಡ ಉಳಿಸಿಕೊಡಿ ಎಂದು ಸಚಿವರಲ್ಲಿ ಸಿಂಧ್ಯಾ ಕೇಳಿಕೊಂಡಿದ್ದಾರೆ.

    ತಮ್ಮ ಗುತ್ತಿಗೆ ಅವಧಿ ಮುಗಿದರೂ ಕಟ್ಟಡವನ್ನು ಬಿಟ್ಟು ಕೊಡದಿರುವುದಕ್ಕೆ ಒಂದು ಕಾರಣವೂ ಇದೆ. ಇಡೀ ಕಟ್ಟಡ ಬ್ರಿಟಿಷ್ ಕಾಲದ ಐತಿಹಾಸಿಕ ವಿನ್ಯಾಸ ಹೊಂದಿದ್ದು, 1937ರಲ್ಲಿ ಸ್ಕೌಟ್ಸ್ ನವರೇ ನಿರ್ವಿುಸಿದ್ದಾರೆ. 1940ರಿಂದ ಸ್ಕೌಟ್ಸ್ ನ ಮುಖ್ಯ ಕಚೇರಿಯಾಗಿ ಕಾರ್ಯ ನಿರ್ವಹಿಸಿದೆ. 1940ರ ಮಾರ್ಚ್ 3ರಂದು ಮುರಾರ್ಜಿ ದೇಸಾಯಿ ಅವರಿಂದ ಉದ್ಘಾಟನೆಗೊಂಡ ಹಿನ್ನೆಲೆ ಇದೆ. ಇಂದಿನವರೆಗೂ ಅನೇಕ ಗಣ್ಯ ಮಾನ್ಯರು ಭೇಟಿ ನೀಡಿದ್ದಾರೆ. ಹೀಗಾಗಿ, ಕಚೇರಿ ಬಿಟ್ಟು ಕೊಡುವ ಮನಸ್ಸು ಮಾಡುತ್ತಿಲ್ಲ.

    ಈ ಜಾಗದ ಹೊರತಾಗಿ ದಡ್ಡಿ ಕಮಲಾಪುರದಲ್ಲಿ ಸ್ಕೌಟ್ಸ್ ಸಂಸ್ಥೆಗೆ ಸರ್ಕಾರ 20 ಎಕರೆ ಜಮೀನು ಗುತ್ತಿಗೆ ಮೇಲೆ ನೀಡಿದೆ. ಇದರ ಅವಧಿಯನ್ನು ಮುಂದುವರಿಸುವಂತೆ ಜಿಲ್ಲಾಡಳಿತಕ್ಕೆ ಕೋರಿಕೆ ಸಲ್ಲಿಸಲಾಗಿದೆ. ಈ ಜಮೀನಿನ ಅವಧಿ ಮುಂದುವರಿಯುವುದು ಬಹುತೇಕ ಖಚಿತ. ಐತಿಹಾಸಿಕ ಕಟ್ಟಡದ ಅವಧಿ ಮುಂದುವರಿಕೆ ಬಗ್ಗೆ ಜಿಲ್ಲಾಡಳಿತ ಯಾವುದೇ ನಿರ್ಧಾರ ತಿಳಿಸಿಲ್ಲ. ಸದ್ಯಕ್ಕೆ ಸ್ಕೌಟ್ಸ್ ಕಚೇರಿ ಇದೇ ಕಟ್ಟಡದಲ್ಲಿಯೇ ತಾತ್ಕಾಲಿಕವಾಗಿ ಮುಂದುವರಿದಿದೆ. ಹೀಗಾಗಿ, ಇಲ್ಲಿಯೇ ಮುಂದುವರಿಯಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ. ಈಗ ವಿಷಯ ರಾಜ್ಯ ಸರ್ಕಾರದ ಅಂಗಳಕ್ಕೆ ಹೋಗಿದ್ದು, ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಕಾದು ನೋಡಬೇಕಿದೆ.

    ನಾವು ಲಲಿತಾ ಕಲಾ ಅಕಾಡೆಮಿಗೆ ವಿರೋಧ ಮಾಡುತ್ತಿಲ್ಲ. ನಾವೂ ಉಳಿಯಬೇಕು. ಅವರೂ ಬರಬೇಕು. ಕಿತ್ತೂರು ಕರ್ನಾಟಕದಲ್ಲಿ ಸಂಸ್ಥೆ ಬೆಳೆಸಲು ಇಲ್ಲಿಯೇ ಕಚೇರಿ ಇರುವುದು ಸೂಕ್ತ. ಈ ಸಂಬಂಧ ಶೀಘ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುವೆ. – ಪಿಜಿಆರ್ ಸಿಂಧ್ಯಾ ರಾಜ್ಯ ಮುಖ್ಯ ಆಯುಕ್ತ, ಸ್ಕೌಟ್ಸ್, ಗೈಡ್ಸ್

    ಸ್ಕೌಟ್ಸ್ನವರ ಲೀಜ್ ಅವಧಿ ಮುಗಿದಿದೆ. ಹೀಗಾಗಿ ಆ ಕಟ್ಟಡ ನಮಗೆ ಕೊಡಿ ಎಂದು ಅಕಾಡೆಮಿಯವರು ಕೇಳುತ್ತಿದ್ದು, ಪರಿಶೀಲಿಸಲಾಗುವುದು. – ಗುರುದತ್ತ ಹೆಗಡೆ ಜಿಲ್ಲಾಧಿಕಾರಿ

    ನಮಗೆ ಈ ಕಟ್ಟಡವನ್ನು ಕೊಟ್ಟರೆ ಸುಸಜ್ಜಿತವಾದ ಗ್ಯಾಲರಿ ಮಾಡಬಹುದು. ಸ್ಕೌಟ್ಸ್ ಗುತ್ತಿಗೆ ಅವಧಿಯೂ ಮುಗಿದಿದೆ. ಹೀಗಾಗಿ, ಕಟ್ಟಡವನ್ನು ಧಾರವಾಡದ ಹಿರಿಮೆಯನ್ನಾಗಿ ರಕ್ಷಿಸಬೇಕಿದೆ. ಆ ಕೆಲಸವನ್ನು ಅಕಾಡೆಮಿ ಸಮರ್ಥವಾಗಿ ಮಾಡುತ್ತದೆ. – ಶ್ರೀನಿವಾಸ ಶಾಸ್ತ್ರಿ ಸಂಯೋಜಕ, ಲಲಿತಾ ಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts