More

    ನಂಜಾಪುರ ಸರ್ಕಾರಿ ಶಾಲೆ ಪುನಾರಂಭ

    ಧರ್ಮಾಪುರ: ಹುಣಸೂರು ತಾಲೂಕಿನ ಕರಿಮದ್ದನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ನಂಜಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಹಾತ್ಮ ಗಾಂಧೀಜಿ ಅವರ ಜನ್ಮ ದಿನದಂದು ಪುನಾರಂಭಗೊಂಡಿದೆ.

    ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿ ಪಾಲಕರು ತಮ್ಮ ಮಕ್ಕಳನ್ನು ದೂರದ ಕಾನ್ವೆಂಟ್‌ಗೆ ದಾಖಲಿಸಿದ್ದರು. ಪರಿಣಾಮ ನಂಜಾಪುರ ಶಾಲೆಯ ಮಕ್ಕಳ ಸಂಖ್ಯೆ 1ಕ್ಕೆ ಕುಸಿದು, ದಾಖಲಾತಿ ಇಲ್ಲದೆ ಶಾಲೆ ಮುಚ್ಚಲಾಗಿತ್ತು.

    ಪಾಲಕರ ಮನವೊಲಿಕೆ:ತಾಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿ ರೇವಣ್ಣ ಗ್ರಾಮದವರ ಜತೆ ಮೂರು ಬಾರಿ ಸಭೆ ಮಾಡಿದ ಬಳಿಕ ಗ್ರಾಮದ ಪ್ರಮುಖರು ಮಕ್ಕಳನ್ನು ಶಾಲೆಗೆ ಸೇರಿಸಿ ತಮ್ಮೂರಿನ ಶಾಲೆ ಮತ್ತೆ ಪ್ರಾರಂಭಿಸುವ ಜವಾಬ್ದಾರಿ ಹೊತ್ತು ಪಾಲಕರ ಮನೆಮನೆಗೆ ತೆರಳಿ ನಮ್ಮ ಮನವೊಲಿಸಿದರು. ಪರಿಣಾಮ 1ರಿಂದ 5ನೇ 4 ವಿದ್ಯಾರ್ಥಿಗಳು ದಾಖಲಾದರು. ಶಿಕ್ಷಣ ಇಲಾಖೆ ಶಾಲೆ ಆರಂಭಕ್ಕೆ ಹಸಿರು ನಿಶಾನೆ ತೋರಿತು. ಹಾಗಾಗಿ, ಗ್ರಾಮಸ್ಥರ ಸಹಕಾರದೊಂದಿಗೆ ಸೋಮವಾರ ಶಾಲೆ ಪುನಾರಂಭವಾಗಿದ್ದು, ಶಾಲೆಯಲ್ಲಿ ಮಕ್ಕಳ ಕಲರವ ಶುರುವಾಗಿದೆ.

    ಶಾಲಾ ಪ್ರಾರಂಭೋತ್ಸವ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ ಮಾತನಾಡಿ, ಗ್ರಾಮಸ್ಥರು, ಪಾಲಕರಿಗೆ ಮನವರಿಕೆ ಮಾಡಿದ ಫಲವಾಗಿ ಶಾಲೆ ಆರಂಭವಾಗಿದೆ. ಇದೇ ರೀತಿ ತಾಲೂಕಿನಲ್ಲಿ ಮುಚ್ಚಿರುವ ಶಾಲೆಗಳನ್ನು ಪುನಾರಂಭಿಸಲು ಶ್ರಮಿಸುತ್ತೇವೆ. ಈಗಾಗಲೇ ಮುಚ್ಚಿದ್ದ 4 ಶಾಲೆಗಳಲ್ಲಿ ಶಾಂತಿಪುರ, ನಂಜಾಪುರ, ಕುಡಿನೀರು ಮುದ್ದನಹಳ್ಳಿ ಮೂರು ಶಾಲೆಗಳನ್ನು ಪುನಾರಂಭಿಸಲಾಗಿದೆ. ಕಿರಸೊಡ್ಲು ಒಂದೇ ಒಂದು ಶಾಲೆ ಬಾಕಿ ಇದ್ದು, ಅದನ್ನೂ ಬೇಗ ಪ್ರಾರಂಭಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಿಡಿಒ ನವೀನ್ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯರ ಜತೆ ಚರ್ಚಿಸಿ ಶಾಲೆಗೆ ಮೂಲಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು.
    ಗ್ರಾ.ಪಂ.ಅಧ್ಯಕ್ಷೆ ಮುಬಾರಕ್ ಬಾನು, ಉಪಾಧ್ಯಕ್ಷೆ ಪದ್ಮಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ಮನುಕುಮಾರ್, ಶೋಭಾ, ರಾಮಬೋವಿ, ಸಿಆರ್‌ಪಿ ಶಿವಪ್ಪ, ಗ್ರಾಮದ ಯಾಜಮಾನರಾದ ಶಿವಕುಮಾರ್, ಚಂದ್ರಶೆಟ್ಟಿ, ಮಂಜುರಾವ್ ಕದಂ, ಅಂಗನವಾಡಿ ಶಿಕ್ಷಕಿ ಅನ್ನಪೂರ್ಣ, ಶಿಕ್ಷಕರಾದ ರಾಮಚಂದ್ರ, ಭಾಗ್ಯಾ, ಗ್ರಂಥಾಲಯ ಮೇಲ್ವಿಚಾರಕಿ ಸುನೀತಾ, ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts