More

    ಗ್ರಾಪಂನಿಂದ ಪಾರ್ಲಿಮೆಂಟ್ ತನಕ ಬಿಜೆಪಿ

    ಗೋಕರ್ಣ: ಭಾರತೀಯ ಜನತಾ ಪಕ್ಷ ಇಂದು ತನ್ನ ಐತಿಹಾಸಿಕ ಸುವರ್ಣ ಯುಗದ ಮಹಾಪರ್ವದಲ್ಲಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯ ಆಳ್ವಿಕೆಯಿದೆ. ಇಂತಹ ಸಮಯವನ್ನು ಪಕ್ಷದ ನಾಯಕರುಗಳು ಮತ್ತು ಕಾರ್ಯಕರ್ತರು ಸದುಪಯೋಗ ಪಡಿಸಿಕೊಂಡು ತಳಮಟ್ಟದ ಪಂಚಾಯಿತಿ ವ್ಯವಸ್ಥೆಯಿಂದ ಪಾರ್ಲಿಮೆಂಟಿನ ತನಕ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗುವಂತೆ ಶ್ರಮಿಸಿ ರಾಜ್ಯದ ಶೇ. 80 ಗ್ರಾಪಂಗಳು ಪಕ್ಷದ ವಶವಾಗುವಂತೆ ನೋಡಿಕೊಳ್ಳಬೇಕು ಎಂದು ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ ಕಟೀಲ್ ಹೇಳಿದರು.

    ಇಲ್ಲಿನ ಮಹಾದೇವ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಮಹಾಶಕ್ತಿಕೇಂದ್ರದ ಸಭೆಯಲ್ಲಿ ಅವರು ಮಾತನಾಡಿದರು. ಒಂದು ಕಾಲದಲ್ಲಿ ಬಿಜೆಪಿ ಪಕ್ಷದ ಪೋಸ್ಟರ್ ಅಂಟಿಸುವವರು, ಬೂತ್​ನಲ್ಲಿ ಕೂರುವವರನ್ನು ಹುಡುಕಾಡಬೇಕಾದ ಪರಿಸ್ಥಿತಿಯಿತ್ತು. ಪಕ್ಷದ ಸಿದ್ಧಾಂತವಾದಿ ನಾಯಕರು ಮತ್ತು ನಿಷ್ಠಾವಂತ ಕಾರ್ಯಕರ್ತರಿಂದಾಗಿ ಇಂದು ದೇಶದ ಎಲ್ಲೆಡೆ ಬಿಜೆಪಿ ವಿಜೃಂಭಿಸುತ್ತಿದೆ. ಆದರೆ ಎಲ್ಲೆಡೆ ನಾವು ಆಳುತ್ತಿದ್ದೇವೆ ಎಂಬ ಹಮ್ಮಿನಿಂದ ಪಕ್ಷದ ಕಾರ್ಯಕರ್ತರು ಎಂದಿಗೂ ಮೈಮರೆಯಬಾರದು. ಹಾಗೆ ಮೈಮರೆತರೆ ಏನಾಗುತ್ತದೆ ಎನ್ನುವುದಕ್ಕೆ ದೇಶದಲ್ಲಿ ಇಂದು ಮೂಲೆಗೆ ಸೇರಿರುವ ಕಾಂಗ್ರೆಸ್ ಪಕ್ಷ ಸಾಕ್ಷಿಯಾಗಿದೆ. ತಳಮಟ್ಟದಲ್ಲಿ ಮತದಾರರ ಮುಂದೆ ಹೋಗಿ ಮತ ಕೇಳುವ ಶಕ್ತಿ ಕಾಂಗ್ರೆಸ್ಸಿಗಿಲ್ಲ. ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಯ ವಿವಿಧ ಯೋಜನೆಗಳ ಮೂಲಕ ಪಂಚಾಯಿತಿ ಚುನಾವಣೆಗೆ ಬಿಜೆಪಿ ಪಕ್ಷಕ್ಕೆ ಮಹಾಶಕ್ತಿ ನೀಡಿದೆ. ಕೇಂದ್ರ ಸರ್ಕಾರ ಗ್ರಾಮ ಪಂಚಾಯಿತಿಗಳ ಅನುದಾನವನ್ನು ಒಂದೂವರೆ ಕೋಟಿಗೆ ಹೆಚ್ಚಿಸಿದೆ. ಉದ್ಯೋಗ ಖಾತ್ರಿ, ಕುಡಿಯುವ ನೀರು ಮತ್ತು ನಮ್ಮೂರು ನಮ್ಮ ರಸ್ತೆ ಯೋಜನೆ ಮೂಲಕ ರಸ್ತೆ ನಿರ್ವಹಣೆಯನ್ನು ಜಿಲ್ಲಾ ಪಂಚಾಯಿತಿಯಿಂದ ತಪ್ಪಿಸಿ ನೇರವಾಗಿ ಪಂಚಾಯಿತಿಗಳ ಕೈಗೆ ನೀಡಲಾಗಿದೆ. ಇವುಗಳ ಮೂಲಕ ಮತದಾರರನ್ನು ಮುಟ್ಟುವ ಕೆಲಸವಾಗಬೇಕು. ನರೇಂದ್ರ ಮೋದಿಯವರ ಜಗದ್ವಂದ್ಯ ಭಾರತ, ಭ್ರಷ್ಟಾಚಾರ ಮುಕ್ತ ಭಾರತ ಮತ್ತು ಸಬ್ ಕಾ ಸಾಥ್-ಸಬ್ ಕಾ ವಿಕಾಸ ಪರಿಕಲ್ಪನೆಗಳನ್ನು ಸಮರ್ಥವಾಗಿ ಈ ಚುನಾವಣೆಯಲ್ಲಿ ಬಳಸಿಕೊಂಡು ಮತದಾರರ ಮನವೊಲಿಸುವ ಕಾರ್ಯಕ್ಕೆ ಮುಂದಾಗುವಂತೆ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

    ಮಹಾಶಕ್ತಿ ಕೇಂದ್ರದ ವತಿಯಿಂದ ನಳಿನ್​ಕುಮಾರ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಈಭಾಗದ ವಿವಿಧ ಪ್ರಮುಖರು ಪಕ್ಷಕ್ಕೆ ಸೇರ್ಪಡೆಯಾದರು. ಅರ್ಬನ್ ಬ್ಯಾಂಕ್ ಅಧ್ಯಕ್ಷ ಮೋಹನ ನಾಯಕ, ತಾಪಂ ಸದಸ್ಯ ರಾಜೇಶ ನಾಯಕ, ಮೀನುಗಾರ ಸಮಾಜದ ನಾಗರಾಜ ತಾಂಡೇಲ, ಗುತ್ತಿಗೆದಾರ ಪ್ರಭಾಕರ ಪ್ರಸಾದ ಅವರಿಗೆ ಪಕ್ಷದ ಧ್ವಜ ನೀಡಿ ಬರಮಾಡಿಕೊಳ್ಳಲಾಯಿತು. ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ, ವಿಭಾಗ ಪ್ರಭಾರಿ ವಿನೋದ ಪ್ರಭು, ಉದಯಕುಮಾರ ಶೆಟ್ಟಿ, ಕಾರ್ಯಕಾರಿ ಸದಸ್ಯ ಕೆ.ಜಿ. ನಾಯ್ಕ, ಮಾಜಿ ಶಾಸಕ ಸುನೀಲ ಹೆಗಡೆ, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ನಿಕಟಪೂರ್ವ ಮಂಡಲಾಧ್ಯಕ್ಷ ಕುಮಾರ ಮಾರ್ಕಾಂಡೆ, ಚುನಾವಣಾ ಸಂಚಾಲಕ ನಾಗರಾಜ ನಾಯಕ ತೊರ್ಕೆ, ಗೋಕರ್ಣ ಶಕ್ತಿ ಕೇಂದ್ರ ಅಧ್ಯಕ್ಷ ಚಂದ್ರಶೇಖರ ನಾಯ್ಕ, ಎಪಿಎಂಸಿ ಅಧ್ಯಕ್ಷ ರಮೇಶ ಪ್ರಸಾದ ವೇದಿಕೆಯಲ್ಲಿದ್ದರು. ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಪ್ರಸ್ತಾಪಿಸಿದರು. ವಿನಾಯಕ ನಾಯ್ಕ ಮತ್ತು ಜಿ.ಐ. ಹೆಗಡೆ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts