More

    ಗ್ಯಾಸ್ ಸಿಲಿಂಡರ್ ಜತೆ ಪ್ರತಿಭಟನೆ

    ಶಿವಮೊಗ್ಗ: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಎಲ್​ಪಿಜಿ ದರ ಏರಿಕೆ ಮಾಡಿರá-ವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಗ್ಯಾಸ್ ಸಿಲಿಂಡರ್​ನೊಂದಿಗೆ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿಯಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ಹೊರೆಯಾಗುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಎರು ವಾರಗಳ ಹಿಂದೆ ಗೃಹಬಳಕೆ ಸಿಲಿಂಡರ್ ದರ ಹೆಚ್ಚಳ ಮಾಡಿತ್ತು. ಈಗ ಮತ್ತೊಮ್ಮೆ ದರ ಹೆಚ್ಚಳ ಮಾಡಿದೆ. ಈ ಮೂಲಕ ಕಳೆದ 15 ದಿನದಲ್ಲಿ 100 ರೂ. ಏರಿಕೆ ಮಾಡಿದೆ. ಇದರಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಜನರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ ಎಂದು ದೂರಿದರು.

    ಕರೊನಾದಿಂದ ಆರ್ಥಿಕ ಬಿಕ್ಕಟ್ಟು, ಹಣದುಬ್ಬರ ಹೆಚ್ಚಳದಿಂದ ಹೈರಾಣಾಗಿರುವ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ 12 ಗೃಹ ಬಳಕೆ ಎಲ್​ಪಿಜಿ ಸಿಲಿಂಡರ್​ಗೆ ನೀಡುತ್ತಿದ್ದ ಸಬ್ಸಿಡಿಯನ್ನೂ ಕಳೆದ 6 ತಿಂಗಳಿಂದ ನಿಲ್ಲಿಸಿದೆ. ಸಿಲಿಂಡರ್ ದರ ಮಾತ್ರ ಏರಿಕೆ ಮಾಡುತ್ತಲೇ ಇದೆ ಎಂದು ದೂರಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

    ಬಳಿಕ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ತಿಂಗಳ ಅವಧಿಯಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಭಾರಿ ಏರಿಕೆ ಕಂಡಿದೆ. ಇದರಿಂದ ವಾಹನ ಸವಾರರಿಗೆ ಮತ್ತು ಮಾಲೀಕರಿಗೆ ಬಿಸಿ ತಟ್ಟಿದೆ. ಆದರೂ ನಿತ್ಯ ದರ ಏರುಗತಿಯಲ್ಲಿ ಸಾಗಿದೆ. ಸತತವಾಗಿ ಏರಿಕೆಯಾಗುತ್ತಿರುವುದರಿಂದ ರೈತರು ಸೇರಿ ಬಡ ಮಧ್ಯಮ ವರ್ಗದ ಜನರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿ ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಎಂಎಲ್​ಸಿ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಪಾಲಿಕೆ ಪ್ರತಿಪಕ್ಷ ನಾಯಕ ಎಚ್.ಸಿ.ಯೋಗೀಶ್, ಸದಸ್ಯರಾದ ಆರ್.ಸಿ.ನಾಯ್ಕ, ರೇಖಾ ರಂಗನಾಥ್, ಮೆಹಖ್ ಷರೀಫ್, ಮಂಜುಳಾ ಶಿವಣ್ಣ, ಯಮುನಾ ರಂಗೇಗೌಡ, ಮುಖಂಡರಾದ ವೈ.ಎಚ್.ನಾಗರಾಜ್, ಎಲ್.ರಾಮೇಗೌಡ, ಸೈಯದ್ ವಾಹಿದ್, ಮುಕ್ತಿಯಾರ್ ಅಹಮ್ಮದ್, ನಯಾಜ್ ಅಹಮ್ಮದ್, ಇಕ್ಕೇರಿ ರಮೇಶ್, ಯು.ಶಿವಾನಂದ, ಚಂದನ್, ಸುವರ್ಣ ನಾಗರಾಜ್, ಸೌಗಂಧಿಕ, ಎಚ್.ಪಿ.ಗಿರೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಅಪ್ರಾಪ್ತೆ ಅತ್ಯಾಚಾರಿಗಳಿಗೆ ಶಿಕ್ಷೆ ಆಗಲಿ: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿ ಸ್ನೇಹಿತರೊಂದಿಗೆ ಸೇರಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಖಂಡನೀಯ. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಸಂತ್ರಸ್ತೆಗೆ ಪರಿಹಾರ ನೀಡಬೇಕು. ಸೂಕ್ತ ತನಿಖೆ ನಡೆಸಬೇಕು. ಹೆಣ್ಣುಮಕ್ಕಳಿಗೆ ರಕ್ಷಣೆ ಒದಗಿಸಬೇಕು. ಘಟನೆ ಮರುಕಳಿಸದಂತೆ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ನಗರದಲ್ಲಿ ಸಣ್ಣ ಘಟನೆಗೆ ಹಲವು ದಿನ ನಿಷೇಧಾಜ್ಞೆ ಜಾರಿ ಮಾಡಿ ಜನಸಾಮಾನ್ಯರ ಜೀವನಕ್ಕೆ ಅಡ್ಡಿಯಾಗುವ ಬಿಜೆಪಿ ನಾಯಕರು ಸಾಮೂಹಿಕ ಅತ್ಯಾಚಾರದಂತಹ ಪ್ರಕರಣ ನಡೆದಾಗ ಚಕಾರ ಎತ್ತಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts