More

    ಕಲಾವಿದರು ಔಚಿತ್ಯ ಅರಿತು ಪಾತ್ರ ನಿರ್ವಹಿಸಲಿ

    ವಿಜಯವಾಣಿ ಸುದ್ದಿಜಾಲ ಹೊನ್ನಾವರ

    ಯಕ್ಷಗಾನ ರಂಗದಲ್ಲಿ ಕಲಾವಿದರು ಪಾತ್ರದ ಔಚಿತ್ಯ, ಹಿನ್ನೆಲೆ, ಶ್ರೇಷ್ಠತೆ, ಗುಣ ಗೌರವವನ್ನು ಅರಿತು ನಿರ್ವಹಿಸಬೇಕು. ವ್ಯವಹಾರಿಕ ರೂಪವನ್ನು ಯಕ್ಷಗಾನಕ್ಕೆ ಕೊಡಬಾರದು, ಭಾವನಾತ್ಮಕವಾದ ಸಂಬಂಧವನ್ನು ರಂಗದಲ್ಲಿ ಇಟ್ಟುಕೊಳ್ಳಬೇಕು ಎಂದು ಹೊರನಾಡು ಕ್ಷೇತ್ರದ ಡಾ. ಭೀಮೇಶ್ವರ ಜೋಶಿ ಹೇಳಿದರು.

    ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಶನಿವಾರ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಮೂರನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯ, ಸಂಗೀತ, ನೃತ್ಯ ಕಲೆಯು ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದಿದೆ. ಬಣ್ಣ ಹಚ್ಚಿ ನಾಲ್ಕು ಹೆಜ್ಜೆ ಕುಣಿದರೆ ಸಾಲದು. ರಂಗದಲ್ಲಿ ಪಾತ್ರ ನಿರ್ವಹಿಸುವಾಗ ಪ್ರೇಕ್ಷಕರಿಂದ ಚಪ್ಪಾಳೆಯನ್ನು ಅಪೇಕ್ಷಿಸುವುದು ತಪ್ಪಲ್ಲ. ಆದರೆ, ಯಾವುದಕ್ಕೆ ಚಪ್ಪಾಳೆ ತಟ್ಟಿಸಿಕೊಳ್ಳಬೇಕು ಎಂಬ ಅರಿವು ಪಾತ್ರಧಾರಿಗೆ ಇರಬೇಕು ಎಂದರು.

    ಯಕ್ಷಗಾನ ಕಲಾವಿದ ಕೃಷ್ಣ ಗಾಣಿಗ, ರಾಷ್ಟ್ರ ಪ್ರಶಸ್ತಿ ಪುರಸ್ಕೃ ಮೂಡಲಪಾಯ ಯಕ್ಷಗಾನ ಕಲಾವಿದ ಎ.ಎಸ್. ನಂಜಪ್ಪ, ಯಕ್ಷಗಾನ ಕಲಾವಿದ ಎಂ. ಕೆ. ರಮೇಶ ಆಚಾರ್ಯ ಮತ್ತು ಮೈಸೂರಿನ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್ ಅವರನ್ನು ಸನ್ಮಾನಿಸಲಾಯಿತು.

    ಯಕ್ಷಗಾನ ವಿದ್ವಾಂಸ ಡಾ. ವಸಂತ ಭಾರಧ್ವಾಜ್ ಮಾತನಾಡಿ, ಕೆಲವು ಪಾತ್ರಗಳನ್ನು ಮಾಡಿ ಯಕ್ಷಗಾನದ ನಂಟನ್ನು ಆರಂಭಿಸಿದ ನನಗೆ ಆ ಬಂಧದಿಂದಲೇ ಯಕ್ಷಗಾನ ಛಂದಸ್ಸು, ಸಂಶೋಧನೆ ಮತ್ತು ಪ್ರಸಂಗ ಬರೆಯುವಿಕೆ ಆರಂಭವಾಯಿತು ಎಂದರು.

    ಎಂ. ಕೆ. ಭಾಸ್ಕರ ರಾವ್, ಡಾ. ವಿ. ಜಯರಾಜನ್, ಅಸ್ಸಾಂನ ಪ್ರಂಜಲ್ ಸೈಕಿಯಾ, ಗಣಪಯ್ಯ ಗೌಡ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಾಟ್ಯೋತ್ಸವದ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕೆರೆಮನೆ ಶಿವಾನಂದ ಹೆಗಡೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts