More

    ಕ್ಷೇತ್ರದಲ್ಲಿ ಮೀನು ಉದ್ಯಮಕ್ಕೆ ಉತ್ತೇಜನ

    ನಾಲತವಾಡ: ಮುದ್ದೇಬಿಹಾಳ ಕ್ಷೇತ್ರದಲ್ಲಿ ಮುಂದಿನ 5 ವರ್ಷಗಳಲ್ಲಿ ಮೀನು ಉದ್ಯಮಕ್ಕೆ ಉತ್ತೇಜನ ನೀಡುವ ಗುರಿ ಇದೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
    ಸಮೀಪದ ನಾರಾಯಣಪುರ ಅಣೆಕಟ್ಟು ಪಕ್ಕದಲ್ಲಿರುವ ಪ್ರಾದೇಶಿಕ ಮೀನುಮರಿ ಉತ್ಪಾದನೆ ಮತ್ತು ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
    ನಮ್ಮ ಕ್ಷೇತ್ರದಲ್ಲಿ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದ ನೀರಿದೆ. ಸಾಕಷ್ಟು ಭೂಮಿ ಸವಳು-ಜವಳು ಇದೆ. ಅದರಲ್ಲಿ ಮೀನು ಉದ್ಯಮ ಮಾಡಿದರೆ ಸಾಕಷ್ಟು ಆದಾಯ ಗಳಿಸಬಹುದು. ಒಂದು ಎಕರೆ ಪ್ರದೇಶದಲ್ಲಿ 4 ರಿಂದ 25 ಲಕ್ಷ ರೂ.ವರೆಗೆ ಆದಾಯ ಗಳಿಸಬಹುದಾಗಿದೆ. ಆದರೆ, ಅದರ ಬಗ್ಗೆ ಜಾಗೃತಿ ಇಲ್ಲದ ಕಾರಣ ಈ ಉದ್ಯಮ ಮಾಡಲು ಯಾರೂ ಮುಂದಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಮೀನು ಉದ್ಯಮದ ಬಗ್ಗೆ ಸಮರ್ಪಕ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
    ನಾರಾಯಣಪುರ ಪ್ರಾದೇಶಿಕ ಮೀನುಮರಿ ಉತ್ಪಾದನೆ ಕೇಂದ್ರ ಕರ್ನಾಟಕದಲ್ಲೇ ಎರಡನೇ ಅತಿ ದೊಡ್ಡ ಪಾರ್ಮ್ ಆಗಿದೆ. ಅದರ ಒಟ್ಟು ವಿಸ್ತೀರ್ಣ 73 ಎಕರೆ ಪ್ರದೇಶವಿದ್ದು, ಅದರಲ್ಲಿ ಒಟ್ಟು 504 ಹೊಂಡಗಳಿದ್ದು, ಸದ್ಯ 175 ಹೊಂಡಗಳಲ್ಲಿ ಮಾತ್ರ ಮೀನು ಪಾಲನೆ ನಡೆಯುತ್ತಿದೆ. ಇದರಿಂದ ಮೀನು ಉದ್ಯಮ ಕುಂಠಿತವಾಗಿದೆ. ಅಗತ್ಯ ಬೇಡಿಕೆಯಿಂದ ಮೀನುಮರಿ ಸಿಗದ ಕಾರಣ ಪಾಲನಾ ಕೇಂದ್ರ ಹಿಂದೆ ಉಳಿದಿದೆ. ಆದರೆ, ಇನ್ನು ಮುಂದೆ ಹೀಗಾಗುವುದಿಲ್ಲ. ಮೀನುಗಾರಿಕೆ ಸಚಿವರು ಹಾಗೂ ಡೈರೆಕ್ಟರ್ ಜತೆ ಪಾಲನೆ ಕೇಂದ್ರದ ಬಗ್ಗೆ ಚರ್ಚಿಸಿದ್ದೇನೆ. 6.35 ಕೋಟಿ ರೂ. ಅನುದಾನದಲ್ಲಿ ಅದರ ಉನ್ನತೀಕರಣಕ್ಕೆ ಮಂಜೂರು ಮಾಡಿಸಿದ್ದೇನೆ. ಕೂಡಲೇ ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.
    ಏಪ್ರಿಲ್‌ದಿಂದ ಜೂನ್ ತಿಂಗಳಲ್ಲಿ ಮೀನುಮರಿ ಪಾಲನೆ ಮಾಡಿದರೆ ಮೀನು ಉದ್ಯಮ ಲಾಭದಾಯವಾಗುತ್ತದೆ. ಈ ಪಾಲನೆ ಕೇಂದ್ರಕ್ಕೆ ಜಲಾಶಯದಿಂದ ನೀರಿನ ಕೊರತೆ ಇರುವ ಕಾರಣ ಮೀನು ಪಾಲನೆ ಕೇಂದ್ರದಲ್ಲಿ ಬೇಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮೀನುಮರಿಗಳು ದೊರಕುತ್ತಿವೆ. ಆ ನಿಟ್ಟಿನಲ್ಲಿ ನಾರಾಯಣಪುರ ಅಣೆಕಟ್ಟು ಸಿಇ ಜತೆಗೆ ಮಾತನಾಡಿದ್ದು, ಪಾಲನಾ ಕೇಂದ್ರದಲ್ಲಿ 24 ತಿಂಗಳು ನೀರು ಪೂರೈಸುವ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಮೀನುಮರಿ ಪಾಲನಾ ಕೇಂದ್ರವನ್ನು ತರಬೇತಿ ಕೇಂದ್ರವನ್ನಾಗಿಸಲು ಮೀನುಗಾರಿಕೆ ಮೇಲಧಿಕಾರಿಗಳ ಜತೆಗೂ ಮಾತನಾಡಿದ್ದೇನೆ. ಶೀಘ್ರ ಪಾಲನಾ ಕೇಂದ್ರವನ್ನು ಕರ್ನಾಟಕ ದೊಡ್ಡ ಪಾಲನಾ ಕೇಂದ್ರವನ್ನಾಗಿ ಪರಿವರ್ತಿಸುವ ಕನಸು ಇದೆ. ಆ ನಿಟ್ಟಿನಲ್ಲಿ ಅದಕ್ಕೆ ಎಲ್ಲ ರೀತಿಯ ಸೌಕರ್ಯ ನೀಡಲು ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದರು.
    ನಂತರ ಮೀನುಮರಿ ಪಾಲನಾ ಕೇಂದ್ರ ವೀಕ್ಷಿಸಿ ನಾರಾಯಣಪುರ ಜಲಾಶಯಕ್ಕೆ ಭೇಟಿ ನೀಡಿದರು. ಅಲ್ಲದೆ, ಸಿಇ ಎಸ್. ರಂಗಾರಾವ್‌ಗೆ ಅವರಿಗೆ 24 ತಿಂಗಳು ಮೀನು ಪಾಲನಾ ಕೇಂದ್ರಕ್ಕೆ ನೀರು ಪೂರೈಸುವ ವ್ಯವಸ್ಥೆ ಮಾಡಿ ಎಂದು ತಿಳಿಸಿದರು.
    ಬೆಳಗಾವಿ ಮೀನುಗಾರಿಕೆ ಪ್ರಭಾರ ಉಪನಿರ್ದೇಶಕ ಎಸ್.ವಿ. ಕುಲಕರ್ಣಿ, ಕೆಬಿಜೆಎನ್‌ಎಲ್ ಎಇಇ ಆರ್.ಎಲ್. ಹಳ್ಳೂರ, ಮೀನುಗಾರಿಕೆ ತಾಲೂಕು ನಿರ್ದೇಶಕ ಎಸ್.ವಿ. ಲಮಾಣಿ, ಪಾಲನಾ ಕೇಂದ್ರದ ಸಹಾಯಕ ನಿರ್ದೇಶಕ ಶರಣಗೌಡ ಬಿರಾದಾರ, ಬಿಜೆಪಿ ಮುಖಂಡ ಬಸವರಾಜ ಡೆರೇದ, ಮುತ್ತು ಅಂಗಡಿ, ನಾಲತವಾಡ ಪಪಂ ಸದಸ್ಯ ಭೀಮಣ್ಣ ಗುರಿಕಾರ, ಗುರುನಾಥ ಡಿಗ್ಗಿ, ಸಿದ್ದಪ್ಪ ಚಲವಾದಿ, ಕಾಂತು ಹಿರೇಮಠ, ಹಣಮಂತ ಚಲವಾದಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts